ಹಿಜಾಬ್ ಪ್ರಕರಣ: ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ ತೆಗೆಯುವುದೂ ಮೂಲಭೂತ ಹಕ್ಕಾಗುತ್ತದೆಯಲ್ಲವೇ-ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತು ಹೈಕೋರ್ಟ್‌ ಆದೇಶದ ವಿರುದ್ಧದ ಮೇಲ್ಮನವಿ ವಿಚಾರಣೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂವಿಧಾನದ 19ನೇ ವಿಧಿಯಡಿ ಉಡುಗೆ- ತೊಡುಗೆಯನ್ನು ಸಂಪೂರ್ಣ ಮೂಲಭೂತ ಹಕ್ಕು ಎಂದು ಹೇಳಿದರೆ, ಬಟ್ಟೆ ತೆಗೆಯುವುದು ಕೂಡ ಹಕ್ಕಾಗುವ ಅರ್ಹತೆ ಪಡೆಯುತ್ತದೆಯಲ್ಲವೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಅರ್ಜಿದಾರರನ್ನು ಪ್ರಶ್ನಿಸಿದೆ.
ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ ಸಂವಿಧಾನದ 19ನೇ ವಿಧಿ ಪ್ರಕಾರ ಬಟ್ಟೆ ಧರಿಸುವ ಹಕ್ಕನ್ನು ತರ್ಕಬದ್ಧವಲ್ಲದ ವಿಪರೀತಕ್ಕೆ ಕೊಂಡೊಯ್ಯಬಹುದಲ್ಲವೇ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದೇವದತ್‌ ಕಾಮತ್‌ ಅವರನ್ನು ಪ್ರಶ್ನಿಸಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಸಂವಿಧಾನದ 19(1) (ಎ) ಅಡಿಯಲ್ಲಿ ಉಡುಗೆ ತೊಡುಗೆಯ ಹಕ್ಕನ್ನು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ನ 2014ರಲ್ಲಿ ಎನ್‌ಎಎಲ್‌ಎಸ್‌ಎ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಕಾಮತ್ ಉಲ್ಲೇಖಿಸಿದ ನಂತರ ನ್ಯಾಯಾಲಯ ಹೀಗೆ ಹೇಳಿತು.
ನಾವು ಇದನ್ನು ತರ್ಕಬದ್ಧವಲ್ಲದ ವಿಪರೀತಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ನೀವು ಬಟ್ಟೆ ಧರಿಸುವ ಹಕ್ಕು ಮೂಲಭೂತ ಹಕ್ಕು ಎಂದು ಹೇಳಿದರೆ ಬಟ್ಟೆ ಬಿಚ್ಚುವ ಹಕ್ಕು ಕೂಡ ಮೂಲಭೂತ ಹಕ್ಕಾಗುತ್ತದೆ” ಎಂದು ನ್ಯಾ. ಗುಪ್ತಾ ಹೇಳಿದರು.

ಆಗ ಕಾಮತ್‌ ಅವರು ಶಾಲೆಯಲ್ಲಿ ಯಾರೂ ಬಟ್ಟೆ ತೆಗೆಯುವುದಿಲ್ಲ. ನಾನು ಒಂದು ಅಂಶವನ್ನು ಸಾಬೀತುಪಡಿಸಲು ಹೇಳುತ್ತಿರುವೆ ಎಂದು ಪ್ರತಿಕ್ರಿಯಿಸಿದರು. ಆಗ ಬಟ್ಟೆ ಧರಿಸುವ ಹಕ್ಕನ್ನು ಯಾರೂ ನಿರಾಕರಿಸುತ್ತಿಲ್ಲ” ಎಂದು ನ್ಯಾ. ಗುಪ್ತಾ ಹೇಳಿದರು.
“ಈ ಹೆಚ್ಚುವರಿ ಉಡುಪು (ಹಿಜಾಬ್) ಧರಿಸುವುದನ್ನು 19ನೇ ವಿಧಿಯ ಆಧಾರದ ಮೇಲೆ ನಿರ್ಬಂಧಿಸಬಹುದೇ” ಎಂದು ಕಾಮತ್ ಕೇಳಿದರು. ಹಿಜಾಬ್ ಯಾವುದೇ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸುವುದಿಲ್ಲ ಮತ್ತು ಯಾವುದೇ ನೈತಿಕತೆಗೆ ವಿರುದ್ಧವಾಗಿಲ್ಲ ಎಂದು ಸಮರ್ಥಿಸಿಕೊಂಡರು. ಯಾರೂ ಹುಡುಗಿಯರು ಅದನ್ನು ಧರಿಸುವಂತೆ ಒತ್ತಾಯಿಸುವುದಿಲ್ಲ, ಆದರೆ ಅವರು ಅದನ್ನು ಧರಿಸಿದರೆ ಸರ್ಕಾರ ಇದನ್ನು ನಿಷೇಧಿಸಬಹುದೇ ಎಂದು ದೇವದತ್ತ ಕಾಮತ್‌ ಪ್ರಶ್ನಿಸಿದರು.
ಆಗ ನ್ಯಾ. ಗುಪ್ತಾ “ಯಾರೂ ಅವರಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುತ್ತಿಲ್ಲ … ಆದರೆ ಶಾಲೆಯಲ್ಲಿ ಮಾತ್ರ ನಿಷೇಧಿಸಲಾಗಿದೆ ಎಂದರು.
ಅರ್ಜಿದಾಳಾದ ಆಯೇಷತ್‌ ಶಿಫಾ ಪರ ಹಾಜರಾದ ಹಿರಿಯ ನ್ಯಾಯವಾದಿ ದೇವದತ್‌ ಕಾಮತ್‌, “ಸಂವಿಧಾನದ 19, 21ನೇ ವಿಧಿಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಮಂಜಸ ಸೌಲಭ್ಯ ಒದಗಿಸುವ ಹೊಣೆ ಕುರಿತಂತೆ ರಾಜ್ಯ ಸರ್ಕಾರ ವಿಫಲವಾಗಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಈ ಪ್ರಕರಣ ಪ್ರಾಥಮಿಕವಾಗಿ ಒಳಗೊಂಡಿದೆ. ನಾನು ಸಮವಸ್ತ್ರದ ವಿಧಿಸುತ್ತಿರುವುದನ್ನು ಪ್ರಶ್ನಿಸುತ್ತಿಲ್ಲ” ಎಂದರು.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಗುಪ್ತಾ ಅವರು ಹಾಗಲ್ಲದೆ ಹೋದರೆ ಮತ್ತಿನೇನು ಎಂದು ಪ್ರಶ್ನಿಸಿದರು. ಹಿಜಾಬ್ ಎಂಬುದು ಬುರ್ಖಾ ಅಥವಾ ಜಿಲ್ಬಾಬ್ ಅಲ್ಲ ಎಂದು ಆಗ ಕಾಮತ್‌ ಸಮರ್ಥಿಸಿಕೊಂಡರು. ಜೊತೆಗೆ ಸಮಂಜಸ ಒಳಗೊಳ್ಳುವಿಕೆ ತತ್ವವನ್ನು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ಅಂಗೀಕರಿಸಿದೆ ಎನ್ನುತ್ತಾ ಬಿಜೋಯ್‌ ಇಮ್ಯಾನ್ಯುಯೆಲ್‌ ಪ್ರಕರಣ ಸೇರಿದಂತೆ ವಿವಿಧ ತೀರ್ಪುಗಳನ್ನು ಪೀಠದ ಮುಂದೆ ಉಲ್ಲೇಖಿಸಿದರು. ರಾಷ್ಟ್ರಗೀತೆ ಕುರಿತಾದ ಬಿಜೋಯ್‌ ಇಮ್ಯಾನ್ಯುಯಲ್‌ ಪ್ರಕರಣ ಹಾಗೂ ಹಿಜಾಬ್‌ ಪ್ರಕರಣ ಬೇರೆ ಎಂದು ನ್ಯಾ. ಧುಲಿಯಾ ಹೇಳಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಜಾಬ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ವಿಚಾರವನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಮಂಡಿಸಲಾಗಿತ್ತು. ಆಗ ಹೈಕೋರ್ಟ್‌ ರಾಜ್ಯ ಹಾಗೂ ಕೇಂದ್ರ ಭಿನ್ನ ಎಂದಿತ್ತು” ಎಂಬುದಾಗಿ ಹೇಳಿದರು.
ಅಲ್ಲದೆ ಶಾಲೆಯ ನಿಯಮಗಳಿಗೆ ವಿರುದ್ಧವಾಗಿ ತಮಿಳು ಹಿಂದೂ ಹುಡುಗಿಗೆ ಶಾಲೆಯಲ್ಲಿ ಮೂಗುತಿ ಧರಿಸಲು ಅನುಮತಿ ನೀಡಿದ ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ತೀರ್ಪನ್ನು ಕೂಡ ಅವರು ಓದಿದರು.

ದಕ್ಷಿಣ ಆಫ್ರಿಕಾದ ನ್ಯಾಯಾಲಯದ ಪರಿಕಲ್ಪನೆಯಲ್ಲಿ ಘನತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ನ್ಯಾ. ಧುಲಿಯಾ ಅವರು ಹೇಳಿದಾಗ ಕಾಮತ್‌ “ಪುಟ್ಟಸ್ವಾಮಿ ಮತ್ತಿತರ ಪ್ರಕರಣಗಳಲ್ಲಿ ಕೂಡ ನಮ್ಮ ಸುಪ್ರೀಂ ಕೋರ್ಟ್‌ ಇದನ್ನು ಒತ್ತಿ ಹೇಳಿದೆ” ಎಂದರು. ಈ ಹಂತದಲ್ಲಿ ನ್ಯಾ. ಧುಲಿಯಾ “ನಮ್ಮ ದೇಶದಷ್ಟು ವೈವಿಧ್ಯತೆ ಬೇರೆ ಯಾವುದೇ ದೇಶಗಳಲ್ಲಿ ಇಲ್ಲ ಎಂದು ಭಾವಿಸುತ್ತೇನೆ. ಬೇರೆ ದೇಶಗಳು ತಮ್ಮ ನಾಗರಿಕರಿಗೆ ಏಕರೂಪದ ಕಾನೂನು ವಿಧಿಸಿವೆ” ಎಂದರು. ಇದಕ್ಕೆ ಕಾಮತ್‌ ತಮ್ಮ ಸಮ್ಮತಿ ಸೂಚಿಸಿದರು.
ಜಾತ್ಯತೀತತೆ ಕುರಿತ ಅರುಣಾ ರಾಯ್‌ ಪ್ರಕರಣ, ಸಾಂವಿಧಾನಿಕ ದೃಷ್ಟಿಕೋನ ಅಂಬೇಡ್ಕರ್‌ ನಿಲುವುಗಳನ್ನು ಕೂಡ ನ್ಯಾಯಾಲಯದಲ್ಲಿ ಅವರು ಮಂಡಿಸಿದರು.
ಹಿಜಾಬ್‌ ನಿಷೇಧ ಕುರಿತಂತೆ ಕರ್ನಾಟಕ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ಸಮರ್ಥನೆ ಸರಿಯಲ್ಲ ಎಂದ ಕಾಮತ್‌ ದಕ್ಷಿಣ ಭಾರತದಲ್ಲಿ ಧಾರ್ಮಿಕ ಚಿಹ್ನೆಗಳನ್ನು ಹೇಗೆ ಧರಿಸುತ್ತಾರೆ ಎಂಬುದನ್ನು ವಿವರಿಸಿದರು.
ಆದರೆ ನ್ಯಾ ಗುಪ್ತಾ ರುದ್ರಾಕ್ಷಿ ಮತ್ತ ಶಿಲುಬೆಗಳು ಅಂಗಿಯ ಒಳಗೆ ಇರಲಿದ್ದು ಅದನ್ನು ಹುಡುಕಲು ಯಾರೂ ನಿಮ್ಮ ಅಂಗಿ ತೆಗೆಯಬೇಕಿಲ್ಲ. ಇದು ಶಾಲೆಯ ಶಿಸ್ತನ್ನು ಉಲ್ಲಂಘಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು. “ಜಾತ್ಯತೀತತೆ ಎಂಬ ಪದವು ಮೂಲ ಸಂವಿಧಾನ ಇರಲಿಲ್ಲ” ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದರು. “ಆತ್ಮದಲ್ಲಿ ಅದು ಇತ್ತು. ಅದು ಇಡೀ ದಾಖಲೆಯಲ್ಲಿ (ಸಂವಿಧಾನ) ವ್ಯಾಪಿಸಿದೆ,” ಎಂದು ಕಾಮತ್ ಸಮರ್ಥಿಸಿಕೊಂಡರು. ಆಗ ನ್ಯಾ. ಗುಪ್ತಾ “ನಾವು ಪದದ ಬಗ್ಗೆ ಹೇಳುತ್ತಿದ್ದೇವೆ. ಅದು ಸದಾ (ಆತ್ಮದಲ್ಲಿ) ಇದ್ದರೂ ಅದನ್ನು ರಾಜಕೀಯ ಹೇಳಿಕೆಯಾಗಿ ಸೇರಿಸಲಾಗಿದೆಯೇ ಎಂಬುದು ನನಗೆ ತಿಳಿದಿಲ್ಲ” ಎಂದರು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement