ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ಇಂದು ಗುರುವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಲಾಗಿದ್ದು, ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-೨೦೨೨ ಅನ್ನು ಮಂಡಿಸಿ ೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರವೂ ಕಾಯ್ದೆ ಕುರಿತು ಚಿಂತನೆ ನಡೆಸಿತ್ತು. ಸಂವಿಧಾನದ ವಿಧಿ-೨೫ರ ಪ್ರಕಾರ ಎಲ್ಲರಿಗೂ ಧಾರ್ಮಿಕ ನಂಬಿಕೆ ಮತ್ತು ಧರ್ಮದಲ್ಲಿ ಬದುಕುವ ಹಕ್ಕಿದೆ. ಆದರೆ ಇತ್ತೀಚೆಗೆ ಸಾಮೂಹಿಕವಾಗಿ ಬಲವಂತ ಹಾಗೂ ಆಮಿಷದ ಮತಾಂತರ ನಡೆಯುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇದನ್ನು ತಡೆಯಲು ಈ ಕಾಯ್ದೆಯನ್ನು ಮಂಡಿಸಲಾಗಿದೆ ಎಂದು ವಿವರಿಸಿದರು.
ಈ ಕಾಯ್ದೆ ಕಸಿಯುವುದಿಲ್ಲ. ಬಲ ಪ್ರಯೋಗ, ಅನ್ಯ ಮಾರ್ಗದಲ್ಲಿ ಮತಾಂತರ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಲವಂತದ ಹಾಗೂ ಆಮೀಷದ ಮತಾಂತರವಾಗಬಾರದು ಎಂಬುದಷ್ಟೇ ನಮ್ಮ ಉದ್ದೇಶ. ಅದಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ನಂತರ ವಿಧೇಯಕದ ಕುರಿತು ಚರ್ಚೆ ವೇಳೆ ಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ಕಾಯ್ದೆ ಹಾಗೂ ಹಲವು ವಿಷಯಗಳ ಕುರಿತು ಮಾತಿನ ಚಕಮಕಿ ನಡೆಯಿತು. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಸಂವಿಧಾನದ ಕಲಂ ೨೫ ರಡಿ ಮೂಲ ಆಶಯದ ಬಗ್ಗೆ ಮಾಹಿತಿ ನೀಡಿ. ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪಿನ ಅನುಸಾರ ವಿಧೇಯಕ ತಂದಿರುವುದು ಕಾನೂನು ಬಾಹಿರ. ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾದರೆ ಸಂಸತ್ತಿನಲ್ಲಿ ೩ನೇ ೨ ರಷ್ಟು ಸಂಖ್ಯಾಬಲ ಇರಬೇಕು. ಇಲ್ಲಿ ಸಂಖ್ಯಾಬಲವಿದೆ ಎನ್ನುವ ಕಾರಣಕ್ಕಾಗಿ ಮಸೂದೆ ಅಂಗೀಕಾರ ಪಡೆದುಕೊಳ್ಳುತ್ತಾರೆ. ನ್ಯಾಯಾಲಯದ ಯಾವ ರೀತಿ ಪರಿಗಣಿಸಲಿದೆ ಎನ್ನುವುದನ್ನು ಕಾದು ನೋಡಬೇಕು ಎಂದರು.
ಮತಾಂತರದಿಂದ ಕ್ರೈಸ್ತರ ಜನಸಂಖ್ಯೆ ಹೆಚ್ಚಾಗಿಲ್ಲ. ಬದಲಾಗಿ ಮತಾಂತರ ಹೆಸರಲ್ಲಿ ಎಷ್ಟು ಪ್ರಕರಣ ದಾಖಲಾಗಿವೆ ಎನ್ನುವುದರ ಬಗ್ಗೆ ಸಚಿವರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಲವಂತದ ಮತಾಂತರ ತಡೆಯಲು ಸರ್ಕಾರ ಮುಂದಾಗಿದೆ. ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಬಲವಂತದ ಮತಾಂತರ ತಡೆಯಲು ಕಾಯ್ದೆ ರೂಪಿಸಲು ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಧರ್ಮದ ಹೆಸರಲ್ಲಿ ಮತಾಂತರ ನಡೆಯುತ್ತಿದೆ. ಅಶಾಂತಿ ಮೂಡುತ್ತಿದೆ. ಅದನ್ನು ತಡೆಯಬೇಕಾಗಿದೆ. ಕಾನೂನು ಪ್ರಕಾರ ಮತಾಂತರ ಮಾಡಲು ಅಭ್ಯಂತರವಿಲ್ಲ. ಆದರೆ ಕಾನೂನಿಗೆ ವಿರುದ್ದವಾಗಿ ಮತಾಂತರ ನಡೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆಯನ್ನು ತರಲಾಗಿದೆ ಎಂದು ಹೇಳಿದರು. ಜೆಡಿಎಸ್‌ನ ಬೋಜೇಗೌಡ ಅವರು ವಿಧೇಯಕದ ಮೇಲೆ ಹಲವು ಬಾರಿ ಚರ್ಚೆಯಾಗಿದೆ. ಈ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಾಗಿದೆ ಎಂದು ಹೇಳಿದರು.ಇದಕ್ಕೂ ಮುನ್ನ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಮತಾಂತರಗೊಳ್ಳುವವರು ಸ್ವಇಚ್ಛೆಯಿಂದ ಮತಾಂತರವಾಗುತ್ತಿದ್ದೇವೆ ಎನ್ನುವುದನ್ನು ಘೋಷಿಸಬೇಕು. ಮತಾಂತರ ಮಾಡುವವರು ಯಾರನ್ನು ಮತಾಂತರ ಮಾಡುತ್ತಿದ್ದೇವೆ ಎನ್ನುವುದನ್ನು ಪ್ರಕಟಿಸಬೇಕು. ಅದನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಮತಾಂತರ ಆದ ನಂತರ ಆ ವ್ಯಕ್ತಿ ಹಳೆ ಜಾತಿಯ ಎಲ್ಲಾ ಸವಲತ್ತು ಕಳೆದುಕೊಳ್ಳುತ್ತಾರೆ. ಇದೇ ವೇಳೆ ಹೊಸ ಧರ್ಮದ ಸವಲತ್ತು ಪಡೆಯುತ್ತಾನೆ ಎಂದು  ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement