ಮುರುಘಾ ಶರಣರ ಪೀಠ ತ್ಯಾಗಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಶಾಸಕ ಯತ್ನಾಳ ಮನವಿ

ಬೆಂಗಳೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶರಾದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಪೀಠ ತ್ಯಾಗ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಶನಿವಾರ ಪತ್ರ ಬರೆದಿದ್ದಾರೆ.
ಮುರುಘಾ ಮಠದ ಆಡಳಿತ ಮತ್ತು ದೈನಂದಿನ ವ್ಯವಹಾರಗಳ ಸುಗಮವಾಗಿ ನಡೆಸಲು ಅನುವಾಗುವ ನಿಟ್ಟಿನಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ಸಮಿತಿ ರಚಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಕೋರಿದ್ದಾರೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠ ಐತಿಹಾಸಿಕ ವಿರಕ್ತ ಪರಂಪರೆಯ ಶೂನ್ಯ ಪೀಠದ ಅಗ್ರಗಣ್ಯ ಮಠವಾಗಿದ್ದು, ಇದರ ಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಈಗ ಜೈಲು ಪಾಲಾಗಿರುವುದು ವೀರಶೈವ-ಲಿಂಗಾಯತ ಸಮುದಾಯಕ್ಕೆ ಅವಮಾನಕರ ಸಂಗತಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಶಿವಮೂರ್ತಿ ಮುರುಘಾ ಶರಣರು ಸ್ವಇಚ್ಛೆಯಿಂದ ಪೀಠ ತ್ಯಾಗ ಮಾಡಬೇಕು. ಇಲ್ಲವಾದಲ್ಲಿ ಅವರನ್ನು ಪದಚ್ಯುತಗೊಳಿಸುವ ಕಾನೂನುಬದ್ಧ ಪ್ರಕ್ರಿಯೆಗೆ ನಿರ್ದೇಶಿಸಬೇಕು. ಶಿವಮೂರ್ತಿ ಮುರುಘಾ ಶರಣರು ಜೈಲಿನಲ್ಲಿರುವುದರಿಂದ ಮಠದ ಆಡಳಿತ ಹಳಿ ತಪ್ಪಿದೆ. ಮಠದ ವಿದ್ಯಾಸಂಸ್ಥೆ ಅಧೀನದಲ್ಲಿರುವ ನೂರಾರು ಘಟಕಗಳ ಕಾರ್ಯಚಟುವಟಿಕೆಗೆ ಅಡಚಣೆಯಾಗಿದೆ. ಮಠದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ. ಇದಕ್ಕಾಗಿ ವೀರಶೈವ-ಲಿಂಗಾಯತ ಸಮುದಾಯದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಾಜದ ಐವರು ಪ್ರಮುಖರ ಉನ್ನತ ಮಟ್ಟದ ಮೇಲುಸ್ತುವಾರಿ ಸಮಿತಿಯನ್ನು ಕೂಡಲೇ ನೇಮಿಸಬೇಕು ಎಂದು ಕೋರಲಾಗಿದೆ.
ಮಠದ ದೈನಂದಿನ ಆಡಳಿತ, ಆರ್ಥಿಕ ವ್ಯವಹಾರ ಮತ್ತು ಧಾರ್ಮಿಕ ಚಟುವಟಿಕೆಗಳ ಕುರಿತು ನಿರ್ಧಾರ ಕೈಗೊಳ್ಳಲು ಸಮಿತಿಯು ಅಧಿಕಾರ ಹೊಂದಿರಬೇಕು. ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಸಮಿತಿ ನೆರವೇರಿಸಬೇಕು. ಎಂದು ಯತ್ನಾಳ್‌ ಪತ್ರದ ಮುಖೇನ ಕೋರಿದ್ದಾರೆ ಎಂದು ಬಾರ್‌ & ಬೆಂಚ್‌ ವರದಿ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement