ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿ 5 ಸಾವಿರ ಕೋಟಿ ರೂ.: ಸಿಎಂ ಬೊಮ್ಮಾಯಿ ಘೋಷಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ಬಜೆಟ್‌ನಲ್ಲಿ ಕೆಕೆಆರ್‌ಡಿಬಿಗೆ ನೀಡಲಿರುವ ₹ 3 ಸಾವಿರ ಕೋಟಿ ಹೊರತುಪಡಿಸಿ ಹೆಚ್ಚುವರಿಯಾಗಿ ₹ 5 ಸಾವಿರ ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶನಿವಾರ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಸ್ಥಳೀಯ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ₹ 3 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ‌ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,
ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ‌ ಬದ್ಧವಾಗಿದ್ದು, ಮಾರ್ಚ್ 31ರೊಳಗಾಗಿ ಈ ಭಾಗದ 5 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 11 ಸಾವಿರ ಹುದ್ದೆಗಳನ್ನೂ ಮಾರ್ಚ್ ಅಂತ್ಯದೊಳಗೆ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಕಲ್ಯಾಣ ಕರ್ನಾಟಕಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿಟ್ಟಿ‌ನಲ್ಲಿ 371 (ಜೆ) ಕಲಂ ಜಾರಿಗೆ ಒತ್ತಾಯಿಸಿ ಮೊದಲು ಹೋರಾಟ ‌ಮಾಡಿದವರು ದಿ. ವೈಜನಾಥ ಪಾಟೀಲರು. ಅದನ್ನು ಸಂಸತ್ತಿನಲ್ಲಿ ಮಂಡಿಸಿ ಎಲ್ಲರ ಒಪ್ಪಿಗೆ ಪಡೆದು ಕಾಯ್ದೆ ಜಾರಿಯಾಗುವಂತೆ ಮಾಡಿದವರು ಮಲ್ಲಿಕಾರ್ಜುನ ಖರ್ಗೆಯವರು ಎಂದರು. ಆದರೆ, ರಾಜ್ಯದಲ್ಲಿ ಹಿಂದೆ ಐದು ವರ್ಷ ಅಧಿಕಾರದಲ್ಲಿದ್ದ ಸರ್ಕಾರ ಈ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾಯಿತು. ಹಿಂದಿ‌ನ ಸರ್ಕಾರ ಇತ್ತ ತಿರುಗಿಯೂ ನೋಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ರೇವೂರ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರು ಹೈದರಾಬಾದ್ ನಿಜಾಮರಿಂದ ಮುಕ್ತಿ ಕೊಡಿಸಿದರು. ಆಧುನಿಕ ಪಟೇಲ್ ರೂಪದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯ ಪಡೆದ ಜನರ ಕಲ್ಯಾಣಕ್ಕೆ ಬದ್ದರಾಗಿ ಸಹಸ್ರಾರು ಕೋಟಿ ನೆರವು ನೀಡಿ ಈ ಭಾಗಕ್ಕೆ ಶೈಕ್ಷಣಿಕ, ಆರೋಗ್ಯ ಸೌಲಭ್ಯ ಕಲ್ಪಿಸುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ಶ್ಲಾಘಿಸಿದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement