ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲ್ಲ, ರಾಜಸ್ತಾನದ ಬಿಕ್ಕಟ್ಟಿಗೆ ಸೋನಿಯಾ ಗಾಂಧಿ ಕ್ಷಮೆ ಕೇಳಿದ್ದೇನೆ: ಅಶೋಕ ಗೆಹ್ಲೋಟ್

ನವದೆಹಲಿ: ತಾವು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಹಾಗೂ ರಾಜಸ್ಥಾನದಲ್ಲಿ ಬಂಡಾಯವೆದ್ದ ತಮ್ಮ ನಿಷ್ಠಾವಂತ ಶಾಸಕರ ನಡೆಯ ‘ನೈತಿಕ ಹೊಣೆ’ ಹೊತ್ತುಕೊಳ್ಳುವೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ರಾಜಸ್ಥಾನದಲ್ಲಿನ ಬಿಕ್ಕಟ್ಟಿನ ವಿಚಾರವಾಗಿ ಅವರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಬಳಿ ಕ್ಷಮೆ ಕೇಳಿದ್ದಾರೆ.
ಗುರುವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸುಮಾರು ಒಂದೂವರೆ ಗಂಟೆ ಕಾಲ ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ ಅವರು, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಪಕ್ಷದ ನಾಯಕತ್ವಕ್ಕೆ ಬಿಟ್ಟಿದ್ದೇನೆ ಎಂದರು.

ನಾನು ಕೊಚ್ಚಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದ್ದೆ. ಅವರು ಅದನ್ನು ಒಪ್ಪಿಕೊಳ್ಳದೆ ಇದ್ದಾಗ, ನಾನು ಸ್ಪರ್ಧಿಸುವುದಾಗಿ ಹೇಳಿದ್ದೆ. ಆದರೆ ರಾಜಸ್ಥಾನದ ಈ ಘಟನೆ ತಲೆದೋರಿದೆ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸದೆ ಇರಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಎರಡು ದಿನಗಳ ಹಿಂದೆ ನಡೆದಿರುವುದು ನಮಗೆ ಆಘಾತ ಮೂಡಿಸಿದೆ. ಈ ಬಗ್ಗೆ ಅವರಲ್ಲಿ ನಾನು ಕ್ಷಮಾಪಣೆ ಕೋರಿದ್ದೇನೆ” ಎಂದು ಹೇಳಿದರು.
ಒಂದು ಸಾಲಿನ ನಿರ್ಣಯ ನಮ್ಮ ಸಂಪ್ರದಾಯ. ದುರದೃಷ್ಟವಶಾತ್ ಆ ನಿರ್ಣಯ ಅಂಗೀಕರಿಸಲಾಗದಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಇದು ನನ್ನ ನೈತಿಕ ಹೊಣೆಗಾರಿಕೆ. ಆದರೆ ಮುಖ್ಯಮಂತ್ರಿಯಾಗಿಯೂ ನನ್ನಿಂದ ನಿರ್ಣಯ ಅಂಗೀಕರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಸೋನಿಯಾ ಗಾಂಧಿ ಅವರೊಂದಿಗೆ ಗುರುವಾರ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement