ಭಾರತದ ಎಲ್ಲ ರಾಜ್ಯಗಳು, ಅನೇಕ ದೇಶಗಳನ್ನು ಹೆಸರನ್ನು ಭೂಪಟ-ಧ್ವಜ ನೋಡಿಯೇ ಹೇಳುವ 18 ತಿಂಗಳ ಪುಟ್ಟಪೋರ ಅನಿಕೇತ ಭಟ್‌…!

ಕಾರವಾರ: ಈತನ ವಯಸ್ಸು ಕೇವಲ 18 ತಿಂಗಳು ಅಂದರೆ ಒಂದೂವರೆ ವರ್ಷ ಮಾತ್ರ, ಇನ್ನೂ ಸರಿಯಾಗಿ ಹಲ್ಲು ಬಂದಿಲ್ಲವೇನೋ. ಆದರೆ ಈ ಪುಟ್ಟ ಹುಡುಗನಿಗೆ ಇರುವ ಜ್ಞಾನ ಮಾತ್ರ ಆತನ ವಯಸ್ಸಿಗೆ ಮೀರಿದ್ದು. ಈತ ತನ್ನ ಬುದ್ಧಿಶಕ್ತಿ ಕಾರಣಕ್ಕೇ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಒಂದೂವರೆ ವರ್ಷದ ಅನಿಕೇತನಿಗೆ ಭಾರತದ ಭೂಪಟ ತೋರಿಸಿದರೆ ದೇಶದ ಎಲ್ಲ ರಾಜ್ಯಗಳ ಹೆಸರನ್ನು ತನ್ನ ತೊದಲು ನುಡಿಯಲ್ಲೇ ಹೇಳುತ್ತಾನೆ. ಧ್ವಜ ನೋಡಿ ವಿವಿಧ ರಾಷ್ಟ್ರಗಳ ಹೆಸರು ಹೇಳುತ್ತಾನೆ.

ಅನಿಕೇತ ಭಾರತದ ಪ್ರಧಾನಿ, ಕರ್ನಾಟಕದ ಮುಖ್ಯಮಂತ್ರಿ, ಭಾರತದ ರಾಷ್ಟ್ರಪತಿ ಹೀಗೆ ಅನೇಕರ ಹೆಸರುಗಳನ್ನು ಹೇಳುತ್ತಾನೆ. ಇನ್ನೂ ಸ್ಪಷ್ಟವಾಗಿ ಮಾತನಾಡಲು ಬಾರದ ಈ ಪುಟ್ಟ ಪೋರನ ಬುದ್ಧಿಶಕ್ತಿ ಮಾತ್ರ ಅಸಾಧಾರಣ.
ವಿವಿಧ ರಾಜ್ಯಗಳನ್ನೊಳಗೊಂಡ ಭಾರತದ ನಕಾಶೆಯನ್ನು ತೋರಿಸಿ ಯಾವುದೇ ರಾಜ್ಯದ ಮೇಲೆ ಕೈಯಿಟ್ಟು ಇದು ಯಾವ ರಾಜ್ಯವೆಂದು ಕೇಳಿದರೆ ಈ ಪುಟ್ಟಪೋರ ಅದನ್ನು ನಿಖರವಾಗಿ ಹೇಳುತ್ತಾನೆ. ನಮ್ಮ ದೇಶವಷ್ಟೇ ಅಲ್ಲ, ಬೇರೆಬೇರೆ 20ಕ್ಕೂ ಹೆಚ್ಚು ರಾಷ್ಟ್ರಗಳ ಧ್ವಜ (ಫ್ಲ್ಯಾಗ್‌) ತೋರಿಸಿದರೆ ಸಾಕು ಧ್ವಜ ನೋಡಿಯೇ ಆ ರಾಷ್ಟ್ರದ ಹೆಸರನ್ನು ಹೇಳುತ್ತಾನೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಿಳಗಿಯವರಾದ ಈತನ ತಂದೆ-ತಾಯಿ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಆನಂದ ಭಟ್‌ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಹಾಗೂ ಶ್ರೀಲತಾ. ಬಿಳಗಿಯ ನರೇಂದ್ರ ಭಟ್ ಮತ್ತು ಲಲಿತಾ ಅವರ ಮೊಮ್ಮಗ. ತಾಯಿ ಶ್ರೀಲತಾ ಮಗನ ಬೌದ್ಧಿಕ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement