ಹುಬ್ಬಳ್ಳಿ -ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಕೇವಲ ಘೋಷಣೆಯಲ್ಲಿ ಮಾತ್ರ, ಕಾರ್ಯರೂಪದಲ್ಲಿಲ್ಲ ಯಾಕೆ : ವಸಂತ ಲದವಾ ಪ್ರಶ್ನೆ

ಹುಬ್ಬಳ್ಳಿ: ಕೇವಲ ೨೦ ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಣ ಕೈಗೊಂಡ ಧಾರವಾಡ ರೈಲು ನಿಲ್ದಾಣವನ್ನು ಲೋಕಾರ್ಪಣೆಗೆ ಆಗಮಿಸಿದ ಕೇಂದ್ರ ರೈಲ್ವೆ ಸಚಿವರು ಮತ್ತದೆ ಹಳೆಯ ವಂದೇ ಭಾರತ ರೈಲು ಸೇವೆ ಒದಗಿಸುವ ಘೋಷಣೆಯನ್ನು ಮುಂದಿನ ಚುನಾವಣಾ ದೃಷ್ಟಿಯಿಂದ ಮಾಡಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆಬ್ರುವರಿ ೨೪ ೨೦೧೯ರಂದು ನಗರದಲ್ಲಿ ನಡೆದ ದೇಶ್‌ ಕಿ ಮನ್ ಕಿ ಬಾತ ಕಾರ್ಯಕ್ರಮದಲ್ಲಿ ಜಿಲ್ಲೆಯ ಕೇಂದ್ರ ಸಚಿವರು ಹುಬ್ಬಳ್ಳಿ -ಬೆಂಗಳೂರು ಮದ್ಯ ೨೦೨೧ರ ಒಳಗೆ ಒಂದೇ ಭಾರತ ಎಕ್ಸಪ್ರೆಸ್ ರೈಲು ಸಂಚಾರ ಆರಂಭಿಸಲಾಗುವುದೆಂದು ಘೋಷಣೆ ಮಾಡಿದ್ದರು ಹಾಗೂ ಈ ರೈಲು ಕೇವಲ ನಾಲ್ಕು ಗಂಟೆ ಅವಧಿಯಲ್ಲಿ ಬೆಂಗಳೂರು ತಲುಪಲಿದೆ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದರು ಆದರೆ ಇಂದಿಗೂ ಮಹಾನಗರದ ಜನ ಬೆಂಗಳೂರು ತಲುಪಬೇಕಾದರೆ ಕನಿಷ್ಟ ೭ ಗಂಟೆ ಅವಧಿ ಬೇಕಾಗುತ್ತದೆ. ಈ ಬಗ್ಗೆ ಇಂದಿಗೂ ಯಾವುದೇ ಕ್ರಮ ಕೈಗೊಳ್ಳದೇ ಮತ್ತೆ ಜಿಲ್ಲೆಯ ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ರೈಲ್ವೆ ಸಚಿವರು ಧಾರವಾಡದಲ್ಲಿ ಮತ್ತೆ ಅದೇ ಘೋಷಣೆ ಮಾಡಿ ಕೇಂದ್ರ ಸರ್ಕಾರ ಕೇವಲ ಘೋಷಣೆಯ ಸರ್ಕಾರ ಎಂಬುದು ಸಾಬೀತುಪಡಿಸಿದ್ದಾರೆ ಎಂದು ಲದವಾ ಹೇಳಿದ್ದಾರೆ.
ಸಚಿವರು ರಾಜ್ಯದ ರೈಲ್ವೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿದೆ ಎಂದು ಹೇಳುತ್ತಿರುವಾಗ ಕೇಂದ್ರ ಸರ್ಕಾರ ೨೦೦೧ರಲ್ಲಿಯೇ ಪ್ರಾರಂಭವಾಗಬೇಕಿದ್ದ ಒಂದೇ ಭಾರತ ರೈಲು ೨೦೨೨ ಕಳೆಯುತ್ತ ಬಂದರೂ ಇನ್ನೂ ಏಕೆ ಪ್ರಾರಂಭವಾಗಿಲ್ಲವೆಂದು ಕಾಂಗ್ರೆಸ್ ವಕ್ತಾರ ವಸಂತ ಲದವಾ ಪ್ರಶ್ನಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ ವಾಣಿಜ್ಯೋದ್ಯಮಗಳ ಅನುಕೂಲಕ್ಕಾಗಿ ನವಲೂರ ಸ್ಟೇಷನನಲ್ಲಿ ಆಧುನಿಕ, ಸುಸಜ್ಜಿತ ಸರಕು ಸಾಗಣೆ ಟರ್ಮಿನಸ್ ಅಭಿವೃದ್ಧಿಗೆ ೫೦ ಕೋಟಿ ರೂ.ಗಳ ಮೌಲ್ಯದ ೧೦೦ ಎಕರೆ ಭೂಮಿ ರೈಲ್ವೆ ಇಲಾಖೆಗೆ ಪುಕ್ಕಟೆಯಾಗಿ ಹಂಚಿಕೆ ಮಾಡಿ ಸುಮಾರು ೧೦ ಕೋಟಿಗೂ ಮೀರಿ ಚಾಲ್ತಿ ಸಾಲಿಗೆ ಮಂಜೂರು ಮಾಡಿತ್ತು. ಆದರೆ ಇಂದಿನ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಇಂದಿಗೂ ಅದನ್ನು ಅಭಿವೃದ್ಧಿಪಡಿಸಿಲ್ಲ. ಅಂದಿನ ರಾಜ್ಯದ ಕಾಂಗ್ರೆಸ್ ಸರಕಾರ ಈ ಭೂಮಿ ಕೇವಲ ನಿಗದಿತ ಕಾರಣಕ್ಕಾಗಿ ಉಪಯೋಗಿಸಲು ಮತ್ತು ಅಧುನಿಕ ಟರ್ಮಿನಸ್ ೩ ವರ್ಷದೊಳಗಾಗಿ ಅಭಿವೃದ್ಧಿಪಡಿಸಬೇಕೆಂಬ ಷರತ್ತುಗಳೊಂದಿಗೆ ಪುಕ್ಕಟೆಯಾಗಿ ಹಂಚಿಕೆ ಮಾಡಿತ್ತು. ನಿಗದಿತ ಅವಧಿಯೊಳಗೆ ನಿಗದಿತ ಉದ್ದೇಶಿತ ಟರ್ಮಿನಸ್ ಅಭಿವೃದ್ಧಿಪಡಿಸದಿದ್ದರೆ ಉಚಿತವಾಗಿ ನೀಡಿದ ಭೂಮಿಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಳ್ಳುವ ಕರಾರು ಸಹಿತ ಮಾಡಿತ್ತು ಆದರೆ ರೈಲ್ವೆ ಇಲಾಖೆ ನಿರ್ಲಕ್ಷ್ಯದಿಂದ ಈ ಅಭಿವೃದ್ಧಿ ಕಾರ್ಯ ಇಂದಿಗೂ ಕಾರ್ಯಗತವಾಗದೇ ಉಳಿದಿದೆ. ಆದರೆ ಇಂದಿಗೂ ಕೇವಲ ಘೋಷಣೆ ಮಾತ್ರ ಮಾಡುತ್ತಿರುವ ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಸಂತ ಲದವಾ ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

 

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement