7ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತದ ಮಹಿಳಾ ಕ್ರಿಕೆಟ್‌ ತಂಡ: ಶ್ರೀಲಂಕಾಕ್ಕೆ ಹೀನಾಯ ಸೋಲು

ಢಾಕಾ: ಮಹಿಳೆಯರ ಕ್ರಿಕೆಟ್‌ನಲ್ಲಿ ಫೈನಲ್‌ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ 7 ನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬೌಲರ್‌ಗಳು ಗೆಲುವಿಗೆ ಕಾರಣವಾದರೆ, ಸ್ಮೃತಿ ಮಂಧಾನ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ಗೆಲುವನ್ನು ಪೂರ್ಣಗೊಳಿಸಿದರು.
ಶ್ರೀಲಂಕಾ ನೀಡಿದ 66 ರನ್‍ಗಳ ಅಲ್ಪ ಮೊತ್ತದ ಗುರಿಪಡೆದ ಭಾರತ ಈ ಮೊತ್ತವನ್ನು 8.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಚಚ್ಚಿ ಗೆದ್ದು ಬೀಗಿದೆ. ಇತ್ತ 7ನೇ ಬಾರಿ ಭಾರತ ಪ್ರಶಸ್ತಿ ಗೆದ್ದು ಸಂಭ್ರಮಿಸಿದರೆ, ಶ್ರೀಲಂಕಾ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಅವಕಾಶ ಕಳೆದುಕೊಂಡಿತು
ಗೆಲ್ಲಲು ಕೇವಲ 66 ರನ್‌ಗಳ ಗುರಿ ಬೆನ್ನತ್ತಿದ ಭಾರತ 4 ಮತ್ತು 5ನೇ ಓವರ್‌ಗಳಲ್ಲಿ ಶಫಾಲಿ ವರ್ಮಾ (5) ಮತ್ತು ಜೆಮಿಮಾ ರಾಡ್ರಿಗಸ್ (2) ಅವರ ವಿಕೆಟ್‌ಗಳನ್ನು ತ್ವರಿತವಾಗಿ ಕಳೆದುಕೊಂಡಿತು. ಆದಾಗ್ಯೂ, ಸ್ಮೃತಿ ಮಂದಾನ ಒಂದು ತುದಿಯನ್ನು ಹಿಡಿದಿಟ್ಟುಕೊಂಡು ಜವಾಬ್ದಾರಿಯುತವಾಗಿ ಆಡಿದರು, 25 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 51 ರನ್ ಗಳಿಸಿದರು.

ಸ್ಮೃತಿ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಮೂರನೇ ವಿಕೆಟ್‌ಗೆ 24 ಎಸೆತಗಳಲ್ಲಿ 36 ರನ್‌ಗಳ ಅಜೇಯ ಜೊತೆಯಾಟದಿಂದ ಭಾರತ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಭಾರತ 69 ಎಸೆತಗಳು ಬಾಕಿ ಇರುವಂತೆಯೇ ಶೃಈಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.. ಶ್ರೀಲಂಕಾ ಪರ ಇನೋಕಾ ರಣವೀರ ಮತ್ತು ಕವಿಶಾ ದಿಲ್ಹಾರಿ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು, ಶ್ರೀಲಂಕಾ ಮಹಿಳಾ ನಾಯಕಿ ಚಾಮರಿ ಅಥಾಪತ್ತು ಅವರು ಮಹಿಳೆಯರ ಏಷ್ಯಾ ಕಪ್ 2022 ಫೈನಲ್‌ನಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಬ್ಯಾಟ್‌ ಮಾಡಿದ ಶ್ರೀಲಂಕಾ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ, ಮಹಿಳಾ ಏಷ್ಯಾ ಕಪ್ T20 2022 ಫೈನಲ್‌ನಲ್ಲಿ ಭಾರತದ ವಿರುದ್ಧ 65/9 ರನ್‌ಗಳನ್ನು ಗಳಿಸಿತು.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಇಬ್ಬರೂ ಆರಂಭಿಕರಾದ ಚಾಮರಿ ಅಥಾಪತ್ತು (6) ಮತ್ತು ಅನುಷ್ಕಾ ಸಂಜೀವನಿ ರನ್ ಔಟ್ ಮೂಲಕ ಔಟಾದರು. ನಂತರ ಭಾರತೀಯ ಬೌಲರ್‌ಗಳು ಇತರ ಲಂಕಾ ಬ್ಯಾಟರ್‌ಗಳ ಮೇಲೆ ಮಾರಕ ಬೌಲಿಂಗ್‌ ದಾಳಿ ನಡೆಸಿ ಅಲ್ಪ ಮೊತ್ತಕ್ಕೆ ಅವರನ್ನು ಔಟ್ ಮಾಡಿದರು.7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಶ್ರೀಲಂಕಾದ ಓಷದಿ ರಣಸಿಂಗ್ ಅವರು 20 ಎಸೆತಗಳಲ್ಲಿ 13 ರನ್ ಗಳಿಸಿ ಎರಡಂಕಿಯ ಗಡಿ ದಾಟಿದ ಇಬ್ಬರು ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು. ಶ್ರೀಲಂಕಾ ತಂಡಕ್ಕೆ ಇನೋಕಾ ರಣವೀರ (18*) ಮತ್ತು ಅಚಿನಿ ಕಲಾಸೂರ್ಯ ಅವರು ಕೊನೆಯ ವಿಕೆಟ್‌ಗೆ 22 ರನ್‌ಗಳನ್ನು ಸೇರಿಸುವ ಮೂಲಕ ಶ್ರೀಲಂಕಾ ತಂಡಕ್ಕೆ 50 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು.ಭಾರತದ ಪರ ರೇಣುಕಾ ಸಿಂಗ್ 3 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ ರಾಣಾ ತಲಾ 2 ವಿಕೆಟ್ ಪಡೆದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement