ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

ಇಸ್ಲಾಮಾಬಾದ್‌: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಹಾಗೂ  ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಇಸ್ಲಾಮಾಬಾದ್‌ನ ಸೆಕ್ರೆಟರಿಯೇಟ್ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಮೊಹ್ಸಿನ್ ಶಹನವಾಜ್ ರಂಝಾ ಅವರು ಸಲ್ಲಿಸಿದ ದೂರಿನ ಮೇರೆಗೆ ಮಾಜಿ ಪ್ರಧಾನಿ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.
ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ಕಚೇರಿಯ ಹೊರಗೆ ರಂಝಾ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲಿ ತೋಷಖಾನಾ ಪ್ರಕರಣದಲ್ಲಿ ಖಾನ್ ಅವರನ್ನು ಅನರ್ಹಗೊಳಿಸಿದ ಇಸಿಪಿ ತೀರ್ಪಿನ ವಿರುದ್ಧ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿಗರು ಪ್ರತಿಭಟನೆ ನಡೆಸಿದರು. ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗದಲ್ಲಿ ಫಿರ್ಯಾದಿಯಾಗಿ ಹಾಜರಾದಾಗ ತನ್ನ ಮೇಲೆ ದಾಳಿ ನಡೆಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ರಂಝಾ ಹೇಳಿಕೊಂಡಿದ್ದಾರೆ. ಎಫ್‌ಐಆರ್ ಪ್ರಕಾರ, ಮೊಹ್ಸಿನ್ ಶಹನವಾಜ್ ರಂಝಾ ಅವರು ಇಸಿಪಿಯ ಹೊರಗೆ ಬಂದಾಗ “ಪಿಟಿಐ ನಾಯಕತ್ವದ” ಆದೇಶದ ಮೇರೆಗೆ “ಕೊಲೆಯ ಉದ್ದೇಶದಿಂದ” ದಾಳಿ ನಡೆಸಲಾಯಿತು. ವಾಹನದ ಗಾಜುಗಳನ್ನು ಒಡೆದು ಒಳನುಗ್ಗುವ ಯತ್ನದಲ್ಲಿ ತನ್ನ ಕಾರನ್ನು ಗುರಿಯಾಗಿಸಲಾಯಿತು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಚುನಾವಣಾ ಆಯೋಗದ ನಿರ್ಧಾರ ನ್ಯಾಯಾಲಯದಲ್ಲಿ ಪ್ರಶ್ನಿಸಿದ ತೆಹ್ರೀಕ್-ಎ-ಇನ್ಸಾಫ್ ಪಕ್ಷ
ಗಮನಾರ್ಹವಾಗಿ, ಪಾಕಿಸ್ತಾನದ ಚುನಾವಣಾ ಆಯೋಗವು (ECP) ಶುಕ್ರವಾರ, ಅಕ್ಟೋಬರ್ 21 ರಂದು ತೋಷಖಾನಾ ಪ್ರಕರಣದಲ್ಲಿ ತನ್ನ ತೀರ್ಪಿನಲ್ಲಿ ಪಿಟಿಐ (PTI) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅನರ್ಹಗೊಳಿಸಿತು. ಖಾನ್ ಇನ್ನು ಮುಂದೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿ ಉಳಿಯುವುದಿಲ್ಲ ಎಂದು ಅದು ಹೇಳಿದೆ. ಇಮ್ರಾನ್ ಖಾನ್ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಇಸಿಪಿ ಹೇಳಿದೆ. ಪ್ರಕರಣದ ವಿಚಾರಣೆಯಲ್ಲಿ, ಇಮ್ರಾನ್ ಖಾನ್ ಅವರ ವಕೀಲ ಅಲಿ ಜಾಫರ್ ಅವರು 2018-2019 ರ ಅವಧಿಯಲ್ಲಿ ಅವರಿಗೆ ನೀಡಲಾದ ಕನಿಷ್ಠ ನಾಲ್ಕು ಉಡುಗೊರೆಗಳನ್ನು ತಮ್ಮ ಕಕ್ಷಿದಾರರು ಮಾರಾಟ ಮಾಡಿದ್ದಾರೆ ಎಂದು ಒಪ್ಪಿಕೊಂಡರು. ಉಡುಗೊರೆಗಳನ್ನು 58 ಮಿಲಿಯನ್‌ಗೆ ಮಾರಾಟ ಮಾಡಲಾಗಿದೆ ಮತ್ತು ಅವರ ರಸೀದಿಗಳನ್ನು ಇಮ್ರಾನ್ ಖಾನ್ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್‌ನಲ್ಲಿ ನೀಡಲಾಗಿದೆ ಎಂದು ಜಾಫರ್ ಒಪ್ಪಿಕೊಂಡರು.

ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಚುನಾವಣಾ ಆಯೋಗವು ನೀಡಿರುವ ತೀರ್ಪು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಆರೋಪಿಸಿದೆ. ಪಿಟಿಐ ಉಪಾಧ್ಯಕ್ಷ ಶಾ ಮಹಮೂದ್ ಖುರೇಷಿ ಇಸಿಪಿ ಘೋಷಿಸಿದ ನಿರ್ಧಾರವನ್ನು “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ. ಇಮ್ರಾನ್ ಖಾನ್ ಇಲ್ಲದೆ ಪಾಕಿಸ್ತಾನದ ಪ್ರಜಾಪ್ರಭುತ್ವ ನಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅಕ್ಟೋಬರ್ 22 ರಂದು, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರು ತೋಷಖಾನಾ ಪ್ರಕರಣದಲ್ಲಿ ತಮ್ಮನ್ನು ಅನರ್ಹಗೊಳಿಸಿದ ಪಾಕಿಸ್ತಾನದ ಚುನಾವಣಾ ಆಯೋಗ ನೀಡಿದ ತೀರ್ಪನ್ನು ಪ್ರಶ್ನಿಸಿ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ಸಂವಿಧಾನದ 63 ನೇ ವಿಧಿಯಲ್ಲಿನ ಕಾನೂನಿನ ತತ್ವಗಳಿಗೆ ವಿರುದ್ಧವಾಗಿ ಪಾಕಿಸ್ತಾನದ ಚುನಾವಣಾ ಆಯೋಗ ನೀಡಿದ ಆದೇಶಕ್ಕೆ ತಡೆ ನೀಡುವಂತೆ ಅವರು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಅರ್ಜಿಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವವರೆಗೆ ಆದೇಶದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಮುಂದಿನ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು ಎಂದು ಅವರು ನ್ಯಾಯಾಲಯವನ್ನು ಕೇಳಿಕೊಳ್ಳಲಾಗಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement