ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನ

ಬೆಳಗಾವಿ: ಸವದತ್ತಿ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ್ ಮಾಮನಿ (56) ಅವರು ತೀವ್ರ ಅನಾರೋಗ್ಯದಿಂದಾಗಿ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ಕಾಯಿಲೆಯಿಂದಾಗಿ ಕೆಲ ದಿನಗಳ ಹಿಂದೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಆನಂದ್ ಮಾಮನಿ ಅವರ ಪಾರ್ಥಿವ ಶರೀರವನ್ನ ಬೆಳಗಾವಿ ಜಿಲ್ಲೆಯ ಸವದತ್ತಿಗೆ ಆಂಬುಲೆನ್ಸ್‌ ಮೂಲಕ ತರಲಾಗುತ್ತಿದೆ ಎಂದು ಹೇಳಲಾಗಿದೆ. ಭಾನುವಾರ ಮಧ್ಯಾಹ್ನ ಸವದತ್ತಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೇಳಲಾಗಿದೆ.
ಆನಂದ್ ಮಾಮನಿ ಸವದತ್ತಿ ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆಯಾಗಿದ್ದರು.  ಸವದತ್ತಿ ಕ್ಷೇತ್ರದಲ್ಲಿ ಒಬ್ಬರೇ ಸತತ ಎರಡು ಬಾರಿ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಿಲ್ಲ. ಆದರೆ ಆನಂದ ಮಾಮನಿ ಸವದತ್ತಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ‘ಹ್ಯಾಟ್ರಿಕ್‌’ ಜಯಗಳಿಸಿದ್ದರು.

ಶಾಸಕರಾಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಪ್ರಸ್ತುತ ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದರು. ಅವರ ಜನಪರ ನಿಲುವು, ಕ್ಷೇತ್ರ ಪರ್ಯಟನೆಯಿಂದ ಅವರು ಜನರಿಗೆ ಹೆಚ್ಚು ಆಪ್ತವಾಗಿದ್ದರು. ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿ (ಬಿಡಿಸಿಸಿ)ಗೆ ಸತತ ಎರಡು ಬಾರಿ ಅವಿರೋಧ ಆಯ್ಕೆಯಾಗಿದ್ದರು.
ಆನಂದ ಮಾಮಮನಿ ಅವರ ತಂದೆ ದಿವಂಗತ ಚಂದ್ರಶೇಖರ ಎಂ. ಮಾಮನಿ ಅವರು 1995-1999 ಅವಧಿಯಲ್ಲಿ ವಿಧಾಸಭೆ ಉಪಸಭಾಧ್ಯಕ್ಷರಾಗಿದ್ದರು. ಮಗ ಆನಂದ ಮಾಮನಿ ಕೂಡ ಈಗ ಉಪಸಭಾಧ್ಯಕ್ಷರಾಗಿದ್ದರು.
ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬಂದ ಮಾಮನಿ 1966ರ ಜನವರಿ 18ರಂದು ಸವದತ್ತಿಯಲ್ಲಿ ಚಂದ್ರಶೇಖರ ಮಾಮನಿ ಮತ್ತು ಗಂಗಮ್ಮ ಅವರ ಪುತ್ರ. ಬಿ.ಕಾಂ ಪದವಿ ಹೊಂದಿದ್ದರು. ತಂದೆ ಚಂದ್ರಶೇಖರ ಮಾಮನಿ ಎರಡು ಬಾರಿ ಶಾಸಕರಾಗಿ, ಒಮ್ಮೆ ಉಪಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಆನಂದ ಮಾಮನಿ 2008ರ ಮೊದಲ ಪ್ರಯತ್ನದಲ್ಲಿ ವಿಧಾನಸಭೆ ಪ್ರವೇಶಿಸಿದರು. ಬಳಿಕ ಸತತ ಮೂರು ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದರು. ಅವರ ಅಭಿಮಾನಿ ಬಳಗದವರು ಸವದತ್ತಿ ಮೋದಿ ಎಂದೆಲ್ಲ ಉಪನಾಮಗಳಿಂದ ಕರೆಯುತ್ತಿದ್ದರು.

ಪ್ರಮುಖ ಸುದ್ದಿ :-   ಕಾರವಾರ : ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ

ಸಿಎಂ ಬೊಮ್ಮಾಯಿ ಸಂತಾಪ
ಇನ್ನು ಶಾಸಕ ಆನಂದ್ ಮಾಮನಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ. “ನಮ್ಮ ಪಕ್ಷದ ಶಾಸಕರು, ರಾಜ್ಯ ವಿಧಾನಸಭೆಯ ಮಾನ್ಯ ಉಪ ಸಭಾಧ್ಯಕ್ಷರಾದ ಆತ್ಮೀಯ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಉಡುಪಿ : ನಾಳೆ (ಜುಲೈ 19) ಶಾಲಾ-ಪಿಯು ಕಾಲೇಜುಗಳಿಗೆ ರಜೆ ಘೋಷಣೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement