ನ್ಯೂಯಾರ್ಕ್: ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ನ (Twitter) ನೂತನ ಮಾಲೀಕ, ವಿಶ್ವದ ಅತಿ ಶ್ರೀಮಂತ ಎಲಾನ್ ಮಸ್ಕ್ ಹೊಸ ಘೋಷಣೆ ಮಾಡಿದ್ದು, ಟ್ವಿಟರ್ಗೆ ‘ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.
ಈ ಮಂಡಳಿಯು ಪ್ರಮುಖ ಕಂಟೆಂಟ್ಗಳು ಮತ್ತು ಖಾತೆ ಮರುಸ್ಥಾಪನೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿ ಖರೀದಿಸುವ 44 ಶತಕೋಟಿ ಡಾಲರ್ ಒಪ್ಪಂದ ಪೂರ್ಣಗೊಂಡ ಬೆನ್ನಲ್ಲೇ ಮಸ್ಕ್ ಅವರು ಕಂಪನಿಯ ಮಾಲೀಕತ್ವ ಪಡೆದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.
ವೈವಿಧ್ಯಮಯ ದೃಷ್ಟಿಕೋನದೊಂದಿಗೆ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ಅನ್ನು ಟ್ವಿಟರ್ ಸ್ಥಾಪಿಸಲಿದೆ. ಈ ಹಿಂದೆ ಕಂಟೆಂಟ್ ಬಗ್ಗೆ ನಿರ್ಧಾರ ಕೈಗೊಳ್ಳಲು ಟ್ವಿಟರ್ನಲ್ಲಿ ವ್ಯವಸ್ಥೆ ಇರಲಿಲ್ಲ ಎಂದು ಅವರು ಶುಕ್ರವಾರ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಟ್ವಿಟರ್ ಕಂಟೆಂಟ್ ವಿಚಾರಕ್ಕೆ ಸಂಬಂಧಿಸಿ ಹಲವು ಊಹಾಪೋಹಗಳು ಹರಿದಾಡಿದ್ದವು.
ಇದಕ್ಕೆ ಸ್ಪಷ್ಟನೆ ನೀಡಿ ಶನಿವಾರ ಟ್ವೀಟ್ ಮಾಡಿರುವ ಮಸ್ಕ್, ನಾವಿನ್ನೂ ಟ್ವಿಟರ್ನ ಕಂಟೆಂಟ್ ಮಾಡರೇಷನ್ ನಿಯಮಗಳಲ್ಲಿ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ.ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಹೇಗಿರಲಿದೆ? ಯಾವ ರೀತಿಯಲ್ಲಿ ಕಾರ್ಯಾಚರಿಸಲಿದೆ ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಎಲಾನ್ ಮಸ್ಕ್ ಅವರು ಸುಮಾರು 44 ಶತಕೋಟಿ ಡಾಲರ್ಗೆ ಟ್ವಿಟರ್ ಅನ್ನು ಖರೀದಿ ಮಾಡಿರುವುದು ಶುಕ್ರವಾರ ಬೆಳಿಗ್ಗೆ ಅಧಿಕೃತಗೊಂಡಿತ್ತು. ಖರೀದಿ ಪ್ರಕ್ರಿಯೆ ಅಧಿಕೃತಗೊಂಡ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿದ್ದ ಮಸ್ಕ್, ‘ಬರ್ಡ್ ಈಸ್ ಫ್ರೀಡ್’ ಎಂದು ಬರೆದಿದ್ದರು. ಬೆನ್ನಲ್ಲೇ, ಸಿಇಒ ಪರಾಗ್ ಅಗರ್ವಾಲ್, ಟ್ವಿಟರ್ನ ಸಿಎಫ್ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಕಾನೂನು ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ವಜಾ ಮಾಡಿದ್ದರು. ವಜಾಗೊಳಿಸಿರುವ ಮೂವರು ಉನ್ನತ ಉದ್ಯೋಗಿಗಳಿಗೆ ಟ್ವಿಟರ್ ನಿರ್ಗಮನ ಮೊತ್ತವಾಗಿ ಒಟ್ಟು ಅಂದಾಜು 800 ಕೋಟಿ ರೂ. ನೀಡಬೇಕಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ