ಜೊಯಿಡಾ : ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಹುಚ್ಚಾಟ ಮಾಡಿದ್ದ ಯುವಕನ ಬಂಧನ

ಕಾರವಾರ: ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಗಡಿಯ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಕಾರನ್ನು ಚಲಾಯಿಸಿಕೊಂಡು ಹೋಗಿ ಹುಚ್ಚಾಟ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಜೊಯಿಡಾ ತಾಲೂಕಿನ ಉಳವಿ ಗ್ರಾಮದ ನಿವಾಸಿ ಮುಜಾಹಿದ್ ಆಜಾದ್ ಸಯ್ಯದ್(25) ಬಂಧಿತ ಎಂದು ತಿಳಿದುಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಗ್ರಾ.ಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೊಖಾಶಿ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಳವಿ ಗ್ರಾಮದ ನಿವಾಸಿಯಾಗಿರುವ ಮುಜಾಹಿದ್ ಆಜಾದ್ ಸಯ್ಯದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಮಹಾರಾಷ್ಟ್ರ ನೋಂದಣಿಯ ಕಾರನ್ನು ಪತ್ತೆ ಮಾಡಿದ ಪ್ರಕರಣ ದಾಖಲಿಸಲಾಗಿತ್ತು.

ಘಟನೆ ಹಿನ್ನೆಲೆ
ಯಲ್ಲಾಪುರ ಹಾಗೂ ಜೊಯಿಡಾ ತಾಲೂಕಿನ ಗಡಿಯ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಕಾರನ್ನು ಚಲಾಯಿಸಿಕೊಂಡು ಹೋಗಿ ಪುಂಡಾಟ ಮೆರೆಯಲಾಗಿತ್ತು.
ಜನರು ಓಡಾಡಲು ಹಾಗೂ ಬೈಕ್‌ ಮಾತ್ರ ಸೇತುವೆ ಮೇಲೆ ತೆಗೆದುಕೊಂಡು ಹೋಗಲು ಅವಕಾಶವಿದೆ. ಉಳಿದ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ತೂಗು ಸೇತುವೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಕ್ಕೆ ಸ್ಥಳೀಯರು ಆಕ್ಷೇಪಿಸಿದಾಗ ಕಾರಿನಲ್ಲಿದ್ದವರು ಅನುಚಿತವಾಗಿ ವರ್ತಿಸಿ, ದರ್ಪ ತೋರಿದ್ದರು. ಸೇತುವೆಯಲ್ಲಿ ಸಾಗಿ ಬಹುದೂರ ಬಂದಿದ್ದ ಕಾರನ್ನು ಸ್ಥಳೀಯರು ತಡೆದು, ಬಂದ ದಾರಿಯಲ್ಲೇ ಹಿಂದಕ್ಕೆ ಕಳುಹಿಸಿದ್ದರು.

ಕಾರು ಚಲಾಯಿಸಿ ಸೇತುವೆಗೆ ಹಾನಿಯಾಗಿ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ ಎಂದು ಪ್ರವಾಸಿಗರನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಗುಜರಾತಿನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಘಟನೆ ಮುಂದಿರುವಾಗಲೇ ಎಚ್ಚೆತ್ತುಕೊಳ್ಳದೇ ಶಿವಪುರ ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಕಾರು ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ಬಂಧನವಾಗಿದೆ. ಗ್ರಾಮಸ್ಥರಿಗೆ ಈ ತೂಗು ಸೇತುವೆ ದೈನಂದಿನ ಜೀವನದ ಅಗತ್ಯ ಸೌಕರ್ಯವಾಗಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement