ಮಲಪ್ಪುರಂ: ಚಲಿಸುತ್ತಿದ್ದ ಬಸ್ನತ್ತ ನುಗ್ಗಿದ ವ್ಯಕ್ತಿಯೊಬ್ಬ ತಲೆಯಿಂದ ಗುದ್ದಿ ಬಸ್ಸಿನ ಗಾಜನ್ನು ಒಡೆದು ಹಾಕಿರುವ ಘಟನೆ ಕೇರಳದಲ್ಲಿ ನಡೆದಿದ್ದು ಡಿಕ್ಕಿಯ ರಭಸಕ್ಕೆ ವ್ಯಕ್ತಿ ಬಸ್ಸಿನಿಂದ ಕೆಲವು ಮೀಟರ್ ದೂರದಲ್ಲಿ ಹಾರಿ ಬಿದ್ದಿದ್ದಾನೆ. ಹೆಚ್ಚಿನ ಅಪಾಯವನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದಾನೆ. ಈ ಘಟನೆಯ ವೀಡಿಯೊ ಜನರನ್ನು ಬೆಚ್ಚಿಬೀಳಿಸಿದೆ.
ಶರ್ಟ್ ಧರಿಸದ ವ್ಯಕ್ತಿ ಚಲಿಸುತ್ತಿರುವ ಬಸ್ನ ಗಾಜನ್ನು ತಲೆಯಿಂದ ಗುದ್ದಿ ಒಡೆದು ಹಾಕಿದ ನಂತರ ಎದ್ದು ಕುಳಿತು ಗೊಣಗುತ್ತಿರುವುದನ್ನು ವೈರಲ್ ವೀಡಿಯೊ ತೋರಿಸಿದೆ. ನಂತರ ಪೊಲೀಸರು ಯುವಕ ಮಾನಸಿಕ ಅಸ್ವಸ್ಥ ಎಂದು ಖಚಿತಪಡಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪೆರಿಂತಲ್ಮನ್ನಾ ಸಮೀಪದ ಜುಬಿಲಿ ಜಂಕ್ಷನ್ನಲ್ಲಿ ಈ ಘಟನೆ ನಡೆದಿದೆ. ಡಿಕ್ಕಿಯಾದ ನಂತರ ಯುವಕ ಎದ್ದು ಬಂದು ತನಗೆ ಡಿಕ್ಕಿ ಹೊಡೆದ ಬಸ್ಸಿನ ಚಾಲಕನ ಸೀಟನ್ನು ಹತ್ತಿದ. ಸ್ಟಿಯರಿಂಗ್ ಮೇಲೆ ಕಾಲಿಟ್ಟು ಕುಳಿತಿದ್ದ ಆತನನ್ನು ಜನರು ನೋಡಿ ಒಂದು ಕ್ಷಣ ಭಯಭೀತರಾಗುವುದನ್ನು ಎಂದು ವೀಡಿಯೊ ತೋರಿಸಿದೆ.
ಆತನನ್ನು ಸಮಾಧಾನಪಡಿಸಲು ಪ್ರಯಾಣಿಕರು ಮತ್ತು ಸ್ಥಳೀಯರು ನಡೆಸಿದ ಪ್ರಯತ್ನ ವಿಫಲವಾಯಿತು ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ತಲೆ ಮತ್ತು ಕಾಲುಗಳಲ್ಲಿ ರಕ್ತ ಸುರಿಯುತ್ತಿದ್ದ ವ್ಯಕ್ತಿಯನ್ನು ಪೆರಿಂತಲ್ಮನ್ನಾ ಮೌಲಾನಾ ಆಸ್ಪತ್ರೆಗೆ ಒಯ್ಯಲಾಯಿತು ಎಂದು ಮಾತೃಭೂಮಿ ತಿಳಿಸಿದೆ. ನಂತರ, ಅವರನ್ನು ಆತನನ್ನು ಪೋಷಕರು ಕೋಝಿಕ್ಕೋಡ್ನ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದರು ಎಂದು ಸುದ್ದಿ ವರದಿ ಹೇಳಿದೆ.
ವಾಟ್ಸಾಪ್ನಲ್ಲಿ ವೈರಲ್ ವೀಡಿಯೊ ಜೊತೆಗೆ ಹರಡಿದ ಆಡಿಯೊ ಟಿಪ್ಪಣಿಗಳು ಆ ವ್ಯಕ್ತಿಯು ತಾನು ಬ್ರೆಜಿಲ್ನ ಫುಟ್ಬಾಲ್ ಆಟಗಾರ ಎಂದು ಹೇಳಿಕೊಂಡಿದ್ದಾನೆ ಮತ್ತು ಅರ್ಜೆಂಟೀನಾ ಪಟ್ಟೆಗಳನ್ನು ಹೋಲುವ ಬಸ್ನ ನೀಲಿ ಬಣ್ಣದ ಬಗ್ಗೆ ಅತೃಪ್ತಿ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನೇಮರ್ ಸೇರಿದಂತೆ ತಂಡದ ಸಹ ಆಟಗಾರರು ಬಂದ ನಂತರವೇ ಕೆಳಗೆ ಇಳಿಯುವುದಾಗಿ ಆ ವ್ಯಕ್ತಿ ಡ್ರೈವಿಂಗ್ ಸೀಟಿನಿಂದ ಘೋಷಿಸಿದ್ದಾನೆ ಎಂದು ವಾಯ್ಸ್ ನೋಟ್ ಹೇಳಿಕೊಂಡಿದೆ. ಆದರೆ, ಪೊಲೀಸರಿಂದ ಈ ಬಗ್ಗೆ ಯಾವುದೇ ದೃಢೀಕರಣವಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ