ಸಂಸ್ಕೃತ, ಭಗವದ್ಗೀತೆ, ಉಪನಿಷತ್ತುಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಮಾದರಿಯಾದ ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ…!

ತ್ರಿಶೂರ್ (ಕೇರಳ): ಮಧ್ಯ ಕೇರಳದ ಜಿಲ್ಲೆಯ ತ್ರಿಶೂರ್‌ನ ಇಸ್ಲಾಮಿಕ್ ಶಿಕ್ಷಣ ನೀಡುವ ಸಂಸ್ಥೆಯೊಂದರಲ್ಲಿ ಉದ್ದನೆಯ ಬಿಳಿ ನಿಲುವಂಗಿ ಮತ್ತು ಬಿಳಿಯ ಶಿರೋವಸ್ತ್ರಗಳನ್ನು ಧರಿಸಿರುವ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಶ್ಲೋಕ ಮತ್ತು ‘ಮಂತ್ರ’ಗಳನ್ನು ಪಠಣ ಮಾಡುತ್ತಾರೆ…! ಕೇರಳದಲ್ಲಿರುವ ಈ ಇಸ್ಲಾಮಿಕ್ ಸಂಸ್ಥೆಯಲ್ಲಿ ಮಕ್ಕಳು ಹಿಂದೂ ಶಿಕ್ಷಕರ ಬಳಿ ಸಂಸ್ಕೃತ ಶ್ಲೋಕ, ಮಂತ್ರ ಅಭ್ಯಾಸ ಮಾಡುತ್ತಿದ್ದಾರೆ.
ಇಲ್ಲಿ ಗುರುರ್‌ ಬ್ರಹ್ಮ ಗುರುರ್‌ ವಿಷ್ಣು ಗುರುರ್‌ ದೇವೋ ಮಹೇಶ್ವರ, ಗುರುರ್‌ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಮಂತ್ರದಿಂದಲೇ ತರಗತಿ ಆರಂಭವಾಗುತ್ತದೆ. “ಉತ್ತಮ (ಅತ್ಯುತ್ತಮ),” ಎಂದು ಪ್ರಾಧ್ಯಾಪಕರು ಸಂಸ್ಕೃತದಲ್ಲಿ ಪ್ರತಿಕ್ರಿಯಿಸುತ್ತಾರೆ.
ಈ ತರಗತಿಯಲ್ಲಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ನಡುವಿನ ಎಲ್ಲಾ ಸಂಭಾಷಣೆಗಳು ಸಂಸ್ಕೃತದಲ್ಲಿದೆ. ಮಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (MIC) ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS) ನ ಪ್ರಾಂಶುಪಾಲರಾದ ಓಂಪಿಲ್ಲಿ ಮುಹಮ್ಮದ್ ಫೈಝಿ, ಈ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ, ಉಪನಿಷತ್ತುಗಳು, ಪುರಾಣ ಇತ್ಯಾದಿಗಳನ್ನು ಕಲಿಸುವ ಹಿಂದಿನ ಉದ್ದೇಶ ಇತರ ಧರ್ಮಗಳ ಬಗ್ಗೆ ವಿದ್ಯಾರ್ಥಿಯಲ್ಲಿ ಜ್ಞಾನ ಮತ್ತು ಅರಿವು ಮೂಡಿಸುವುದು ಎಂದು ಹೇಳಿದ್ದಾರೆ.

ಈ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಲು ಇನ್ನೊಂದು ಕಾರಣ ಮತ್ತು ಮುಖ್ಯವಾದದ್ದು ಫೈಜಿಯವರ ಸ್ವಂತ ಶೈಕ್ಷಣಿಕ ಹಿನ್ನೆಲೆ. ಏಕೆಂದರೆ ಅವರು ಸ್ವತಃ ಶಾಂಕರ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದವರಾಗಿದ್ದಾರೆ.
ಆದ್ದರಿಂದ, ವಿದ್ಯಾರ್ಥಿಗಳು ಇತರ ಧರ್ಮಗಳು ಮತ್ತು ಅವರ ಪದ್ಧತಿಗಳು ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಾವು ಭಾವಿಸಿದೆವು. ಆದರೆ ಸಂಸ್ಕೃತದ ಜೊತೆಗೆ ‘ಉಪನಿಷತ್ತುಗಳು’, ‘ಶಾಸ್ತ್ರಗಳು’, ‘ವೇದಾಂತಗಳ’ ಆಳವಾದ ಅಧ್ಯಯನ ಎಂಟು ವರ್ಷಗಳ ಅಧ್ಯಯನದ ಅವಧಿಯಲ್ಲಿ ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಬದಲಿಗೆ ಇವುಗಳ ಬಗ್ಗೆ ಮೂಲಭೂತ ಜ್ಞಾನವನ್ನು ನೀಡಿ ವಿದ್ಯಾರ್ಥಿಗಳಿಗೆ ಇನ್ನೊಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಫೈಜಿ ಹೇಳಿದ್ದಾರೆ.
ಭಗವದ್ಗೀತೆ, ಉಪನಿಷತ್ತುಗಳು, ಮಹಾಭಾರತ ಮತ್ತು ರಾಮಾಯಣದ ಪ್ರಮುಖ ಭಾಗಗಳನ್ನು 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಎಂಟು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿಯೇ ಕಲಿಸಲಾಗುತ್ತದೆ ಎಂದು ಅವರು ಹೇಳಿದರು.
ಸಂಸ್ಥೆಯು ಪ್ರಾಥಮಿಕವಾಗಿ ಷರಿಯಾ ಕಾಲೇಜಾಗಿದ್ದು, ಅಲ್ಲಿ ಉರ್ದು ಮತ್ತು ಇಂಗ್ಲಿಷ್‌ನಂತಹ ಇತರ ಭಾಷೆಗಳನ್ನು ಸಹ ಕಲಿಸಲಾಗುತ್ತದೆ, ಜೊತೆಗೆ ಭಗವದ್ಗೀತೆ, ಉಪನಿಷತ್ತುಗಳು, ಮಹಾಭಾರತ ಮತ್ತು ರಾಮಾಯಣದ ಪಠ್ಯಗಳ ಆಯ್ದ ಭಾಗಗಳ ಬೋಧನೆ ನಡೆಯುತ್ತದೆ. ಅಲ್ಲದೆ ಕ್ಯಾಲಿಕಟ್ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾಗಿರುವ ಆರ್ಟ್ಸ್‌ನಲ್ಲಿ ಪದವಿ ಕೋರ್ಸ್ ಸಹ ಕಲಿಸಲಾಗುತ್ತದೆ. ಶೈಕ್ಷಣಿಕ ಕೆಲಸದ ಹೊರೆ ದೊಡ್ಡದಾಗಿದೆ. ಆದ್ದರಿಂದ, ನಾವು ಅದನ್ನು ನಿಭಾಯಿಸುವ ಮತ್ತು ಗುಣಮಟ್ಟವನ್ನು ಕಾಪಾಡುವ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಇದೆ ಎಂದು ಅವರು ಹೇಳಿದರು.

ಇಂದಿನ ಪ್ರಮುಖ ಸುದ್ದಿ :-   ವಿಮಾನ ಹಾರುತ್ತಿದ್ದಾಗಲೇ ಚಿಕ್ಕ ಮಗುವಿಗೆ ತೀವ್ರ ಉಸಿರಾಟದ ತೊಂದರೆ : ದೇವರಂತೆ ಬಂದು ಕಾಪಾಡಿದ ಇಬ್ಬರು ವೈದ್ಯರು...

ಆರಂಭದಲ್ಲಿ ಅರೇಬಿಕ್ ಭಾಷೆಯಂತೆಯೇ ಸಂಸ್ಕೃತವನ್ನು ಕಲಿಯುವುದು ಕಷ್ಟಕರವಾಗಿತ್ತು, ಆದರೆ ನಿರಂತರವಾಗಿ ಅಧ್ಯಯನ ಮತ್ತು ಅಭ್ಯಾಸದಿಂದ ಕಾಲಕ್ರಮೇಣ ಸುಲಭವಾಯಿತು ಎಂದು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಸ್ಕೃತ ಆರಂಭದಲ್ಲಿ ಅರೇಬಿಕ್‌ನಂತೆಯೇ ಕಠಿಣವಾಗಿತ್ತು. ಆದರೆ ನಾವು ಅದನ್ನು ನಿರಂತರವಾಗಿ ಅಧ್ಯಯನ ಮಾಡಿದರೆ ಮತ್ತು ಪದೇ ಪದೇ ಅಭ್ಯಾಸ ಮಾಡಿದರೆ, ಸ್ವಲ್ಪ ಸಮಯದ ನಂತರ ಅದು ಸುಲಭವಾಗುತ್ತದೆ. ನಿಯಮಿತ ತರಗತಿಗಳು ಮತ್ತು ಪರೀಕ್ಷೆಗಳು ಸಹ ಅದನ್ನು ಕಲಿಯಲು ನಮಗೆ ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.
ಈ ಇಸ್ಲಾಮಿಕ್‌ ಸಂಸ್ಥೆಯಲ್ಲಿ ಸಂಸ್ಕೃತ ಕಲಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಂದ ಅಥವಾ ಬೇರೆಯವರಿಂದ ಯಾವುದೇ ಆಕ್ಷೇಪಣೆ ಇಲ್ಲದಿದ್ದರೂ, ಸಂಸ್ಕೃತ, ಭಗವದ್ಗೀತೆ, ಉಪನಿಷತ್ತುಗಳು ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ಕಲಿಸಲು ಉತ್ತಮ ಅಧ್ಯಾಪಕರನ್ನು ಹುಡುಕುವುದು ದೊಡ್ಡ ಸವಾಲಾಗಿದೆ ಎಂದು ಫೈಜಿ ಹೇಳುತ್ತಾರೆ.
ನಾವು ಏಳು ವರ್ಷಗಳ ಹಿಂದೆ ಸಂಸ್ಕೃತವನ್ನು ಕಲಿಸಲು ಪ್ರಾರಂಭಿಸಿದ್ದೇವೆ ಮತ್ತು ಇದನ್ನು ಸಂಸ್ಥೆಯ ಈ ಬ್ರ್ಯಾಂಚ್‌ನಲ್ಲಿ ಮಾತ್ರ ಕಲಿಸಲಾಗುತ್ತಿದೆ, ಒಟ್ಟು ಏಳು ಬ್ರ್ಯಾಂಚ್‌ಗಳಿವೆ ಎಂದು ಪ್ರಾಂಶುಪಾಲ ಫೈಜಿ ಹೇಳಿದರು.ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯಕ್ರಮವನ್ನು ರೂಪಿಸಿದ ಅತ್ಯುತ್ತಮ ಅಧ್ಯಾಪಕರನ್ನು ನಾವು ಹೊಂದಿದ್ದೇವೆ. ಸಂಸ್ಕೃತ ಕಲಿಯಲು ಆಸಕ್ತಿ ತೋರಿರುವ ವಿದ್ಯಾರ್ಥಿಗಳ ಕಡೆಯಿಂದ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಅಧ್ಯಾಪಕರಲ್ಲಿ ಒಬ್ಬರಾದ ಪ್ರೊಫೆಸರ್ ಕೆ. ಕೆ. ಯತೀಂದ್ರನ್ ಅವರು ತನ್ನನ್ನು ಅಲ್ಲಿ ಕಲಿಸಲು ಆಹ್ವಾನಿಸಿದಾಗ ಫೈಝಿಯವರು “ನಾನು ಹಿಂದೂ ಆಗಿರುವುದರಿಂದ ಅರೇಬಿಕ್ ಸಂಸ್ಥೆಯಲ್ಲಿ ಬೋಧನೆ ಮಾಡುವ ಬಗ್ಗೆ ನನಗೆ ಏನಾದರೂ ರಿಸರ್ವೇಶನ್ಸ್‌ ಇದೆಯೇ ಎಂದು ಕೇಳಿದ್ದರು. ಇಲ್ಲಿ ಹಿಂದೂ ಅಥವಾ ಮುಸ್ಲಿಂ ಸಮಸ್ಯೆ ಇಲ್ಲ ಎಂದು ನಾನು ಹೇಳಿದೆ. ನಾನು ಅಲ್ಲಿಗೆ ಕಲಿಸಲು ತಯಾರಿದ್ದೇನೆ. ನನಗೆ ಅಂತಹ ಯಾವುದೇ ರಿಸರ್ವೇಶನ್ಸ್‌ ಇಲ್ಲ” ಎಂದು ಹೇಳಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಹಣೆಯ ಮೇಲೆ ಶ್ರೀಗಂಧದ ತಿಲಕವಿಟ್ಟುಕೊಂಡು ಇನ್ಸ್ಟಿಟ್ಯೂಟ್ ಕಡೆಗೆ ಹೋಗುತ್ತಿರುವುದನ್ನು ನೋಡಿದ ಜನರು ನಾನೇಕೆ ಅಲ್ಲಿಗೆ ಹೋಗುತ್ತಿದ್ದೇನೆ ಎಂದೂ ಕೇಳುತ್ತಾರೆ. ನಾನು ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲು ಹೋಗುತ್ತಿದ್ದೇನೆ ಎಂದು ನಾನು ಅವರಿಗೆ ಹೇಳುತ್ತೇನೆ ಮತ್ತು ನಾನು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಅವರು ನನಗೆ ಹೇಳುತ್ತಾರೆ ಎಂದು ತಿಳಿಸಿದರು.
ಯಾವುದೇ ಕಡೆಯಿಂದ ಯಾವುದೇ ನಕಾರಾತ್ಮಕ ಅಥವಾ ನಿರುತ್ಸಾಹದ ಟೀಕೆಗಳನ್ನು ಕೇಳಿಲ್ಲ.ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಅದನ್ನು ಪ್ರಶಂಸಿಸಿದ್ದಾರೆ ಮತ್ತು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ” ಎಂದು ಫೈಜಿ ಕೂಡ ಹೇಳಿದ್ದಾರೆ.
ಎಂಐಸಿ ಎಎಸ್‌ಎಎಸ್‌ನಲ್ಲಿ ಸಂಸ್ಕೃತ ಕಲಿಸುತ್ತಿರುವ ಡಾ.ರಮೇಶ ಅವರು, ಅಲ್ಲಿಗೆ ಬರುವ ಮೊದಲು ಅಲ್ಲಿನ ವಿದ್ಯಾರ್ಥಿಗಳು ಸಂಸ್ಕೃತವನ್ನು ಕೇಳಿರಲಿಲ್ಲ. ಅವರು ಅದನ್ನು ಶಾಲೆಯಲ್ಲಿ ಕಲಿತಿರಲಿಲ್ಲ. ಆದರೆ ನಾವು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋದಂತೆ, ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಸ್ವಲ್ಪ ಮಾತನಾಡಲು ಸಾಧ್ಯವಾಗುತ್ತದೆ, ‘ಪದಮ್’ಗಳನ್ನು ಕಲಿಯಲು ಮತ್ತು ಕೆಲವು ‘ಶ್ಲೋಕಗಳನ್ನು’ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.

ಇಂದಿನ ಪ್ರಮುಖ ಸುದ್ದಿ :-   ಎನ್‌ಐಎ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಐಸಿಸ್ ಭಯೋತ್ಪಾದಕ ದೆಹಲಿಯಲ್ಲಿ ಬಂಧನ

ಎಂಐಸಿ ಎಎಸ್‌ಎಎಸ್‌ನಲ್ಲಿ ಫೇಸ್‌ಬುಕ್ ಪುಟದ ಪ್ರಕಾರ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಸಾಹಿತ್ಯದ ನಿವೃತ್ತ ಪ್ರಾಧ್ಯಾಪಕ ಡಾ ಸಿ ಎಂ ನೀಲಕಂದನ್ ಮತ್ತು ಕೇರಳ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಶಂಸೀರ್ ಪಿ ಸಿ ಇತರ ಅಧ್ಯಾಪಕರು. ಸಂಸ್ಕೃತ ತರಗತಿಗಳ ದೃಶ್ಯಗಳನ್ನು ಸಂಸ್ಥೆಯ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.
ಕೇರಳದ ರಾಜಕೀಯ ಪಕ್ಷಗಳು ಉನ್ನತ ಶಿಕ್ಷಣ ಸಂಸ್ಥೆಗಳ ಕೇಸರಿಕರಣ ಅಥವಾ ಕಮ್ಯುನಿಸಂನ ಕೇಂದ್ರವಾಗುತ್ತಿವೆ ಎಂಬ ಆರೋಪದ ಮೇಲೆ ಜಗಳವಾಡುತ್ತಿರುವ ಸಮಯದಲ್ಲಿ, ಈ ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಅರೇಬಿಕ್ ಮತ್ತು ಕುರಾನ್ ಜೊತೆಗೆ ಸಂಸ್ಕೃತ ಮತ್ತು ಭಗವದ್ಗೀತೆಯನ್ನು ಕಲಿಸುವ ಮೂಲಕ ಮಾದರಿಯಾಗಿದೆ.
ಸಂಸ್ಥೆಯ ಸಂಯೋಜಕರಲ್ಲಿ ಒಬ್ಬರಾದ ಹಫೀಜ್ ಅಬೂಬಕರ್ ಅವರು ಮಾಧ್ಯಮ ವಾಹಿನಿಯೊಂದಕ್ಕೆ ಮಾತನಾಡಿ, ಇಸ್ಲಾಂ ಬಗ್ಗೆ ಕಲಿಯುವುದು ಮುಖ್ಯ, ಆದರೆ ಇತರ ಧರ್ಮಗಳ ಬಗ್ಗೆ ಜ್ಞಾನವೂ ಮುಖ್ಯವಾಗಿದೆ ಮತ್ತು ಪಠ್ಯಕ್ರಮದಲ್ಲಿ ಸಂಸ್ಕೃತವನ್ನು ಸೇರಿಸಲು ಇದು ಸಹ ಕಾರಣವಾಗಿದೆ ಎಂದು ಹೇಳಿದ್ದಾರೆ.
ಅವರ ಪ್ರಕಾರ ಪಠ್ಯಕ್ರಮದಲ್ಲಿ ಸಂಸ್ಕೃತವು ವಿದ್ಯಾರ್ಥಿಗಳು ತಮ್ಮ ಇತಿಹಾಸ ಮತ್ತು ಪುರಾಣಗಳ ಮೂಲಕ ಮತ್ತೊಂದು ಧರ್ಮದ ಬಗ್ಗೆ ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಅವರ ಧಾರ್ಮಿಕ ದೃಷ್ಟಿಕೋನಗಳೊಂದಿಗೆ ಸಿಂಕ್ರೊನೈಸ್ ಮಾಡಲು ಸಹಾಯ ಮಾಡುತ್ತದೆ. ಇದು ಹೊಸ ಭಾರತಕ್ಕೆ ಹೊಸ ಆರಂಭವನ್ನು ರಚಿಸಲು ಸಹಾಯ ಮಾಡುತ್ತದೆ. ಇದು ಇದರ ಹಿಂದಿನ ಗುರಿಯಾಗಿದೆ ಎಂದು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 5

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement