ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವ : ಮತ್ತೆ ಕಾಣಿಸಿಕೊಂಡ ಅನ್ಯಧರ್ಮೀಯರ ವ್ಯಾಪಾರ-ವಹಿವಾಟು ನಿಷೇಧಿಸುವ ಪೋಸ್ಟರ್‌

ಮಂಗಳೂರು: ಹೆಸರಾಂತ ಯಾತ್ರಾ ಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ‘ಚಂಪಾ ಷಷ್ಠಿ’ ಸಂದರ್ಭದಲ್ಲಿ, ಅನ್ಯಧರ್ಮೀಯರ ಅಂಗಡಿ-ಮುಂಗಟ್ಟುಗಳನ್ನು ನಿಷೇಧಿಸುವ ಪೋಸ್ಟ್‌ರ್‌ ಕಾಣಿಸಿಕೊಂಡಿದೆ.
‘ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ’ ಎಂಬ ಬ್ಯಾನರ್‌ ಕಾಣಿಸಿಕೊಂಡಿದ್ದು, ಹಿಂದೂ ಜಾಗರಣ ವೇದಿಕೆ ಸುಬ್ರಹ್ಮಣ್ಯ ಘಟಕದ ಹೆಸರಿನಲ್ಲಿ ಈ ಬ್ಯಾನರ್‌ ಅಳವಡಿಸಲಾಗಿದೆ.
‘ಹಿಂದೂಗಳಿಂದ, ಹಿಂದೂಗಳಿಗಾಗಿ, ಹಿಂದೂಗಳಿಗೋಸ್ಕರ’ ಎಂಬ ಅಡಿಬರಹ ಹೊಂದಿರುವ ಈ ಬ್ಯಾನರ್‌, ಈಗ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಹಲವೆಡೆ, ಹಿಂದೂ ಹಬ್ಬ ಹಾಗೂ ಜಾತ್ರೆಯ ಸಂದರ್ಭದಲ್ಲಿ ಅನ್ಯಧರ್ಮೀಯರು ವ್ಯಾಪಾರ ಮಾಡಕೂಡದು ಎಂಬ ಬ್ಯಾನರ್‌ಗಳು ಕಂಡುಬಂದಿದ್ದವು. ಈಗ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಆಚರಣೆ ಸಂದರ್ಭದಲ್ಲಿ ಮತ್ತೆ ಈ ಬ್ಯಾನರ್‌ ಕಂಡುಬಂದಿವೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 29ರಂದು ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾ ಷಷ್ಠಿ ಜಾತ್ರೆ ಅಂಗವಾಗಿ, ಶ್ರೀ ದೈವದ ಭಂಡಾರವು ಬುಧವಾರ (ನವೆಂಬರ್‌ 23) ದೇಗುಲಕ್ಕೆ ಆಗಮಿಸಿದೆ. ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಲ್ಲಿ ನಡೆದ ಪೂಜೆಯ ಬಳಿಕ ದೇಗುಲಕ್ಕೆ ದೈವದ ಭಂಡಾರವನ್ನು ತರಲಾಯಿತು. ಶ್ರೀದೇವರ ಉತ್ಸವಾದಿಗಳ ಕೊನೆಯ ದಿನದಂದು ಪುನಃ ದೇವರಗದ್ದೆಗೆ ಭಂಡಾರವನ್ನು ತೆಗೆದುಕೊಂಡು ಹೋಗಲಾಗುತ್ತದೆ.
ಚಂಪಾ ಷಷ್ಠಿಯು ಶಿವ ಹಾಗೂ ಸುಬ್ರಮಣ್ಯನನ್ನು ಪೂಜಿಸುವ ಉತ್ಸವವಾಗಿದೆ. ಈ ಉತ್ಸವ ಆರು ದಿನಗಳ ಕಾಲ ನಡೆಯುತ್ತದೆ. ಶಿವನು ಖಂಡೋಬ ರೂಪದಲ್ಲಿ ನೆಲೆಸಿದ್ದು, ಚಂಪಾ ಷಷ್ಠಿಯಂದು ಈ ಭಾಗಗಳಲ್ಲಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ಈ ಉತ್ಸವ ಮಾರ್ಗಶಿರ ಮಾಸದ ಶುಕ್ಲಪಕ್ಷದಂದು ನಡೆಯುತ್ತದೆ. ಸುಬ್ರಹ್ಮಣ್ಯನನ್ನು ಈ ದಿನ ಆರಾಧಿಸುವುದು ಸಂಪ್ರದಾಯವಾಗಿದೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್‌ 29ರಂದು ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.
ಚಂಪಾಷಷ್ಠಿ ರಥೋತ್ಸವದ ಹಿನ್ನೆಲೆಯಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಲಂಕೃತ ರಂಗಪೂಜೆ, ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಣ ಮಾಡಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ವಿಧಿಗಳು ಬುಧವಾರ (ನ23) ನೆರವೇರಿದವು. ರಥಬೀದಿಯ ಚಂದ್ರಮಂಡಲ ರಥದಲ್ಲಿ ಆರೂಢರಾದ ದೇವರಿಗೆ ಪೂಜೆ ಸಲ್ಲಿಸಲಾಯಿತು. ಕಾರ್ತಿಕ ಅಮಾವಾಸ್ಯೆ ನಿಮಿತ್ತ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಬುಧವಾರ ಸಂಭ್ರಮದಿಂದ ನೆರವೇರಿತು.

ಪ್ರಮುಖ ಸುದ್ದಿ :-   ಕರ್ನಾಟಕದ 7 ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ ಅಬ್ಬರ ; ಉಳಿದ ಜಿಲ್ಲೆಗಳಲ್ಲಿ ಚುರುಕು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement