ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ನಿಧನ

ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88 ವರ್ಷ) ಅವರು ಬುಧವಾರ ನಿಧನರಾಗಿದ್ದಾರೆ.
ಯಕ್ಷಗಾನದ ತೆಂಕತಿಟ್ಟು ಶೈಲಿಯ ಖ್ಯಾತ ಕಲಾವಿದರಾಗಿದ್ದ ಇವರು ಧರ್ಮಸ್ಥಳ, ಸುರತ್ಕಲ್ ಮತ್ತು ಇರಾ ಸೋಮನಾಥೇಶ್ವರ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934 ಮಾರ್ಚ್ 20ರಲ್ಲಿ ಕೇರಳದ ಕುಂಬಳೆಯಲ್ಲಿ ಜನಿಸಿದ ಅವರು ಪ್ರಸ್ತುತ ಮಂಗಳೂರಿನ ಪಂಪ್ ವೆಲ್ ಬಳಿ ವಾಸವಾಗಿದ್ದರು ಸುಂದರ ರಾವ್ ಅವರು ಪತ್ನಿ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿ 1994 ರಿಂದ 1999ರವರೆಗೆ ಕಾರ್ಯನಿರ್ವಹಿಸಿದ್ದರು. ಯಕ್ಷಗಾನ ಕಲಾವಿದರೊಬ್ಬರು ಮತದಾರರಿಂದಲೇ ನೇರವಾಗಿ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಯಕ್ಷಗಾನ, ತಾಳಮದ್ದಳೆಯಲ್ಲಿ ಕುಂಬ್ಳೆ ಸುಂದರ ರಾವ್‌ ಅಂದರೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮನೆಮಾತಾದ ಹೆಸರು. ಶ್ರೀಕೃಷ್ಣ, ಶ್ರೀರಾಮ, ನಹುಷ, ಚ್ಯವನ, ವಿಶ್ವಾಮಿತ್ರ, ಭರತ, ಕರ್ಣ, ವಿಷ್ಣು, ದ್ರೋಣ, ಅತಿಕಾಯ, ಪರೀಕ್ಷಿತ, ಹನುಮಂತ , ಋತುಪರ್ಣ , ಜಮದಗ್ನಿ , ಭೀಷ್ಮ , ದೇವವೃತ, ಉತ್ತರ, ಪರಶುರಾಮ, ಈಶ್ವರ, ಕ್ಷೇತ್ರಮಹಾತ್ಮೆಯ ಗೋವಿಂದ ದೀಕ್ಷಿತ , ಹೆಗ್ಗಡೆ ಮುಂತಾದ ಪಾತ್ರಗಳಲ್ಲಿ ಜನಪ್ರಿಯರಾಗಿ ಜನಮಾನಸದಲ್ಲಿ ಉಳಿಸಿದ್ದಾರೆ.
ತಮ್ಮ ಅಸ್ಖಲಿತ ವಾಕ್ಪಟುತ್ವ ಹಾಗೂ ಕನ್ನಡ ಭಾಷೆಯ ಸೊಗಸಾದ ನಿರೂಪಣೆ-ಶೈಲಿ ಮತ್ತು ಸಂಭಾಷಣೆಗಳಿಂದ ಕುಂಬ್ಳೆ ಸುಂದರ ರಾವ್ ಕಲಾಭಿಮಾನಿಗಳ ಮನಗೆದ್ದವರು. ಸುಪ್ರಸಿದ್ಧ ವೇಷಧಾರಿ ಕುಂಬ್ಳೆ ಕುಟ್ಯಪ್ಪನವರಿಂದ ಯಕ್ಷಗಾನದ ಪ್ರಾಥಮಿಕ ನೃತ್ಯಾಭ್ಯಾಸ ಮಾಡಿ 1953ರಲ್ಲಿ ಕೂಡ್ಲು ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ತಮ್ಮ ಪ್ರಥಮ ತಿರುಗಾಟ ನಡೆಸಿದರು.
ಮುಂದೆ ಇರಾ ಸೋಮನಾಥೇಶ್ವರ, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳಗಳಲ್ಲಿ ನಾಲ್ಕು ದಶಕಗಳ ಕಾಲ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಇಪ್ಪತ್ತೈದು ವರ್ಷ ಸತತ ಕಲಾಸೇವೆ ಮಾಡಿರುವುದು ಅವರ ಹೆಚ್ಚುಗಾರಿಕೆ. ತಾಳಮದ್ದಲೆ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಅರ್ಥಧಾರಿಯಾಗಿ ಗುರುತಿಸಿಕೊಂಡಿದ್ದ ಕುಂಬಳೆಯವರ ಅರ್ಥಗಾರಿಕೆ ಸರಳ, ಆಕರ್ಷಕ ಶೈಲಿಯದ್ದು.
1994ರಲ್ಲಿ ಸುರತ್ಕಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾದರು. 2009ರಿಂದ 2012ರ ವರೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸ್ಕಾರ ಭಾರತಿಯ ಕರ್ನಾಟಕ ಪ್ರಾಂತ್ಯ ರಾಜ್ಯಾಧ್ಯಕ್ಷರಾಗಿ ಕಾಯನಿರ್ವಹಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018-2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಬೆಹರಿನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ , ಪೇಜಾವರ ವಿಶ್ವೇಶ್ವ ತೀರ್ಥರಿಂದ ವಿಜಯವಿಠಲ ಪ್ರಶಸ್ತಿ, ಸೋದೆ ಮಠದ ಪರ್ಯಾಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಮೂಡಬಿದಿರೆ ಯಕ್ಷಸಂಗಮ ಪ್ರಶಸ್ತಿ , ಪಾವಂಜೆ ಯಕ್ಷಗಾನ ಸಪ್ತಾಹ ಪ್ರಶಸ್ತಿ ಮೊದಲಾದ ಸಂಮಾನಗಳಿಗೆ ಪಾತ್ರರಾಗಿದ್ದಾರೆ. 2007ರಲ್ಲಿ ಡಾ.ಡಿ.ಕೆ. ಚೌಟ ಪ್ರತಿಷ್ಠಾನದಿಂದ ಸುಂದರರಾಯರಿಗೆ ಸಾರ್ವಜನಿಕ ಸಮ್ಮಾನ ಮತ್ತು ಸುಂದರಕಾಂಡ ಗ್ರಂಥ ಸಮರ್ಪಣೆಯಾಗಿದೆ.

ಪ್ರಮುಖ ಸುದ್ದಿ :-   ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ : ಕಾಂಗ್ರೆಸ್ಸಿನ ಪುಟ್ಟಣ್ಣಗೆ ಜಯ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement