ಕುಮಟಾ: ಗೋ ಗ್ರೀನ್‌ನಲ್ಲಿ ಹವ್ಯಕ ಸೇವಾ ಪ್ರತಿಷ್ಠಾನದ ಸಮಾವೇಶ: ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು- ಕಾಗೇರಿ

ಕುಮಟಾ: ನಮ್ಮ ಬದುಕಿನ ಮಧ್ಯೆ ಬರುವ ಸಮಸ್ಯೆ ನಿವಾರಣೆಗೆ  ಹಾಗೂ ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು ಎಂದು ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಡಗಣಿಯ ಗೊ ಗ್ರೀನ್ ಮೈದಾನದಲ್ಲಿ ನಡೆದ ಹವ್ಯಕ ಸೇವಾ ಪ್ರತಿಷ್ಠಾನ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ವ್ಯವಹಾರಿಕ ಜಂಜಾಟದಲ್ಲಿ ಇರುತ್ತಾರೆ. ಇದರ ಮಧ್ಯೆ ಸಾಧನೆ ಹಾಗೂ ಸಂಘಟನೆ ಮಾಡಬೇಕು ಎಂದರು. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ತೊಡಗಿಸಿಕೊಂಡು ಅಸಾಮಾನ್ಯ ಶ್ರಮ ಮಾಡಿದಾಗ ಸಾಧನೆ ಸಾಧ್ಯ ಎಂದರು.
ನಮ್ಮ ಧರ್ಮ ಹಾಗೂ ಸಂಸ್ಕೃತಿಯಲ್ಲಿ ದೊಡ್ಡ ಜ್ಞಾನ ಸಂಪತ್ತಿದೆ. ಹಿಂದೂ ಧರ್ಮದಲ್ಲಿ ಜಾತಿ ಹಾಗೂ ಉಪಜಾತಿಗಳು ಎಷ್ಟಿದ್ದರೂ ಎಲ್ಲರೂ ಒಂದಾಗಬೇಕು, ಒಗ್ಗೂಡಬೇಕು. ಗೋವಿನ ರಕ್ಷಣೆ ಎಂದರೆ ಎಲ್ಲರೂ ಒಂದಾಗುತ್ತೇವೆ. ಹಿಂದೂ ಸಂಸ್ಕೃತಿ ರಕ್ಷಿಸುವುದು ನಮ್ಮ ಸಂಘಟನೆಯ ಕರ್ತವ್ಯವಾಗಬೇಕು ಎಂದರು.
ವೇದಗಳ ಸಂಸ್ಕೃತಿ ನಮ್ಮದು…
ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯರದ್ದು ವೇದಗಳ ಸಂಸ್ಕೃತಿ. ವೇದಗಳು ನಮ್ಮ ಮೂಲ. ಸಪ್ತರ್ಷಿಗಳ ಸಂಸ್ಕೃತಿ ನಮ್ಮದು ಎಂದರು.
ಹಸಿರೆಂದರೆ ಹವ್ಯಕರು. ಹವ್ಯಕರು ಅದೆಷ್ಟು ವೈವಿಧ್ಯಮಯ ಗಿಡ-ಮರಗಳನ್ನು ಗಳನ್ನು ಬೆಳೆಸಿದ್ದಾರೆ. ಇದೊಂದು ಗೋ ಗ್ರೀನ್ ಸಮಾವೇಶ ಎಂದು ಮಾರ್ಮಿಕವಾಗಿ ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ. ಎಲ್. ಹೆಗಡೆ, ಶಿವಾನಂದ ಹೆಗಡೆ ಕಡತೋಕ ಮತ್ತಿತರರು ಮಾತನಾಡಿ, ಹವ್ಯಕ ಇಂತಹ ಒಂದು ಸಂಘಟನೆ ಅತ್ಯಾವಶ್ಯಕವಾಗಿತ್ತು ಎಂದರು. ಬದಲಾದ ಕಾಲಕ್ಕೆ ಅನುಗುಣವಾಗಿ ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಅತ್ಯಾವಶ್ಯಕ ಎಂಬ ಅಭಿಪ್ರಾಯ ವ್ಯಕ್ತವಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹವ್ಯಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ ಜಿ ಭಟ್ಟ ಮಾತನಾಡಿ ನಮ್ಮಲ್ಲಿ ಸಂಘಟನೆ ಅಗತ್ಯತೆಯೇ ಈ ಸಂಘಟನೆಯ ಸ್ಥಾಪನೆಗೆ ಕಾರಣ ಎಂದು ಹೇಳಿದರು. ವಿದ್ವಾನ್‌ ಕೃಷ್ಣಾನಂದ ಭಟ್‌ ಬಲ್ಸೇ ಅವರು ಹವ್ಯಕ ಸೇವಾ ಪ್ರತಿಷ್ಠಾನದ ಸಮಾವೇಶದ ಮೊದಲು ವೇದಿಕೆ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಎಂ. ಜಿ. ಭಟ್ಟ, ರವೀಂದ್ರ ಭಟ್ಟ ಸೂರಿ. ಆರ್. ಎಸ್. ಹೆಗಡೆ. ಕೃಷ್ಣ ಹೆಗಡೆ ಮೊದಲಾದವರ ಸಂಘಟನೆಯಲ್ಲಿ ಹವ್ಯಕರ ಸಂಘಟನೆ ಕುರಿತಾದ ಸಮಾವೇಶದಲ್ಲಿ ಗೋಷ್ಠಿಗಳು, ಚರ್ಚೆಗಳು ನಡೆದವು. ಆಧುನಿಕ ಕೃಷಿ ಉಪಕರಣ ಪ್ರದರ್ಶನ ಮಾರಾಟ, ಸಂಪ್ರದಾಯಿಕ ಆಹಾರ ಮೇಳ ಆಕರ್ಷಣೀಯವಾಗಿತ್ತು.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement