ಮೊದಲ ಬಾರಿಗೆ ಸರ್ಕಾರದಿಂದಲೇ ಉಡುಪಿಯಲ್ಲಿ ಫೆಬ್ರವರಿ 11ರಿಂದ ಎರಡು ದಿನಗಳ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ

ಬೆಂಗಳೂರು : ಯಕ್ಷಗಾನ ರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಮಟ್ಟದ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.
ಕರ್ನಾಟಕದ ಗಂಡುಕಲೆ ಯಕ್ಷಗಾನದ ಸಮಸ್ಯೆ, ಭವಿಷ್ಯ ಹಾಗೂ ಸಮಕಾಲೀನ ಸ್ಥಿತಿಗತಿಗಳನ್ನು ಅವಲೋಕಿಸುವ ಪ್ರಯತ್ನದ ಭಾಗವಾಗಿ ಮೊದಲ ಬಾರಿಗೆ ರಾಜ್ಯ ಸರ್ಕಾರ ಈ ಸಮ್ಮೇಳನ ಆಯೋಜಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲಕುಮಾರ ನೇತೃತ್ವದಲ್ಲಿ ಸೋಮವಾರ ಈ ಸಂಬಂಧ ಮಹತ್ವದ ಸಭೆ ನಡೆಸಲಾಗಿದ್ದು, ಫೆಬ್ರವರಿ 11 ಹಾಗೂ 12 ರಂದು ಉಡುಪಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ಸಿದ್ಧತೆ ಹಾಗೂ ಗುಣಮಟ್ಟದೊಂದಿಗೆ ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಿದ್ದು, ಮೇಳ ಹಾಗೂ ಕಲಾವಿದರ ಸಮಸ್ಯೆ ಬಗ್ಗೆ ಪ್ರತ್ಯೇಕ ಗೋಷ್ಠಿ ಆಯೋಜನೆ ಮಾಡಲಾಗುತ್ತದೆ. ಸಚಿವ ಸುನಿಲಕುಮಾರ ಉಡುಪಿ‌ ಜಿಲ್ಲೆಯವರೇ ಆಗಿದ್ದು, ಉಡುಪಿಯಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.

ಯಕ್ಷಗಾನ ಕ್ಷೇತ್ರದ ವಿದ್ವಾಂಸರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ಫೆಬ್ರವರಿ 11,ಹಾಗೂ 12 ರಂದು ಅಹೋರಾತ್ರಿ ಯಕ್ಷಗಾನ ಪ್ರದರ್ಶನ, ಗೋಷ್ಠಿ, ತಾಳಮದ್ದಳೆ, ಪುಸ್ತಕ ಮಾರಾಟ ನಡೆಯಲಿದೆ. ಯಕ್ಷಗಾನದ ಬಡಗುತಿಟ್ಟುಮ ತೆಂಕುತಿಟ್ಟು, ಮೂಡಲಪಾಯ ಸೇರಿದಂತೆ ಯಕ್ಷಗಾನದ ಎಲ್ಲ ಪ್ರಭೇದಗಳ ಪ್ರದರ್ಶನ ಆಯೋಜಿಸಲಾಗುತ್ತದೆ.
ನಿಮ್ಮ ಮುಖಕ್ಕೆ ಬಣ್ಣ ಬೇಕೆ ?
ಸಮ್ಮೇಳನದ ಭಾಗವಾಗಿ ”ನಿಮ್ಮ ಮುಖಕ್ಕೆ ಬಣ್ಣ ಬೇಕೇ” ಎಂಬ ವರ್ಣ ವೈಭವ ಆಯೋಜಿಸಲಾಗಿದೆ. ಆಸಕ್ತರಿಗೆ ತೆಂಕು- ಬಡಗು ಶೈಲಿಯಲ್ಲಿ ಬಣ್ಣ ಹಚ್ಚಿ ವೇಷ ಕಟ್ಟಲಾಗುತ್ತದೆ. ಒಟ್ಟಾರೆಯಾಗಿ ಒಂದು ಸಾಹಿತ್ಯ ಸಮ್ಮೇಳನದಲ್ಲಿ ಯಾವ ಅಂಶಗಳು ಅಡಕವಾಗುತ್ತದೆಯೋ ಅವೆಲ್ಲವೂ ಯಕ್ಷ ಸಾಹಿತ್ಯ ಸಮ್ಮೇಳನದಲ್ಲಿ ಕಾಣಸಿಗುವಂತೆ ಮಾಡಲು ನಿರ್ಧರಿಸಲಾಗಿದೆ.
ಕೋವಿಡ್ ಕಾಲ ಘಟ್ಟದ ಬಳಿಕ ಯಕ್ಷಗಾನ ಪ್ರದರ್ಶನ ಹಾಗೂ ತಿರುಗಾಟದಲ್ಲಿ ಬದಲಾವಣೆಯಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಸ್ವಯಂ ಪ್ರೇರಣೆಯಿಂದ ಇಂಥದೊಂದು ಸಮ್ಮೇಳನದ ಆಯೋಜನೆಗೆ ಮುಂದಾಗಿದೆ.
ಕಾರ್ಯಕ್ರಮದ ಭಾಗವಾಗಿ ಯಕ್ಷರಂಗದ ಮೇಳದ ಯಜಮಾನರಿಗೆ, ಪಿಎಚ್ ಡಿ ಪ್ರಬಂಧ ಮಂಡಿಸಿದವರಿಗೆ ಹಾಗೂ ಬಡ ಕಲಾವಿದರಿಗೆ ಸನ್ಮಾನಿಸಲು ನಿರ್ಧರಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement