ಹಲವು ದೇಶಗಳಲ್ಲಿ ಕೋವಿಡ್‌ ಹೆಚ್ಚಳ: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ, ಇವುಗಳನ್ನು ಪಾಲಿಸಲು ಸೂಚನೆ

ಬೆಂಗಳೂರು: ಚೀನಾ (China) ಸೇರಿ ಹಲವು ದೇಶಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬೆನ್ನಲ್ಲೇ ರಾಜ್ಯಗಳು ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿದ ನಂತರ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು (Covid Guidelines) ಬಿಡುಗಡೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಿಂದ ಕೋವಿಡ್-19 ಪರಿಸ್ಥಿತಿಯ ಹಿನ್ನಲೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಕ್ರಮಗಳಂತೆ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಎಲ್ಲ ಐಎಲ್ಐ, ಸಾರಿ ಪ್ರಕರಣಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಮಾರ್ಗಸೂಚಿ ಪ್ರಕಾರ, ಪಬ್, ಬಾರ್, ರೆಸ್ಟೋರೆಂಟ್, ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಚೇರಿಗಳು ಸೇರಿದಂತೆ ಬಸ್, ರೈಲು, ಮೆಟ್ರೋ, ವಿಮಾನಯಾನ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅಗತ್ಯ ಎಂದು ಹೇಳಿದೆ. ಅದರಲ್ಲೂ ವಿಶೇಷವಾಗಿ ವೃದ್ಧರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಒಳಾಂಗಣದಲ್ಲಿದ್ದಾಗಲೂ ಮಾಸ್ಕ್ ಧರಿಸುವುದು ಉತ್ತಮ ಎಂದು ಮಾರ್ಗಸೂಚಿ ಹೇಳಿದೆ.

ಅರ್ಹರೆಲ್ಲರೂ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಶೀಘ್ರವಾಗಿ ಪಡೆದುಕೊಳ್ಳಬೇಕು. ಉಸಿರಾಟದ ಸಮಸ್ಯೆ ಹಾಗೂ ಕೋವಿಡ್-19 ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ ಸ್ವಯಂ ಪ್ರತ್ಯೇಕವಾಗಿದ್ದು, ಪರೀಕ್ಷೆ ಮಾಡಿಸಿಕೊಳ್ಳಬೇಕು. ಫಲಿತಾಂಶದ ಆಧಾರದ ಮೇಲೆ ಚಾಲ್ತಿಯಲ್ಲಿರುವ ಪ್ರಮಾಣೀಕೃತ ಶಿಷ್ಠಾಚಾರದ ಅನ್ವಯ ಕ್ರಮಗಳನ್ನು ಅನುಸರಿಸಬೇಕು ಎಂದು ಅದು ಹೇಳಿದೆ.
ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಮಧ್ಯಮ ಪ್ರಮಾಣದ ವ್ಯಾಯಾಮ, ಉಸಿರಾಟದ ವ್ಯಾಯಾಮಗಳು ಹಾಗೂ ಧ್ಯಾನ ಮಾಡಬಹುದಾಗಿದೆ.
ಸಭೆ ಹಾಗೂ ಸಮಾರಂಭಗಳ ಆಯೋಜಕರು ಈ ಕೆಳಗಿನ ಮಾರ್ಗಸೂಚಿಯನ್ನು ಪಾಲಿಸುವುದನ್ನು ನಿರೀಕ್ಷಿಸಲಾಗಿದೆ
ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟೂ ಹೊರಾಂಗಣದಲ್ಲಿ ಮತ್ತು ಒಳ್ಳೆಯ ಗಾಳಿ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ, ಹಗಲು ಹೊತ್ತಿನಲ್ಲಿ ನಡೆಸುವುದರಿಂದ ಆರೋಗ್ಯದ ಮೇಲೆ ಮುಂಜಾನೆ ಹಾಗೂ ಸಂಜೆಯ ಶೀತ ಗಾಳಿಯ ಪರಿಣಾಮವನ್ನು ತಡೆಗಟ್ಟಬಹುದು. ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದ್ದು, ದೈಹಿಕ ಅಂತರವನ್ನು ಪಾಲಿಸಿ ಎಂದು ಸೂಚಿಸಲಾಗಿದೆ. ಹೆಚ್ಚಿನ ಜನರು ಗುಂಪುಗೂಡುವುದನ್ನು ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪುಗೂಡುವಿಕೆ ತಡೆಗಟ್ಟಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement