ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ಬೆಂಗಳೂರು: ಬಿಜೆಪಿಯ ಬಗ್ಗೆ ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಈಗ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ನೂತನ ರಾಜಕೀಯ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರಿಡಲಾಗಿದೆ ಎಂದು ಹೇಳಿದರು. ನಗರದಲ್ಲಿನ ತಮ್ಮ ಮನೆ ‘ಪಾರಿಜಾತ’ದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದರು
ನೂತನ ಪಕ್ಷ ಘೋಷಿಸಿದ ನಂತರ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ. ಸಾರ್ವಜನಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ಮುನ್ನಡೆಯುತ್ತೇನೆ. ರಾಜ್ಯಾದ್ಯಂತ ಹೊಸ ಪಕ್ಷದ ಸಂಘಟನೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂಬ ಬಗ್ಗೆ ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪಕ್ಷದ ಪ್ರಣಾಳಿಕೆಯನ್ನು ಶೀಘ್ರ ಘೋಷಿಸುತ್ತೇನೆ ಎಂದು ಹೇಳಿದರು.
ನಾನು ಬಿಜೆಪಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ನನ್ನ ಕಷ್ಟದ ದಿನಗಳಲ್ಲಿ ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಹೊರತಾಗಿ ಪಕ್ಷದ ಯಾರೊಬ್ಬರೂ ಜತೆಗೆ ನಿಲ್ಲಲಿಲ್ಲ ಎಂದು ದೂರಿದರು.
ಹಲವು ವರ್ಷಗಳ ಕಾಲ‌ ಬಿಜೆಪಿಗಾಗಿ ರಾಜ್ಯದುದ್ದಕೂ ಸುತ್ತಾಡಿದ್ದೆ. ಮೊದಲ ಬಾರಿಗೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ತರುವಲ್ಲಿ ನನ್ನ ಪಾತ್ರವೂ ಇತ್ತು. ಅಧಿಕಾರ‌ ಹಸ್ತಾಂತರ ಮಾಡದ‌ ಇದ್ದಾಗ ನಂತರದ ಚುನಾವಣೆಯಲ್ಲಿ ಸ್ವತಂತ್ರ ಬಿಜೆಪಿ ಸರ್ಕಾರ ತರುವಲ್ಲೂ ನನ್ನ ಪರಿಶ್ರಮ ಇತ್ತು. ಆದರೆ,‌ ನಾನು‌ ಜೈಲಿಗೆ ಹೋದಾಗ ಬಿಜೆಪಿ ಪಕ್ಷದವರು ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದರು.
ಶ್ರೀರಾಮುಲು ನಮ್ಮ ಸಹೋದರನಿದ್ದಂತೆ. ಶ್ರೀರಾಮುಲು ಅವರನ್ನು ನಾವು ಮನೆಯ ಮಗನ ಹಾಗೆ ನೋಡಿದ್ದೇವೆ. ಅವಕಾಶ ಸಿಕ್ಕ ಎಲ್ಲ ಸಂದರ್ಭಗಳಲ್ಲಿ ನನ್ನ ಬದಲಿಗೆ ಅವರಿಗೆ ಅಧಿಕಾರ ನೀಡುವಂತೆ ಪಕ್ಷದ ನಾಯಕರಿಗೆ ವಿನಂತಿಸಿದ್ದೆ. ಈಗ ಶ್ರೀರಾಮುಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅಧಿಕಾರ ತ್ಯಜಿಸಿ ನನ್ನ ಪಕ್ಷಕ್ಕೆ ಬನ್ನಿ ಎಂದು ಅವರಿಗೆ ನಾನು ಹೇಳುವುದಿಲ್ಲ. ಸೇರುವಂತೆ ಒತ್ತಡ ಹೇರುವುದಿಲ್ಲ. ಅವರಿಗೆ ತೋಚಿದಂತೆ ನಿರ್ಧಾರ ಕೈಗೊಳ್ಳಲಿ ಎಂದು ರೆಡ್ಡಿ ಹೇಳಿದರು.
ಮುಂದಿನ ದಿನಗಳಲ್ಲಿ ನನ್ನ ಪತ್ನಿಯೂ ನನ್ನ ಜೊತೆಗೆ ಇರುತ್ತಾರೆ. ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಳ್ಳುತ್ತಾರೆಎಂದರು.
ನನ್ನ ಕಷ್ಟದ ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ ನಮ್ಮ ಕುಟುಂಬವನ್ನು ಸಂತೈಸಿದ್ದರು. ಬೇರೆ ಯಾರೂ ಬಂದಿರಲಿಲ್ಲ. 2018ರಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಅಮಿತ್ ಶಾ, ಬಿಜೆಪಿಗೂ ಜನಾರ್ದನ ರೆಡ್ಡಿಗೂ ಸಂಬಂಧ ಇಲ್ಲ ಎಂದಿದ್ದರು. ಯಾರು ಹಾಗೆ ಹೇಳಿಸಿದ್ದರು ಎಂಬುದೂ ಗೊತ್ತಾಗಲಿಲ್ಲ. ಮನೆಯಲ್ಲಿ ಕುಳಿತು ಅದನ್ನು ನೋಡಿದೆ. ನನಗೆ ಮತ್ತು ನನ್ನ ಹೆಂಡತಿಗೆ ತೀವ್ರ ಬೇಸರವಾಯಿತು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement