ಸಿಜೆಪಿ ಪ್ರತಿಭಟನೆಗೂ ಮುನ್ನ ವಿಮಾನದಲ್ಲೇ ಅಭಿಜೀತ ದೀಪ್ಕೆ, ಸೌರವ ದಾಸ್, ಆಶುತೋಷ ರಾಂಕಾ ವಶಕ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಶನಿವಾರ ದೆಹಲಿಯಲ್ಲಿ ವಿಮಾನದಿಂದ ಇಳಿಯುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಜೆಪಿ ಸಂಘಟನೆಯ ಪ್ರತಿಭಟನೆಗೂ ಮುನ್ನ ಈ ಬೆಳವಣಿಗೆ ನಡೆದಿದೆ.
ದೀಪ್ಕೆ ಅವರ ಜೊತೆಗೆ ಸಿಜೆಪಿಯ ಸಹ ಸಂಚಾಲಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೀಪ್ಕೆ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ವಿಮಾನದೊಳಗೆ ಪ್ರವೇಶಿಸಿದ ಸಂದರ್ಭದಲ್ಲಿ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನಾವು ವಿಮಾನದಿಂದ ಹೊರಬರುವವರೆಗೆ ಕಾಯಬಹುದಿತ್ತಲ್ಲವೇ? ಬನ್ನಿ, ನಮ್ಮನ್ನು ಬಂಧಿಸಿ ಎಂದು ದೀಪ್ಕೆ ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಬರುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು ಸಹಕರಿಸುವಂತೆ ದೀಪ್ಕೆ ಅವರಿಗೆ ಮನವಿ ಮಾಡಿದ್ದು, “ಇದು ಬಂಧನವಲ್ಲ” ಎಂದು ಹೇಳಿದ್ದಾರೆ. ಯೂಟ್ಯೂಬರ್ ಧ್ರುವ್ ರಾಥಿ ಮತ್ತು ಸಿಜೆಪಿಯ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನು ಅವರವರ ನಿವಾಸಗಳಿಂದ ಪೊಲೀಸರು ವಶಕ್ಕೆ ಪಡೆದ ಸುಮಾರು ಒಂದು ಗಂಟೆಯ ಬಳಿಕ ದೀಪ್ಕೆ ಅವರನ್ನು ವಿಮಾನದಿಂದ ವಶಕ್ಕೆ ಪಡೆಯಲಾಗಿದೆ.ತಮ್ಮ ನಾಯಕರನ್ನು ವಶಕ್ಕೆ ಪಡೆದಿರುವುದನ್ನು ಸಿಜೆಪಿ ಖಂಡಿಸಿದೆ. ಇದು ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಸಂಘಟನೆ, ವಶಕ್ಕೆ ಪಡೆದಿರುವ ಎಲ್ಲ ನಾಯಕರನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದೆ.

ಪ್ರಮುಖ ಸುದ್ದಿ :-   ಬೈಇಲೆಕ್ಷನ್‌ : ನಂದಿಗ್ರಾಮದಲ್ಲಿ ಶೇ.75ಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಗೆಲುವು, ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಟಿವಿಕೆಗೆ ಮುನ್ನಡೆ

ಸಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಣೆ; ದೆಹಲಿಯಲ್ಲಿ ಬಿಗಿ ಭದ್ರತೆ
ಸಿಜೆಪಿ ಆಯೋಜಿಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಭದ್ರತಾ ಆತಂಕಗಳು ಮತ್ತು ಅಗತ್ಯ ಕಾರ್ಯವಿಧಾನದ ನಿಯಮಗಳನ್ನು ಉಲ್ಲೇಖಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಪ್ರತಿಭಟನೆಗೂ ಮುನ್ನ ಪೊಲೀಸರು ಸುಮಾರು 1,500 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು ಹಾಗೂ ಪರಿಸ್ಥಿತಿ ಶಾಂತಿಯುತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ನಿಷೇಧಾಜ್ಞೆಗಳು ಜಾರಿಯಲ್ಲಿವೆ ಎಂದು ತಿಳಿಸಿರುವ ಪೊಲೀಸರು, ನಿರ್ಬಂಧಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.
“ರಾಜ್ಯಾಂತರ ಮತ್ತು ಜಿಲ್ಲಾಂತರ ಗಡಿಗಳಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನುಮತಿಯಿಲ್ಲದ ವ್ಯಕ್ತಿಗಳು ನವದೆಹಲಿಯತ್ತ ತೆರಳುವುದನ್ನು ತಡೆಯಲಾಗುತ್ತಿದ್ದು, ತಪಾಸಣೆ ನಡೆಸಲಾಗುತ್ತಿದೆ. ದಿನವಿಡೀ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದೇ ನಮ್ಮ ಉದ್ದೇಶ” ಎಂದು ದಕ್ಷಿಣ ದೆಹಲಿ ಜಿಲ್ಲಾ ಡಿಸಿಪಿ ಅನಂತ ಮಿತ್ತಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಪ್ರತಿಭಟನೆ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision–SIR) ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಹಾಗೂ ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6ಕ್ಕೆ ಸಂಬಂಧಿಸಿದ ಬದಲಾವಣೆಗಳನ್ನು ವಿರೋಧಿಸಿ ಸಿಜೆಪಿ ಈ ಪ್ರತಿಭಟನೆಗೆ ಕರೆ ನೀಡಿತ್ತು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸುವುದು ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಸಂಘಟನೆ ಈ ಆಂದೋಲನವನ್ನು ಆಯೋಜಿಸಲು ಮುಂದಾಗಿದೆ.
ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಎಡಪಕ್ಷಗಳ ಮೈತ್ರಿಕೂಟ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಸಿಜೆಪಿಯ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಆದರೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರತಿಪಕ್ಷಗಳು ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದೆ. ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದೂ ಬಿಜೆಪಿ ಎಚ್ಚರಿಕೆ ನೀಡಿದೆ.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ 24 ಗಂಟೆ ಮೊಬೈಲ್ ಇಂಟರ್‌ನೆಟ್ ಸ್ಥಗಿತ : 4 ಕಿಮೀ ವ್ಯಾಪ್ತಿಗೆ ನಿರ್ಬಂಧ, ನಿರ್ಬಂಧಿತ ಮೆಟ್ರೋ ನಿಲ್ದಾಣಗಳ ಸಂಖ್ಯೆ ಇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement