ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣ: ಯಥಾಸ್ಥಿತಿ ಕಾಪಾಡಲು ಇಶಾ ಯೋಗ ಕೇಂದ್ರಕ್ಕೆ ಹೈಕೋರ್ಟ್‌

ಬೆಂಗಳೂರು : ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಅವಲಗುರ್ಕಿಯಲ್ಲಿ ಆದಿಯೋಗಿ ಪ್ರತಿಷ್ಠಾಪನೆಗೆ ಮಂಜೂರಾಗಿರುವ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಸದೆ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್‌ ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿ ಈ ನಿರ್ದೇಶನ ನೀಡಿದೆ.
ಅಲ್ಲದೆ, ಪ್ರತಿವಾದಿಗಳಾದ ಕೇಂದ್ರ ಪರಿಸರ ಇಲಾಖೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂಗರ್ಭ ಇಲಾಖೆಯ ನಿರ್ದೇಶಕರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ.
2019ರ ಮಾರ್ಚ್‌ 6ರಂದು ರಾಜ್ಯ ಸರ್ಕಾರವು ಇಶಾ ಯೋಗ ಕೇಂದ್ರಕ್ಕೆ ಭೂಮಿ ಮಂಜೂರು ಮಾಡಿರುವ ಅಧಿಸೂಚನೆಯನ್ನು ಪ್ರಶ್ನಿಸಿದ್ದ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅರ್ಜಿದಾರರಿಗೆ ನ್ಯಾಯಾಲಯವು ಅನುಮತಿ ನೀಡಿದೆ. ಒಂದು ವಾರದಲ್ಲಿ ಅರ್ಜಿ ತಿದ್ದುಪಡಿ ಮಾಡಿದ ಬಳಿಕ, ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಪೀಠವು ನೋಟಿಸ್‌ ಜಾರಿ ಮಾಡಿದೆ.

ನಂದಿ ಗಿರಿಧಾಮದ ಬೆಟ್ಟ ಸೇರಿದಂತೆ ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ನರಸಿಂಹ ದೇವರ ವಲಯಕ್ಕೆ ಸೇರಿವೆ. ನಂದಿ ಬೆಟ್ಟಕ್ಕೆ ಹೊಂದಿಕೊಂಡಿರುವ ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಫೌಂಡೇಶನ್​ಗೆ​ ಸೇರಿದ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿದಂತೆ ವಿವಿಧ ಕಾಯ್ದೆಗಳನ್ನು ಉಲ್ಲಂಘಿಸಿ ಸರ್ಕಾರ ಜಮೀನು ಮಂಜೂರು ಮಾಡಿದೆ. ನಂದಿ ಬೆಟ್ಟ ಮತ್ತು ನರಸಿಂಹ ದೇವರು ಬೆಟ್ಟದ ವ್ಯಾಪ್ತಿಯಲ್ಲಿ ಪರಿಸರ ಸಂಬಂಧಿ ಕಾನೂನುಗಳಿಗೆ ವಿರುದ್ಧವಾಗಿ ಪರಿಸರ ವ್ಯವಸ್ಥೆ, ಸ್ವಾಭಾವಿಕವಾಗಿ ಮಳೆ ನೀರು ಹರಿಯುವ ಪ್ರದೇಶ, ಜಲಮೂಲಗಳ ಚಹರೆ ಬದಲಿಸಲು ಮತ್ತು ಹಾನಿ ಉಂಟು ಮಾಡಲು ಇಶಾ ಯೋಗ ಕೇಂದ್ರಕ್ಕೆ ಸರ್ಕಾರದ ಪ್ರಾಧಿಕಾರಗಳು ಅವಕಾಶ ಮಾಡಿಕೊಟ್ಟಿವೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಇದರಿಂದ ಇಲ್ಲಿನ ಜನ-ಜೀವನ ಮತ್ತು ಕಾಡು ಪ್ರಾಣಿಗಳ ಬದುಕಿನ ಮೇಲೆ ನೇರ ಪರಿಣಾಮ ಉಂಟಾಗಲಿದೆ ಎಂದು ವಿವರಿಸಲಾಗಿದೆ.
ಈ ಪ್ರದೇಶ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಂಡಲ್ಲಿ ಜನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದೇ ಬೆಟ್ಟಗಳ ಸಾಲಿನಲ್ಲಿಯೇ ಉತ್ತರ ಪಿನಾಕಿನಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಮೂಲವಾಗಿವೆ. ಜತೆಗೆ, ಈ ಬೆಟ್ಟಗಳಲ್ಲಿನ ನೀರು ಸುತ್ತಮುತ್ತಲ ಸುಮಾರು 35ಕ್ಕೂ ಹೆಚ್ಚು ಹಳ್ಳಿಗಳ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುವುದರಿಂದ ಇದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಅವಲಗುರ್ಕಿಯ ಪ್ರಮುಖ ಪ್ರದೇಶ ಮತ್ತು ಹಸಿರು ವ್ಯಾಪ್ತಿ ಹೊಂದಿರುವ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅದನ್ನು ಇಶಾ ಯೋಗ ಕೇಂದ್ರ ಬಳಕೆ ಮಾಡುತ್ತಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಬೆಂಬಲದಿಂದ ಸ್ಥಳೀಯ ನಿವಾಸಿಗಳಿಗೆ ವಿರೋಧದ ನಡುವೆ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ಬಗ್ಗೆ ದೂರುಗಳು ಸಲ್ಲಿಕೆಯಾದರೂ ದೂರು ದಾಖಲಿಸಿಕೊಂಡಿದ್ದಲ್ಲ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಪೊಲೀಸರು ಮಹಿಳೆಯರು, ಗರ್ಭಿಣಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಕಾನೂನಿಗೆ ವಿರುದ್ಧವಾಗಿ ಇಶಾ ಯೋಗ ಕೇಂದ್ರದ ಪರವಾಗಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಗಳು ಆದೇಶ ಮಾಡಿವೆ. ಹೀಗಾಗಿ, ಅವಲಗುರ್ಕಿಯಲ್ಲಿ ಇಶಾ ಯೋಗ ಕೇಂದ್ರಕ್ಕೆ ಸಂಬಂಧಿಸಿದ ಭೂಮಿಗೆ ದಾಖಲೆ ಸಲ್ಲಿಸಲು ಆದೇಶಿಸಬೇಕು ಮತ್ತು ನಂದಿ ಬೆಟ್ಟದ ವ್ಯಾಪ್ತಿ ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಬೇಕು. ಪರಿಸರ ವ್ಯವಸ್ಥೆ, ಅವಲಗುರ್ಕಿ ಪ್ರದೇಶದ ಬೆಟ್ಟದ ಶ್ರೇಣಿಯಲ್ಲಿನ ಭೂ ಪ್ರದೇಶದ ಚಹರೆ ಬದಲಿಸದಂತೆಇಶಾ ಯೋಗ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲ ಎಂ ಶಿವಕುಮಾರ್‌ ಅವರು ವಾದಿಸಿದರು. ಸರ್ಕಾರದ ಪರವಾಗಿ ವಕೀಲೆ ಪ್ರತಿಮಾ ಹೊನ್ನಾಪುರ ಹಾಜರಿದ್ದರು.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

 

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement