ಒಂದು ಕಡೆ ಸ್ಪರ್ಧಿಸಿದರೆ ಬಲವಿಲ್ಲ… ಎರಡು ಕಡೆ ಸ್ಪರ್ಧಿಸಬೇಕು : ಸಿದ್ದರಾಮಯ್ಯಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

ಮಂಡ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಘೋಷಣೆ ಮಾಡಿದ್ದರೂ ಇನ್ನೂ ಯಾವುದೂ ಫೈನಲ್‌ ಆಗಿಲ್ಲ. ತವರು ಕ್ಷೇತ್ರ ವರುಣಾ ಅಥವಾ ಕೋಲಾರ (Kolara) ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆ ಎಂಬುದರ ಬಗ್ಗೆ ಸಿದ್ದರಾಮಯ್ಯರೇ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರ ಮನೆ ದೇವರು ಅವರ ರಾಜಕೀಯ ಭವಿಷ್ಯ ನುಡಿದಿದೆ.
ಸಿದ್ದರಾಮಯ್ಯ ಅವರ ಮನೆ ದೇವರಾದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿರುವ ಆದಿನಾಡು ಚಿಕ್ಕಮ್ಮ ದೇವಿ ದೇವಾಲಯಕ್ಕೆ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಶಾಸಕ ಯತೀಂದ್ರ ಸಿದ್ದರಾಮಯ್ಯ ಇತ್ತೀಚಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಬಗ್ಗೆ ಆದಿ ನಾಡು ಚಿಕ್ಕಮ್ಮತಾಯಿ ಭವಿಷ್ಯ ನುಡಿದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ನಿಂತರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

“ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ‌ ಚಾಚಿದರೆ ಆಗುವುದಿಲ್ಲ. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತದೆ. ಎರಡು ಕಡೆ ಚಾಚಿದರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ. ನಾನು ನಿಮ್ಮ ಮನೆ ಮೂಲ ದೇವರು, ಅವಕಾಶ ಸಿಕ್ಕಿದರೆ, ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು” ಎಂದು ದೇವಾಲಯದ ಅರ್ಚಕ ಡಾ. ಲಿಂಗಣ್ಣ ಅವರ ಮೈ ಮೇಲೆ ಬಂದ ಶಕ್ತಿ ದೇವತೆ ಸೂಚನೆ ನೀಡಿದೆ ಎನ್ನಲಾಗಿದೆ.
ಕಳೆದ ಬಾರಿ ಪುತ್ರ ಯತೀಂದ್ರ ಅವರಿಗಾಗಿ ತಮ್ಮ ವರುಣಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದ ಸಿದ್ದರಾಮಯ್ಯ ಬದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಬದಾಮಿ ಜನ ಸಿದ್ದರಾಮಯ್ಯ ಕೈ ಹಿಡಿದಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದರು. ಹೀಗಾಗಿ ಈ ಬಾರಿ ಈಗಾಗಲೇ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವ ಬಗ್ಗೆ ಘೋಷಣೆ ಮಾಡಿರುವ ಸಿದ್ದರಾಮಯ್ಯ ಮನೆ ದೇವರ ಸೂಚನೆಯಂತೆ ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಎನ್ನುವ ಕುತೂಹಲ ಸೃಷ್ಟಿಯಾಗಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement