ಭುವನೇಶ್ವರ: ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಕಿಶೋರ್ ದಾಸ್ ಅವರ ಮೇಲೆ ಭಾನುವಾರ ಝಾರ್ಸುಗುಡಾ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾನೆ. ಎದೆಗೆ ಗುಂಡು ತಗುಲಿದ ನಬಾ ದಾಸ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು.
ಜಿಲ್ಲೆಯ ಬ್ರಜರಾಜನಗರ ಪಟ್ಟಣದಲ್ಲಿ ಸಚಿವರು ಸಭೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದಾಸ್ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಪೊಲೀಸ್ ಸಮವಸ್ತ್ರದಲ್ಲಿದ್ದ ಎಂದು ವರದಿಯಾಗಿದೆ ಮತ್ತು ಆತನನ್ನು ಎಎಸ್‌ಐ ಗೋಪಾಲ್ ದಾಸ್ ಎಂದು ಗುರುತಿಸಲಾಗಿದೆ.
ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್‌ಐ) ಗೋಪಾಲ್ ದಾಸ್ ಎಂಬಾತ ಸಚಿವರ ಮೇಲೆ ಗುಂಡು ಹಾರಿಸಿದ್ದಾನೆ. ಸಚಿವರು ಗಾಯಗೊಂಡ ನಂತರ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಬ್ರಜರಾಜನಗರ ಎಸ್‌ಡಿಪಿಒ ಗುಪ್ತೇಶ್ವರ ಭೋಯ್ ತಿಳಿಸಿದ್ದಾರೆ.
ಸಹಾಯಕ ಸಬ್-ಇನ್ಸ್ಪೆಕ್ಟರ್, ಗೋಪಾಲ್ ದಾಸ್ ಎಂಬ ಪೊಲೀಸ್ ಅಧಿಕಾರಿಯನ್ನು ಗಾಂಧಿ ಚಾಕ್‌ನಲ್ಲಿ ನಿಯೋಜಿಸಲಾಗಿತ್ತು. “ಸಹಾಯಕ ಸಬ್ ಇನ್ಸ್ಪೆಕ್ಟರ್ ಗೋಪಾಲ್ ದಾಸ್ ತನ್ನ ರಿವಾಲ್ವರ್‌ನಿಂದ ಸಚಿವ ನಬಾ ದಾಸ್ ಮೇಲೆ ಗುಂಡು ಹಾರಿಸಿದ್ದಾನೆ” ಎಂದು ಭೋಯ್ ಮಾಹಿತಿ ನೀಡಿದರು.
ಭೋಯ್ ಪ್ರಕಾರ, ಸಚಿವರ ಮೇಲೆ ಎಎಸ್‌ಐ ಗುಂಡು ಹಾರಿಸಲು ನಿಖರವಾದ ಕಾರಣ ಸ್ಪಷ್ಟವಾಗಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಗುಂಡೇಟಿನಿಂದ ಸಚಿವರ ಜೊತೆಗಿದ್ದ ಎರಡನೇ ವ್ಯಕ್ತಿಗೂ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.
ಫೋನ್ ಮೂಲಕ ಸುದ್ದಿ ತಿಳಿದ ನಂತರ ನಾವು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇವೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ನಾವು ಘಟನೆಯನ್ನು ಖಂಡಿಸುತ್ತೇವೆ ಮತ್ತು ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಾರೆ ಎಂದು ಹಿರಿಯ ಬಿಜೆಡಿ ನಾಯಕ ಪ್ರಸನ್ನ ಆಚಾರ್ಯ ಒಡಿಶಾ ಟಿವಿಗೆ ತಿಳಿಸಿದ್ದಾರೆ.
ದೊಡ್ಡ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ನಬಾ ದಾಸ್‌ಗೆ ಪೊಲೀಸ್ ಬೆಂಗಾವಲು ಸಹ ಒದಗಿಸಲಾಗಿರುವುದರಿಂದ ಈ ಘಟನೆಯು ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ