ಟರ್ಕಿ-ಸಿರಿಯಾ ಭೂಕಂಪ: 15,000 ದಾಟಿದ ಸಾವಿನ ಸಂಖ್ಯೆ

ಇಸ್ತಾಂಬುಲ್‌ : ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಬುಧವಾರದ ವೇಳೆಗೆ 15,000 ಕ್ಕಿಂತ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ಸೋಮವಾರದ 7.8 ತೀವ್ರತೆಯ ಕಂಪನದಿಂದ ಟರ್ಕಿಯಲ್ಲಿ 12,391 ಮತ್ತು ಸಿರಿಯಾದಲ್ಲಿ 2,992 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮತ್ತು ವೈದ್ಯರು ತಿಳಿಸಿದ್ದಾರೆ, ಇದು ಒಟ್ಟು 15,383 ಕ್ಕೆ ತಲುಪಿದೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ತಂಡಗಳು ಅವಶೇಷಗಳಲ್ಲಿ ಸಿಲುಕಿರುವ ಅಸಂಖ್ಯಾತ ಜನರನ್ನು ಹುಡುಕುತ್ತಿವೆ. ಭೂಕಂಪದ ವಿನಾಶದ ಪ್ರಮಾಣ ಬಃಳ ಹೆಚ್ಚಾಗಿದೆ. ಭೂಕಂಪದ ನಂತರದ ಆಘಾತಗಳು ತುಂಬಾ ಪ್ರಬಲವಾಗಿತ್ತು.
ಅವಶೇಷಗಳಡಿಯಲ್ಲಿ ಸಿಲುಕಿರುವ ಅಥವಾ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಸಾಧ್ಯವಾಗದವರ ಬದುಕುಳಿಯುವ ಸಾಧ್ಯತೆಯು ವೇಗವಾಗಿ ಕ್ಷೀಣಿಸಿತ್ತಿದೆ ಎಂದು ತಜ್ಞರು ಹೇಳಿದ್ದಾರೆ.
“ಮೊದಲ 72 ಗಂಟೆಗಳನ್ನು ನಿರ್ಣಾಯಕ ಎಂದು ಪರಿಗಣಿಸಲಾಗುತ್ತದೆ” ಎಂದು ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದ ನೈಸರ್ಗಿಕ ಅಪಾಯಗಳ ತಜ್ಞ ಸ್ಟೀವನ್ ಗಾಡ್ಬಿ ಹೇಳಿದರು. “24 ಗಂಟೆಗಳಲ್ಲಿ ಸರಾಸರಿ ಬದುಕುಳಿಯುವಿಕೆಯ ಅನುಪಾತವು 74% ಆಗಿದ್ದರೆ, 72 ಗಂಟೆಗಳ ನಂತರ ಇದು 22% ಮತ್ತು ಐದನೇ ದಿನದ ವೇಳೆಗೆ ಇದು 6% ಆಗಿರುತ್ತದೆ ಎಂದು ಹೇಳಿದ್ದಾರೆ.

ಟರ್ಕಿಯಲ್ಲಿ ಸತ್ತವರ ಸಂಖ್ಯೆ 12,391ಕ್ಕೆ ಏರಿಕೆ
ಭೂಕಂಪಗಳಿಂದ ಆಗ್ನೇಯ ಟರ್ಕಿಯಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ ಬೆಳಿಗ್ಗೆ 12,391 ಕ್ಕೆ ಏರಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ (AFAD) ತಿಳಿಸಿದೆ. ಗಾಯಗೊಂಡವರ ಸಂಖ್ಯೆ 62,914 ಕ್ಕೆ ಏರಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅದು ಹೇಳಿದೆ.
ಕಹ್ರಮನ್ಮಾರಾಸ್ ಮತ್ತು ಗಾಜಿಯಾಂಟೆಪ್ ನಡುವಿನ ಭೂಕಂಪದ ಕೇಂದ್ರಬಿಂದು ಬಳಿ ಕೆಲವು ಭಾರಿ ವಿನಾಶ ಸಂಭವಿಸಿದೆ, ಅಲ್ಲಿ ಇಡೀ ನಗರದ ಬ್ಲಾಕ್‌ಗಳು ಅವಶೇಷಗಳಲ್ಲಿ ಬಿದ್ದಿವೆ. ಸಾರ್ವಜನಿಕ ಆಸ್ಪತ್ರೆಗಳು ಸೇರಿದಂತೆ ಏಳು ವಿವಿಧ ಪ್ರಾಂತ್ಯಗಳಲ್ಲಿ ಸುಮಾರು 3,000 ಕಟ್ಟಡಗಳು ಕುಸಿದಿವೆ ಎಂದು ಟರ್ಕಿ ಹೇಳಿದೆ.
ಮಾಲ್ಟಾಯಾ ಪ್ರಾಂತ್ಯದಲ್ಲಿ 13 ನೇ ಶತಮಾನದಷ್ಟು ಹಿಂದಿನ ಪ್ರಸಿದ್ಧ ಮಸೀದಿಯು ಭಾಗಶಃ ಕುಸಿದಿದೆ, ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಗಾಜಿಯಾಂಟೆಪ್‌ನಲ್ಲಿ ರೋಮನ್ ಸೈನ್ಯದಿಂದ ನಿರ್ಮಿಸಲಾದ 2,200 ವರ್ಷಗಳಷ್ಟು ಹಳೆಯದಾದ ಬೆಟ್ಟದ ಮೇಲಿನ ಕೋಟೆಯು ಅವಶೇಷಗಳಲ್ಲಿ ಬಿದ್ದಿರುವುದನ್ನು ತೋರಿಸಿದೆ, ಅದರ ಗೋಡೆಗಳು ಭಾಗಶಃ ಕಲ್ಲುಮಣ್ಣುಗಳಾಗಿ ಮಾರ್ಪಟ್ಟಿವೆ.
ಸಿರಿಯಾದಲ್ಲಿ, ಆರೋಗ್ಯ ಸಚಿವಾಲಯವು ಅಲೆಪ್ಪೊ, ಲಟಾಕಿಯಾ, ಹಮಾ ಮತ್ತು ಟಾರ್ಟಸ್ ಪ್ರಾಂತ್ಯಗಳಾದ್ಯಂತ ಹಾನಿಯನ್ನು ವರದಿ ಮಾಡಿದೆ, ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಎರಡು ತಾಣಗಳು ಸೇರಿದಂತೆ ಸಿರಿಯಾದ ಹಳೆಯ ನಗರ ಅಲೆಪ್ಪೊ ಮತ್ತು ಆಗ್ನೇಯ ಟರ್ಕಿಶ್ ನಗರವಾದ ದಿಯಾರ್‌ಬಾಕಿರ್‌ನಲ್ಲಿರುವ ಕೋಟೆಗೆ ಹಾನಿಯಾಗಿದೆ ಮತ್ತು ಹಲವಾರು ಇತರ ಸ್ಥಳಗಳು ಹಾನಿಗೊಳಗಾಗಬಹುದು ಎಂದು ಎಚ್ಚರಿಸಿದೆ.
ಭೂಕಂಪವು ಟರ್ಕಿಯನ್ನು 5-6 ಮೀಟರ್‌ಗಳಷ್ಟು ಸರಿಯುವಂತೆ ಮಾಡಿದೆ ಎಂದು ಇಟಾಲಿಯನ್ ಭೂಕಂಪಶಾಸ್ತ್ರಜ್ಞರು ಹೇಳುತ್ತಾರೆ.
ಇಟಲಿ 24 ವರದಿ ಮಾಡಿದಂತೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ ಮತ್ತು ಜ್ವಾಲಾಮುಖಿ ಶಾಸ್ತ್ರದ ಅಧ್ಯಕ್ಷ ಪ್ರೊಫೆಸರ್ ಕಾರ್ಲೋ ಡೊಗ್ಲಿಯೋನಿ ಅವರು ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪವು ದೇಶವನ್ನು 5-6 ಮೀಟರ್‌ಗಳಷ್ಟು ಚಲಿಸಿದೆ ಎಂದು ಹೇಳಿದ್ದಾರೆ.

ಆಪರೇಷನ್ ದೋಸ್ತ್: ಟರ್ಕಿ ತಲುಪಿದ ಭಾರತದ 6ನೇ ವಿಮಾನ
ಹೆಚ್ಚಿನ ಶೋಧ ಮತ್ತು ರಕ್ಷಣಾ ತಂಡಗಳು, ಶ್ವಾನದಳಗಳು, ಅಗತ್ಯ ಶೋಧ ಮತ್ತು ಪ್ರವೇಶ ಉಪಕರಣಗಳು, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಪರಿಹಾರ ಕಾರ್ಯಗಳಲ್ಲಿ ನಿಯೋಜನೆಗೆ ಸಿದ್ಧವಾಗಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಹಟಾಯ್‌ನಲ್ಲಿ ಸ್ಥಾಪಿಸಲಾದ ಭಾರತೀಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಭೂಕಂಪ ಪೀಡಿತ ಟರ್ಕಿಯಲ್ಲಿ 1 ಭಾರತೀಯ ನಾಪತ್ತೆ, 10 ಮಂದಿ ಸಿಲುಕಿದ್ದರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.ಭಾರತದಿಂದ ಪಶ್ಚಿಮ ಏಷ್ಯಾ ದೇಶಕ್ಕೆ ಕಳುಹಿಸಲಾದ ವಿಶೇಷ ತಂಡಗಳು ತಮ್ಮ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರೂ ಸಹ ಒಬ್ಬ ಭಾರತೀಯ ನಾಪತ್ತೆಯಾಗಿದ್ದಾರೆ ಮತ್ತು ಹತ್ತು ಮಂದಿ ಭೂಕಂಪ ಪೀಡಿತ ಟರ್ಕಿಯ ದೂರದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ ಆದರೆ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ ತಿಳಿಸಿದೆ.
ಭಾರತ ಈಗಾಗಲೇ ಎನ್‌ಡಿಆರ್‌ಎಫ್‌ನ 2 ರಕ್ಷಣಾ ತಂಡಗಳು ಮತ್ತು ವೈದ್ಯಕೀಯ ಸಹಾಯಕ್ಕಾಗಿ 2 ತಂಡಗಳು ಸೇರಿದಂತೆ 4 ತಂಡಗಳನ್ನು ಕಳುಹಿಸಿದೆ. ಇಂದು, NDRF ನ ಮೂರನೇ ತಂಡವು ಶ್ವಾನದಳ, ಔಷಧಗಳು, ನಾಲ್ಕು ಚಕ್ರದ ವಾಹನಗಳೊಂದಿಗೆ ಟರ್ಕಿಗೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement