ಸ್ಪೂರ್ತಿದಾಯಕ.: ಮಗುವಿಗೆ ಜನ್ಮ ನೀಡಿ ಕೆಲವೇ ಗಂಟೆಯಲ್ಲಿ ಆಂಬುಲೆನ್ಸ್‌ನೊಳಗೆ ಪರೀಕ್ಷೆ ಬರೆದ ತಾಯಿ…!

ಭಾಂಕಾ: ಮಗುವಿಗೆ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಕೆಲವೇ ಗಂಟೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದು ಮಹಿಳೆಯೊಬ್ಬಳು ಸುದ್ದಿಯಲ್ಲಿದ್ದಾಳೆ. ಬಿಹಾರದ ಭಾಂಕಾ ಜಿಲ್ಲೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರುಕ್ಮಿಣಿ ಕುಮಾರಿ (22) ಆಂಬುಲೆನ್ಸ್‌ನೊಳಗೆ ಪರೀಕ್ಷೆ ಬರೆದಿದ್ದಾಳೆ.
ರುಕ್ಮಿಣಿ ಕುಮಾರಿಗೆ ಹತ್ತು ಗಂಟೆಗೆ ಪರೀಕ್ಷೆ ಇತ್ತು. ಆದರೆ ಅದೇ ದಿನ ಬೆಳಗ್ಗೆ ಹೆರಿಗೆಯಾಗಿತ್ತು. ಹೆರಿಗೆಯಾಗಿ ಕೆಲವೇ ಗಂಟೆಯಲ್ಲಿ ನಾನು ಪರೀಕ್ಷೆ ಬರೆಯುವೆ ಎಂದಾಗ ಕುಟುಂಬದ ಸದಸ್ಯರು, ವೈದ್ಯರು ” ಬೇಡ” ಎಂದು ಸಲಹೆ ನೀಡಿದರು. ಆದರೆ ಕೇವಲ ಒಂದು ಪರೀಕ್ಷೆಗೆ ಗೈರಾಗುವುದರಿಂದ ಒಂದು ವರ್ಷ ವ್ಯರ್ಥ ಮಾಡಲು ಆಕೆ ಬಯಸಲಿಲ್ಲ. ಹೀಗಾಗಿ ಪರೀಕ್ಷೆ ಬರೆಯಲು ನಿರ್ಧರಿಸಿದಳು ಹಾಗೂ ಆಂಬುಲೆನ್ಸ್‌ ಒಳಗೇ ಕುಳಿತು ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆ ಬರೆದ ರುಕ್ಮಿಣಿ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ’ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪವನ್‌ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮಂಗಳವಾರ ಗಣಿತ ಪರೀಕ್ಷೆ ಬರೆದಾಗಲೇ ಕೊಂಚ ಅನಾರೋಗ್ಯವಿತ್ತು. ಮರುದಿನ ವಿಜ್ಞಾನ ಪತ್ರಿಕೆ ಬರೆಯಲು ಉತ್ಸುಕಳಾಗಿದ್ದೆ. ಆದರೆ, ರಾತ್ರಿ ಹೆರಿಗೆ ನೋವು ಹೆಚ್ಚಾಗಿದ್ದರಿಂದ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ಬೆಳಗ್ಗೆ ಆರು ಗಂಟೆಗೆ ನನ್ನ ಮಗ ಜನಿಸಿದʼʼ ಎಂದು ರುಕ್ಮಿಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರಂಭದಲ್ಲಿ ನಾವು ರುಕ್ಮಿಣಿಯ ಮನವೋಲಿಸಲು ಪ್ರಯತ್ನಿಸಿದೆವು. ಹೆರಿಗೆ ನೋವು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪರೀಕ್ಷೆ ಬರೆಯುವುದು ಕಷ್ಟ ಎಂದೆವು. ಆದರೆ, ಅವಳು ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು. ಹೀಗಾಗಿ, ಆಂಬುಲೆನ್ಸ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದೆವು. ತುರ್ತು ಸಂದರ್ಭದಲ್ಲಿ ಸಹಾಯವಾಗಲಿ ಎಂದು ಕೆಲವು ವೈದ್ಯಾಧಿಕಾರಿಗಳನ್ನು ನಿಯೋಜಿಸಿದೆವುʼʼ ಎಂದು ಈಕೆಗೆ ಹೆರಿಗೆ ಮಾಡಿಸಿದ ವೈದ್ಯರಾದ ಬೋಲಾನಾಥ ಅವರು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ 9ರಂದು ರಾಜಸ್ಥಾನದ ಯುವತಿಯೊಬ್ಬರು ಹೆರಿಗೆಯಾಗಲು ಆರು ಗಂಟೆ ಇರುವಾಗ ಪರೀಕ್ಷೆ ಬರೆದು ಸುದ್ದಿಯಾಗಿದ್ದರು. ಪರೀಕ್ಷೆ ಬರೆದು ಆರು ಗಂಟೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement