ಮುಕಾಬ್ ಗಿಗಾ ಪ್ರಾಜೆಕ್ಟ್‌ ಅನಾವರಣಗೊಳಿಸಿದ ಸೌದಿ ಅರೇಬಿಯಾ : ಅಮೆರಿಕದ 20 ಎಂಪೈರ್ ಸ್ಟೇಟ್ ಕಟ್ಟಡ ಇರಿಸುವಷ್ಟು ಬೃಹತ್‌ ರಚನೆ ನಿರ್ಮಾಣ | ವೀಕ್ಷಿಸಿ

ಸೌದಿ ಅರೇಬಿಯಾ ಸರ್ಕಾರವು ತನ್ನ ಮುಂದಿನ ಗಿಗಾ ಯೋಜನೆಯಲ್ಲಿ ಹೊಸ ಉದ್ದೇಶಿತ ಬೃಹತ್‌ ರಚನೆಯೊಂದರ ನಿರ್ಮಾಣ ಮಾಡುವ ಯೋಜನೆ ದಿ ಮುಕಾಬ್ ಅನ್ನು ಘೋಷಿಸಿದೆ.
ಅರಬ್ ನ್ಯೂಸ್ ವರದಿ ಪ್ರಕಾರ, ಮುಕಾಬ್ ಎಂದು ಕರೆಯಲ್ಪಡುವ ದೈತ್ಯಾಕಾರದ ರಚನೆಯು ನ್ಯೂ ಮುರಬ್ಬಾ ಎಂಬ ನಗರದ ಹೊಸ ಡೌನ್‌ಟೌನ್ ಕೋರ್‌ನ ಕೇಂದ್ರಬಿಂದುವಾಗಿದೆ. ಮುಂಬರುವ ಈ ನಗರದ ಪ್ರಚಾರದ ವೀಡಿಯೊವನ್ನು ಸರ್ಕಾರ ಬಿಡುಗಡೆ ಮಾಡಿದ್ದು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ಘನಾಕೃತಿ(ಕ್ಯೂಬ್‌)ಯ ಬೃಹತ್‌ ರಚನೆಯು 400 ಮೀಟರ್ ಎತ್ತರ, ಉದ್ದ ಮತ್ತು ಅಗಲವಾಗಿರಲಿದ್ದು, ಇದು ಟೊಳ್ಳಾದ ಘನದ ಆಕಾರದಲ್ಲಿ ರಚನೆಯನ್ನು ತೋರಿಸುತ್ತದೆ. ನ್ಯೂಯಾರ್ಕ್‌ನಲ್ಲಿರುವ 20 ಎಂಪೈರ್ ಸ್ಟೇಟ್ ಕಟ್ಟಡಗಳನ್ನು ಇರಿಸುವಷ್ಟು ಇದು ದೊಡ್ಡದಾಗಿರುತ್ತದೆ ಮತ್ತು ಇನ್ನೂ ಸ್ಥಳಾವಕಾಶವನ್ನು ಹೊಂದಿರುತ್ತದೆ ಎಂದು ಸೌದಿ ಅರೇಬಿಯಾ ಹೇಳಿದೆ. ವರದಿಗಳ ಪ್ರಕಾರ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅನಾವರಣಗೊಳಿಸಿದ ಬೃಹತ್ ಯೋಜನೆಯು ದೇಶದ ರಾಜಧಾನಿ ರಿಯಾದಿನ ಡೌನ್ಟೌನ್‌ನಲ್ಲಿದೆ.
ಫ್ಯೂಚರಿಸಂನ ವರದಿ ಪ್ರಕಾರ, ನ್ಯೂ ಮುರಬ್ಬಾ ಎಂಬ ರಿಯಾದ್ ನಗರದ ಹೊಸ ಡೌನ್‌ಟೌನ್‌ನ ಹೃದಯಭಾಗದಲ್ಲಿ ಮುಕಾಬ್ ಅನ್ನು ಇರಿಸಲಾಗುವುದು ಎಂದು ಹೇಳಿದೆ.

ಈ ಬೃಹತ್‌ ಘನಾಕೃತಿ ರಚನೆಯಲ್ಲಿ “ಪ್ರೀಮಿಯಂ ಹಾಸ್ಪಿಟಾಲಿಟಿ ಘಟಕಗಳು”, ಚಿಲ್ಲರೆ ವ್ಯಾಪಾರದ ಸ್ಥಳಗಳು ಮತ್ತು ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದ್ದು, ರಚನೆ ಮೂಲಕ ಸುರುಳಿಯಾಕಾರದ ಬೇಸ್ ಸಾಗುತ್ತದೆ ಎಂದು ವರದಿಯೊಂದು ಹೇಳಿದೆ. ಮೆಗಾ ಕ್ಯೂಬ್ ರಚನೆಯು 20 ಬೃಹತ್‌ ಕಟ್ಟಡಗಳನ್ನು ಅದರಲ್ಲಿ ಹೊಂದಬಲ್ಲದು ಮತ್ತು 20 ಕಟ್ಟಡಗಳಲ್ಲಿ ಪ್ರತಿಯೊಂದು ಕಟ್ಟಡವೂ ನ್ಯೂಯಾರ್ಕ್‌ನ ಪ್ರಸಿದ್ಧ ಎಂಪೈರ್ ಸ್ಟೇಟ್ ಕಟ್ಟಡಗಳ ಗಾತ್ರಕ್ಕೆ ಸಮವಾಗಿರುತ್ತದೆ ಎಂದು ಅದು ಹೇಳಿದೆ.
ಮುಕಾಬ್ ರಚನೆಯು ವಸ್ತುಸಂಗ್ರಹಾಲಯ, ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯ(design university), ವಿವಿಧೋದ್ದೇಶ ರಂಗಮಂದಿರ ಮತ್ತು 80ಕ್ಕೂ ಹೆಚ್ಚು ಮನರಂಜನೆ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಹೊಂದಿರುತ್ತದೆ ಎಂದು ಫ್ಯೂಚರಿಸಂ ವರದಿ ಬಹಿರಂಗಪಡಿಸಿದೆ. ಇದು 25 ದಶಲಕ್ಷ ಚದರ ಕಿಲೋಮೀಟರ್‌ಗಿಂತ ಹೆಚ್ಚಿನ ನೆಲದ ಪ್ರದೇಶ, 1,04,000 ವಸತಿ ಘಟಕಗಳು, 9,000 ಹೊಟೇಲ್‌ ಕೊಠಡಿಗಳು, 9,80,000 ಚದರ ಮೀಟರ್ ಚಿಲ್ಲರೆ ವ್ಯಾಪಾರದ ಸ್ಥಳ, 14 ಲಕ್ಷ ಚದರ ಮೀಟರ್ ಕಚೇರಿ ಸ್ಥಳ, ವಿಶ್ರಾಂತಿಗಾಗಿ 6,20,000 ಚದರ ಮೀಟರ್‌ನಷ್ಟು ಸ್ಥಳಾವಕಾಶ ಮತ್ತು ಸಮುದಾಯ ಸೌಲಭ್ಯಗಳಿಗಾಗಿ 18 ಲಕ್ಷ ಚದರ ಮೀಟರ್‌ ಸ್ಥಳಾವಕಾಶವನ್ನು ಹೊಂದಿರುತ್ತದೆ ಎಂದು ವರದಿ ಹೇಳಿದೆ.

ನ್ಯೂ ಮುರಬ್ಬಾ ಯೋಜನೆಯು ತನ್ನದೇ ಆದ ಪ್ರತ್ಯೇಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರಲಿದ್ದು, ಇದು ರಿಯಾದ್ ವಿಮಾನ ನಿಲ್ದಾಣದಿಂದ 20 ನಿಮಿಷಗಳ ಡ್ರೈವ್ ಆಗಿರುತ್ತದೆ ಎಂದು ವರದಿ ಹೇಳಿದೆ, ಯೋಜನೆ ಮತ್ತು ಮುಕಾಬ್ ಕ್ಯೂಬ್ ಅನ್ನು 2030 ರ ವೇಳೆಗೆ ಪೂರ್ಣಗೊಳಿಸಿ, ಅದನ್ನು ತೆರೆಯಲು ನಿರ್ಧರಿಸಲಾಗಿದೆ.
ಒಂಬತ್ತು ಮಿಲಿಯನ್ ಜನರಿಗೆ ಭವಿಷ್ಯದ ಮನೆಯನ್ನು ಒದಗಿಸಲು ದೇಶವು 100 ಮೈಲಿಯಷ್ಟು ವಿಸ್ತೀರ್ಣದಲ್ಲಿ ಗಗನಚುಂಬಿ ಕಟ್ಟಡವನ್ನು ಘೋಷಿಸಿದ ಒಂದು ವರ್ಷದ ನಂತರ ಇದು ಬಂದಿದೆ.
ಬೃಹತ್ ಗೋಪುರದ ನಿರ್ಮಾಣ ಈಗಾಗಲೇ ನಡೆಯುತ್ತಿದೆ ಎಂದು ಫ್ಯೂಚರಿಸಂ ವರದಿ ತಿಳಿಸಿದೆ. ಇದು ಗಲ್ಫ್ ಆಫ್ ಅಕಾಬಾ ಬಳಿ ಫ್ಯೂಚರಿಸ್ಟಿಕ್ ನಿಯೋಮ್ ಸೈಟ್‌ನ ಕೇಂದ್ರಬಿಂದುವಾಗಿದೆ, ಇದನ್ನು ಮೊದಲು 2017 ರಲ್ಲಿ ಘೋಷಿಸಲಾಯಿತು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

 

 

 

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement