ಬೃಹತ್ ಹವಾಮಾನ ಬದಲಾವಣೆಯ ಅಪಾಯ ಎದುರಿಸುತ್ತಿರುವ ವಿಶ್ವದ ಟಾಪ್-100 ಪ್ರಾಂತ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿ ಭಾರತದ 14 ರಾಜ್ಯಗಳು…!

ನವದೆಹಲಿ: ಭಾರತದಲ್ಲಿ ಕನಿಷ್ಠ 14 ರಾಜ್ಯಗಳು ಹವಾಮಾನ ವೈಪರೀತ್ಯ ಮತ್ತು ಹವಾಮಾನ ಬದಲಾವಣೆಯಿಂದ ಹಾನಿಗೊಳಗಾಗುವ ಏಷ್ಯಾದ ಟಾಪ್-100 ಪ್ರಾಂತ್ಯಗಳಲ್ಲಿ ಸೇರಿವೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಕ್ರಾಸ್ ಡಿಪೆಂಡೆನ್ಸಿ ಇನಿಶಿಯೇಟಿವ್ (XDI) ಮೂಲಕ ಎಕ್ಸ್‌ಡಿಐ (XDI) ಗ್ರೋಸ್‌ ಡೊಮೆಸ್ಟಿಕ್ ಕ್ಲೈಮೇಟ್ ರಿಸ್ಕ್ ಡೇಟಾದ ಮೂಲಸೌಕರ್ಯಕ್ಕೆ ಸಂಭವನೀಯ ಹಾನಿಯ ಮೊದಲ ವಿಶ್ಲೇಷಣೆಯ ಪ್ರಕಾರ, ಹವಾಮಾನ ವೈಪರೀತ್ಯದ ಪರಿಣಾಮಕ್ಕೆ ಚೀನಾ, ಭಾರತ ಮತ್ತು ಅಮೆರಿಕ ಅತ್ಯಂತ ದುರ್ಬಲ ರಾಷ್ಟ್ರಗಳಾಗಿವೆ.
ಎಕ್ಸ್‌ಡಿಐ (XDI) ಗ್ರೋಸ್‌ ಡೊಮೆಸ್ಟಿಕ್ ಕ್ಲೈಮೇಟ್ ರಿಸ್ಕ್ ಡೇಟಾವು ಕಾಡ್ಗಿಚ್ಚು, ಶಾಖದ ಅಲೆಗಳು ಮತ್ತು ಸಮುದ್ರ ಮಟ್ಟದಲ್ಲಿ ಏರಿಕೆಯಂತಹ ಹವಾಮಾನ ಬದಲಾವಣೆಯಿಂದಾಗಿ ಕಟ್ಟಡಗಳು ಮತ್ತು ಆಸ್ತಿಗಳಿಗೆ ಹಾನಿಯಾಗುವ ಮಾದರಿಯ ಪ್ರಕ್ಷೇಪಗಳ ಪ್ರಕಾರ ಈ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಲಿವೆ ಎಂದು ಹೇಳಿದೆ.
2050ರಲ್ಲಿ ಹವಾಮಾನ ಬದಲಾವಣೆಯಿಂದ ಹಾನಿಗೊಳಗಾಗಬಹುದಾದ ಅಗ್ರ 200 ಪ್ರಾಂತ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು (114) ಅಪಾಯದಲ್ಲಿರುವ ಪ್ರಾಂತ್ಯಗಳ ಪಟ್ಟಿಯನ್ನು ಹೊಂದಿರುವ ಏಷ್ಯಾ ಮಂಚೂಣಿಯಲ್ಲಿದೆ. ಅದರಲ್ಲಿಯೂ ಚೀನಾ ಮತ್ತು ಭಾರತದತ್ತ ವಿಶೇಷ ಗಮನಹರಿಸಲಾಗಿದೆ.
ಭಾರತವು 2070 ಅನ್ನು ನಿವ್ವಳ ಶೂನ್ಯ ಹೊರಸೂಸುವಿಕೆ (Zero emission)ಯ ಗುರಿ ನಿಗದಿಪಡಿಸಿದೆ ಮತ್ತು ಈ ಕ್ಷೇತ್ರದಲ್ಲಿ ದೊಡ್ಡ ರೀತಿಯಲ್ಲಿ ವಿದೇಶಿ ಹೂಡಿಕೆಯತ್ತ ನೋಡುತ್ತಿದೆ.

XDI ಪಟ್ಟಿಯಲ್ಲಿಲ್ಲದ ಘಟಕಗಳು “ಕಡಿಮೆ ಅಪಾಯ” ದಲ್ಲಿಲ್ಲ ಎಂದು ಅರ್ಥವಲ್ಲ ಮತ್ತು ಹವಾಮಾನ ವೈಪರೀತ್ಯದ ಅಪಾಯದಿಂದ ಹೆಚ್ಚಿನ ಅಪಾಯ ಎದುರಿಸುತ್ತಿರುವ ಅನೇಕ ರಾಜ್ಯಗಳು ಮತ್ತು ಪ್ರಾಂತ್ಯಗಳು ಅವುಗಳು ಹೊಂದಿರುವ ಕಡಿಮೆ ಸಂಖ್ಯೆಯ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳ ಕಾರಣದಿಂದಾಗಿ ಈ ಶ್ರೇಯಾಂಕದ ಅಗ್ರಸ್ಥಾನಗಳ ಪಟ್ಟಿಯಲ್ಲಿ ಕಂಡುಬರುತ್ತಿಲ್ಲ ಎಂದು ಅದು ಹೇಳಿದೆ.
ವಿಶ್ಲೇಷಣೆಯ ಪ್ರಕಾರ, 2050 ರಲ್ಲಿ ಟಾಪ್‌-50 ಅಪಾಯದಲ್ಲಿರುವ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ 80%ರಷ್ಟು ಚೀನಾ, ಅಮೆರಿಕ ಮತ್ತು ಭಾರತದಲ್ಲಿವೆ. ಚೀನಾದ ನಂತರ, ಭಾರತವು ಅಗ್ರ 50 ರಲ್ಲಿ ಅತಿ ಹೆಚ್ಚು ರಾಜ್ಯಗಳನ್ನು (9) ಹೊಂದಿದೆ, ಇದರಲ್ಲಿ ಬಿಹಾರ (22ನೇ ಸ್ಥಾನ), ಉತ್ತರ ಪ್ರದೇಶ (25), ಅಸ್ಸಾಂ (28), ರಾಜಸ್ಥಾನ (32), ತಮಿಳುನಾಡು (36), ಮಹಾರಾಷ್ಟ್ರ ( 38), ಗುಜರಾತ್ (48), ಪಂಜಾಬ್ (50) ಮತ್ತು ಕೇರಳ (52) ಸ್ಥಾನಗಳನ್ನು ಪಡೆದಿವೆ ಎಂದು ಅದು ಹೇಳಿದೆ.
ಟಾಪ್ -100 ರಲ್ಲಿರುವ ಭಾರತದ ಉಳಿದ ರಾಜ್ಯಗಳೆಂದರೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶ.
ನಿರ್ಮಾಣ ಮಾಡಿದ ಪರಿಸರಕ್ಕೆ ಹವಾಮಾನ ಬದಲಾವಣೆಯ ಅಪಾಯ 1990ಕ್ಕೆ ಹೋಲಿಸಿದರೆ 2050 ರ ವೇಳೆಗೆ ಅಸ್ಸಾಂನಲ್ಲಿ 330 ಪ್ರತಿಶತದಷ್ಟು ಗರಿಷ್ಠ ಹೆಚ್ಚಳ ಕಾಣಲಿದೆ. ಪ್ರಪಂಚದ ಪ್ರತಿಯೊಂದು ರಾಜ್ಯ, ಪ್ರಾಂತ್ಯ ಮತ್ತು ಪ್ರದೇಶವನ್ನು ಹೋಲಿಸಿ, ನಿರ್ಮಿತ ಪರಿಸರದ ಮೇಲೆ ಪ್ರತ್ಯೇಕವಾಗಿ ಕೇಂದ್ರೀಕರಿಸಿದ ಭೌತಿಕ ಹವಾಮಾನ ಅಪಾಯದ ವಿಶ್ಲೇಷಣೆ ಮಾಡಿರುವುದು ಇದೇ ಮೊದಲು ಎಂದು ಎಕ್ಸ್‌ಡಿಐ ಹೇಳಿಕೊಂಡಿದೆ.
ಹಾನಿಯ ಅಪಾಯದಲ್ಲಿರುವ ಅಗ್ರ 100 ರಲ್ಲಿ ಹೆಚ್ಚು-ಅಭಿವೃದ್ಧಿ ಹೊಂದಿದ ಮತ್ತು ಜಾಗತಿಕವಾಗಿ-ಮಹತ್ವ ಪಡೆದ ಏಷ್ಯಾದ ಆರ್ಥಿಕ ಕೇಂದ್ರಗಳೆಂದರೆ ಬೀಜಿಂಗ್, ಜಕಾರ್ತ, ಹೋ ಚಿ ಮಿನ್ಹ್ ಸಿಟಿ, ತೈವಾನ್ ಮತ್ತು ಮುಂಬೈ ನಗರಗಳಾಗಿವೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

ಅಧ್ಯಯನ ವರದಿಯು ಹೂಡಿಕೆದಾರರಿಗೆ ವಿಶೇಷವಾಗಿ ಮಹತ್ವದ್ದಾಗಿದೆ, ಏಕೆಂದರೆ ವ್ಯಾಪಕವಾದ ಮೂಲಸೌಕರ್ಯ ನಿರ್ಮಾಣವು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಆರ್ಥಿಕ ಚಟುವಟಿಕೆ ಮತ್ತು ಬಂಡವಾಳ ಮೌಲ್ಯದೊಂದಿಗೆ ಅತಿಕ್ರಮಿಸುತ್ತದೆ.
“ಹಾನಿಯ ಒಟ್ಟಾರೆ ಪ್ರಮಾಣದಲ್ಲಿ, ಮತ್ತು ಅಪಾಯದ ಹೆಚ್ಚಳದ ವಿಷಯದಲ್ಲಿ, ಹವಾಮಾನ ಬದಲಾವಣೆಯಲ್ಲಿ ತೀವ್ರ ಹೆಚ್ಚಳವಾದಂತೆ ಏಷ್ಯಾವು ಹೆಚ್ಚು ಕಳೆದುಕೊಳ್ಳಲಿದೆ ಮತ್ತು ಹದಗೆಡುತ್ತಿರುವ ಹವಾಮಾನ ಬದಲಾವಣೆಯನ್ನು ತಡೆಯುವುದರಿಂದ ಮತ್ತು ಹವಾಮಾನ ಸ್ಥಿತಿಸ್ಥಾಪಕದ ಹೂಡಿಕೆ ವೇಗಗೊಳಿಸುವುದರಿಂದ ಅದು ಹೆಚ್ಚು ಗಳಿಸುತ್ತದೆ. ಇದು ಇಲ್ಲಿಯವರೆಗಿನ ಭೌತಿಕ ಹವಾಮಾನ ಅಪಾಯದ ಅತ್ಯಾಧುನಿಕ ಜಾಗತಿಕ ವಿಶ್ಲೇಷಣೆಯಾಗಿದೆ ಎಂದು ಎಕ್ಸ್‌ಡಿಐ ಸಿಇಒ ರೋಹನ್ ಹ್ಯಾಮ್ಡೆನ್ ಹೇಳಿದ್ದಾರೆ.
ಶ್ರೇಯಾಂಕದಲ್ಲಿ ಹೆಚ್ಚು ಪ್ರಾಂತ್ಯಗಳನ್ನು ಹೊಂದಿರುವ ಚೀನಾದಲ್ಲಿ, ಅಪಾಯದಲ್ಲಿರುವ ರಾಜ್ಯಗಳು ಮತ್ತು ಪ್ರಾಂತ್ಯಗಳು ಜಾಗತಿಕವಾಗಿ ಸಂಪರ್ಕಗೊಂಡಿರುವ ಪೂರ್ವ ಮತ್ತು ದಕ್ಷಿಣದ ಯಾಂಗ್ಟ್ಜಿ ಮತ್ತು ಪರ್ಲ್ ನದಿಗಳ ಪ್ರವಾಹ ಪ್ರದೇಶಗಳು ಮತ್ತು ಡೆಲ್ಟಾಗಳ ಉದ್ದಕ್ಕೂ ಕೇಂದ್ರೀಕೃತವಾಗಿವೆ.

ಅಮೆರಿಕದಲ್ಲಿ, ಆರ್ಥಿಕವಾಗಿ ಪ್ರಮುಖ ರಾಜ್ಯಗಳಾದ ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಮತ್ತು ಫ್ಲೋರಿಡಾದಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ.
ಟಾಪ್ 50 ರಲ್ಲಿ ಬಹು ಪ್ರಾಂತ್ಯಗಳು ಮತ್ತು ರಾಜ್ಯಗಳನ್ನು ಹೊಂದಿರುವ ಇತರ ದೇಶಗಳಲ್ಲಿ ಪಟ್ಟಿಯಲ್ಲಿ ಬ್ರೆಜಿಲ್, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ಸಹ ಸೇರಿವೆ. ಯುರೋಪ್‌ನಲ್ಲಿ, ಉನ್ನತ ಶ್ರೇಣಿಯ ನಗರಗಳಲ್ಲಿ ಲಂಡನ್, ಮಿಲನ್, ಮ್ಯೂನಿಚ್ ಮತ್ತು ವೆನಿಸ್ ನಗರಗಳು ಸೇರಿವೆ.
ವರದಿಯು ನಿರ್ಮಾಣ ಮಾಡಿದ ಪರಿಸರದ ಮೇಲೆ ಮಾತ್ರ ಕೇಂದ್ರೀಕೃತವಾಗಿರುವುದರಿಂದ, ಇದು ಕೃಷಿ ಉತ್ಪಾದನೆ, ಜೀವವೈವಿಧ್ಯ ಅಥವಾ ಮಾನವ ಯೋಗಕ್ಷೇಮ ಮತ್ತು ಇತರ ಪರಿಣಾಮಗಳ ಮೇಲಿನ ಹವಾಮಾನ ಅಪಾಯಗಳ ಬಗ್ಗೆ ಹೇಳಿಲ್ಲ, ಆದ್ದರಿಂದ ವರದಿಯ ವಿಶ್ಲೇಷಣೆಯಲ್ಲಿ ಈ ಸಂಗತಿಗಳು ಇಲ್ಲ ಎಂದ ಮಾತ್ರಕ್ಕೆ ಈ ಅಪಾಯಗಳು ಕಡಿಮೆಯಾಗುವುದಿಲ್ಲ. ಅದಕ್ಕಾಗಿಯೇ ಇದು ಫೆಬ್ರವರಿ ಮಧ್ಯದಲ್ಲಿ, ಲೇಹ್‌ನಿಂದ-ಶಿಮ್ಲಾ-ಮುಂಬೈವರೆಗೆ ಅನೇಕ ಭಾರತೀಯ ನಗರಗಳು ಪ್ರಸ್ತುತ ಅನುಭವಿಸುತ್ತಿರುವ ತೀವ್ರತರವಾದ ತಾಪಮಾನವನ್ನು ಪ್ರತಿಬಿಂಬಿಸುವುದಿಲ್ಲ.
ಈ ವ್ಯವಸ್ಥೆಯು ಈ ಶತಮಾನದ ಅಂತ್ಯದ ವೇಳೆಗೆ ಕೈಗಾರಿಕಾ ಪೂರ್ವ ಸರಾಸರಿಗಿಂತ 3 ಡಿಗ್ರಿಗಳಷ್ಟು ಜಾಗತಿಕ ತಾಪಮಾನ ಏರಿಕೆಯ ಸನ್ನಿವೇಶದ ಆಧಾರದ ಮೇಲೆ ಮಾನವ ನಿರ್ಮಿತ ಪರಿಸರದಿಂದ ಹುಂಟಾಗುವ ಹವಾಮಾನ ಬದಲಾವಣೆಯಿಂದ ಆಗಬಹುದಾದ ಹಾನಿಯನ್ನು ಲೆಕ್ಕಹಾಕಲು ಸ್ಥಳೀಯ ಹವಾಮಾನ ಮತ್ತು ಪರಿಸರ ದತ್ತಾಂಶ ಮತ್ತು ಎಂಜಿನಿಯರಿಂಗ್ ಮೂಲ ಮಾದರಿಗಳೊಂದಿಗೆ ಸಂಯೋಜಿಸಲ್ಪಟ್ಟ ಜಾಗತಿಕ ಹವಾಮಾನ ಮಾದರಿಗಳನ್ನು ಬಳಸಿದೆ.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement