ನಿಮ್ಮ ಪ್ರೀತಿಯ ಋಣ ತೀರಿಸುವೆ : ಬೆಳಗಾವಿಯಲ್ಲಿ 2240 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ-ಶಂಕುಸ್ಥಾಪನೆ ಮಾಡಿದ ನಂತರ ಪ್ರಧಾನಿ ಮೋದಿ ಭರವಸೆ

ಬೆಳಗಾವಿ : ಬೆಳಗಾವಿಯಿಂದ ಇಂದು ಇಡೀ ದೇಶದ ಕೋಟ್ಯಂತರ ರೈತರಿಗೆ 13ನೇ ಕಂತಿನ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿದೆ. ಇಷ್ಟೊಂದು ದೊಡ್ಡ ಮೊತ್ತ ಒಂದು ಕ್ಷಣದಲ್ಲಿ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿರುವುದು ಸೋಜಿಗದ ಸಂಗತಿ. ಯಾವುದೇ ಸೋರಿಕೆಯಿಲ್ಲದೇ ಇಷ್ಟೊಂದು ದೊಡ್ಡ ಮೊತ್ತ ಜಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಳಗಾವಿಯ ಜನರು ನೀಡಿದ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುವೆ. ಕರ್ನಾಟಕ ಹಾಗೂ ಬೆಳಗಾವಿಯ ಅಭಿವೃದ್ದಿಯೊಂದಿಗೆ ನಿಮ್ಮ ಪ್ರೀತಿಯ ಋಣ ತೀರಿಸುವೆ ಎಂದು ಪ್ರಧಾನಮಂತ್ರಿ ಅವರು ಭರವಸೆ ನೀಡಿದರು.
ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಅಂಗವಾಗಿ ನವಧಾನ್ಯಗಳನ್ನು ಮಡಿಕೆಗೆ ತುಂಬುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸುಮಾರು 2,240 ಕೋಟಿ ಮೌಲ್ಯದ ರೈಲ್ವೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13 ನೇ ಕಂತಿನ ಸುಮಾರು 16 ಸಾವಿರ ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿ ಅವರು ಮಾತನಾಡಿದರು.
ಈ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಯಿಂದ ಬೆಳಗಾವಿಯ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದರು. ನಮ್ಮ ಸರ್ಕಾರದ “ಸಬ್ ಕಾ ಸಾಥ್ – ಸಬ್ ಕಾ ವಿಕಾಸ್” ಮಂತ್ರಕ್ಕೆ ಸ್ಫೂರ್ತಿಯಾಗಿರುವ ಬಸವಣ್ಣನವರಿಗೆ ನಮಸ್ಕಾರಗಳು. ಬೆಳಗಾವಿಯ ನನ್ನ ಬಂಧು-ಭಗಿನಿಯರಿಗೆ ನನ್ನ ನಮಸ್ಕಾರಗಳು.. ಎಂದು ಪ್ರಧಾನಿ ಮೋದಿ ಮಾತು ಆರಂಭಿಸಿದರು.
ಬೆಳಗಾವಿಯ ಜನರ ಆಶೀವಾರ್ದವು ನಮಗೆ ಪ್ರೇರಣಾಶಕ್ತಿಯಾಗಿದೆ. ಈ ನೆಲಕ್ಕೆ ಬರುವುದು ಯಾವುದೇ ತೀರ್ಥ ಯಾತ್ರೆಗಿಂತ ಕಡಿಮೆಯೇನಲ್ಲ. ಇದು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ರಾಷ್ಟ್ರಪ್ರೇಮಿಗಳ ಜನ್ಮಭೂಮಿಯಾಗಿದೆ. ಗುಲಾಮಗಿರಿ ವಿರುದ್ಧ ಹೋರಾಟ ಹಾಗೂ ನವಭಾರತ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ಪ್ರಮುಖವಾಗಿದೆ ಎಂದು ಬಣ್ಣಿಸಿದರು.

ರಾಜ್ಯದಲ್ಲಿ ಸ್ಟಾರ್ಟ್ ಅಪ್‌ಗಳ ಬಗ್ಗೆ ಚರ್ಚೆಯಾಗುತ್ತಿದೆ. ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆಯೇ ಸ್ಟಾರ್ಟ್ ಅಪ್ ಆರಂಭಗೊಂಡಿತ್ತು. ಅಂದು ಬೆಳಗಾವಿಯಲ್ಲಿ ಬಾಬುರಾವ್ ಪುಸಾಳ್ಕರ್ ಅವರು ಸಣ್ಣ ಔದ್ಯೋಗಿಕ ಘಟಕ ಪ್ರಾರಂಭಿಸಿದ್ದರು, ಅದು ಕೈಗಾರಿಕಾ ರಂಗದ ಬೆಳವಣಿಗೆಗೆ ಕಾರಣವಾಗಿದೆ ಎಂದು ಅವರು ನೆನಪಿಸಿದರು.
ಈ ಮೊದಲು ಸಣ್ಣ ರೈತರನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ನಮ್ಮ ಸರ್ಕಾರದ ಆದ್ಯತೆ ಸಣ್ಣ ರೈತರಿಗೆ ನೆರವಾಗುವುದಾಗಿದೆ.
ತಲಾ ಎರಡೂವರೆ ಲಕ್ಷ ರೂಪಾಯಿ ಈಗಾಗಲೇ ರೈತರ ಖಾತೆಗಳಿಗೆ ಜಮಾ ಆಗಿದೆ. ಕೃಷಿ ಅಗತ್ಯತೆಗಳಿಗಾಗಿ ಸಾಲಕ್ಕಾಗಿ ರೈತರು ಇತರರ ಬಳಿ ಕೈ ಒಡ್ಡದಂತೆ ಸ್ವಾವಲಂಬಿಯನ್ನಾಗಿ ಮಾಡಿದೆ ಎಂದರು.
ಕೃಷಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ ಭವಿಷ್ಯತ್ತಿನ ಅವಶ್ಯಕತೆಗಳನ್ನು ಪೂರ್ಣಗೊಳಿಸಲಾಗುವುದು. 2014 ರಲ್ಲಿ ಕೃಷಿಗೆ ಮೀಸಲಿಟ್ಟ ಬಜೆಟ್ ಕೇವಲ 25 ಸಾವಿರ ಕೋಟಿ ರೂ.ಗಳಾಗಿತ್ತು. ಈ ವರ್ಷ ನಮ್ಮ ಸರ್ಕಾರ ಬಜೆಟ್‌ನಲ್ಲಿ 1.25 ಲಕ್ಷ ಕೋಟಿ ರೂ.ಗಳನ್ನು ಮೀಲಿಟ್ಟಿದೆ. ನಮ್ಮ ಸರ್ಕಾರದಿಂದ ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಜತೆ ಜೋಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಾವಯವ ಕೃಷಿಗೆ ಒತ್ತು ನೀಡಲಾಗುತ್ತಿದೆ. ಪಿಎಂ- ಪ್ರಣಾಮ ಯೋಜನೆಯಡಿ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪಾರಂಪರಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದೆ. ಸಿರಿಧಾನ್ಯ‌ಬೆಳೆಗಳಿಗೆ ಸಿರಿಅನ್ನ ಯೋಜನೆ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕವು ಸಿರಿಧಾನ್ಯಗಳ ತವರು ಭೂಮಿಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿರಿಧಾನ್ಯ ಹಾಗೂ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದ್ದರು ಎಂದರು.
ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸರಕಾರವು ಈ ಬಜೆಟ್‌ನಲ್ಲಿ 2016-17ಗಿಂತ ಮುಂಚಿನ ಬಾಕಿ ಬಿಲ್‌ಗಳ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಕಬ್ಬು ಬೆಳೆಗಾರರ ಸಹಕಾರಿ ಸಂಘಕ್ಕೆ ಸಹಕಾರಿಯಾಗಲಿದೆ ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಪರಸ್ಪರ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಈ ಕ್ಷೇತ್ರಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಅನೇಕ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲು ಸಂಪರ್ಕ ಯೋಜನೆಗಳಿಂದ ಕರ್ನಾಟಕದಲ್ಲಿ ಪ್ರಗತಿಗೆ ವೇಗ ದೊರಕಲಿದೆ. ಲೋಂಡಾ-ಘಟಪ್ರಭಾ ಮಾರ್ಗ ಡಬ್ಲಿಂಗ್ ನಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ. ಉತ್ತಮ ರೈಲು ಸಂಪರ್ಕದಿಂದ ಇತರೆ ಕ್ಷೇತ್ರಗಳ ಡಬಲ್ ಎಂಜಿನ್ ಸರ್ಕಾರವು ” ವೇಗ”ದ ಪ್ರಗತಿಗೆ ಸಾಕ್ಷಿಯಾಗಿದೆ. ಜಲಜೀವನ ಮಿಷನ್ ಯೋಜನೆಯ ಅನುಷ್ಠಾನ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮೀಣ ಪ್ರದೇಶದ ಶೇ.65 ಕ್ಕೂ ಅಧಿಕ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಮೂಲಕ ಮನೆಮನೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವೇಣುಗ್ರಾಮ ಎಂಬ ಖ್ಯಾತಿಯನ್ನು ಬೆಳಗಾವಿ ಹೊಂದಿದೆ. ನಮ್ಮ ಸರ್ಕಾರವು ಬಿದಿರು ಬೆಳೆ ಹಾಗೂ ಕಟಾವಿಗೆ ಅನುಮತಿ ನೀಡಿರುವುದರಿಂದ ಈ ಭಾಗದ ಕರಕುಶಲ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಇದಕ್ಕೂ ಮೊದಲು 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಹಿನ್ನೆಲೆಯಲ್ಲಿ ನವಬಗೆಯ ಸಿರಿಧಾನ್ಯಗಳನ್ನು ಮರದ ಮೂಲಕ ಮಣ್ಣಿನ ಮಡಿಕೆಗೆ ತುಂಬುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದಾದ ಬಳಿಕ ಬಟನ್ ಒತ್ತುವ ಮೂಲಕ ದೇಶದ ಎಂಟು ಕೋಟಿ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 13 ನೇ ಕಂತಿನ ತಲಾ ಎರಡು ಸಾವಿರ ರೂಪಾಯಿಯಂತೆ ಒಟ್ಟಾರೆ 16 ಸಾವಿರ ಕೋಟಿ ರೂಪಾಯಿ ಹಣವನ್ನು ಜಮೆ ಮಾಡಿದರು.
ಸನ್ಮಾನ…
ಕರಕುಶಲ ನೇಯ್ಗೆಯ ಜಿಐ ಟ್ಯಾಗ್ ಹೊಂದಿದ ಸುಂದರ ಶಾಲು,ಏಲಕ್ಕಿ ಹಾರ, ಪೇಟ, ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ಭಾವಚಿತ್ರ, ಕಸೂತಿಯಲ್ಲಿ ವಿನ್ಯಾಸಗೊಳಿಸಿದ ನರೇಂದ್ರ ಮೋದಿ ಅವರ ಚಿತ್ರಪಟವನ್ನು ನೀಡಿ ಮುಖ್ಯಮಂತ್ರಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಸನ್ಮಾನಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನರೇಂದ್ರಸಿಂಗ್ ತೋಮರ್, ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ. ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ, ಸಂಸದೆ ಮಂಗಳಾ ಅಂಗಡಿ ಮೊದಲಾದವರು ವೇದಿಕೆಯಲ್ಲಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement