ಕರ್ನಾಟಕ ವಿಧಾನಸಭೆ ಚುನಾವಣೆ 2023 : ಬಿಜೆಪಿ-ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆ, ಕಿಂಗ್‌ ಮೇಕರ್‌ ಆಗುವ ನಿರೀಕ್ಷೆಯಲ್ಲಿ ಜೆಡಿಎಸ್‌

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯ ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ರಾಜ್ಯದ ಪ್ರಮುಖ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ.
ಇದೇವೇಳೆ ಪಕ್ಷ ಬಿಡುವುದು, ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುವುದು, ಈ ಪಕ್ಷದಿಂದ ಆ ಪಕ್ಷಕ್ಕೆ ಹಾರುವುದು ಸಾಮಾನ್ಯ ಎಂಬಂತೆ ನಡೆಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ರಾಜಕೀಯದಾಟದಲ್ಲಿ ಸದ್ಯಕ್ಕೆ ಪ್ರಮುಖವಾಗಿ ಕಂಡುಬರುತ್ತಿವೆ. ಆಮ್‌ ಆದ್ಮಿ ಪಕ್ಷದ ವರಿಷ್ಠ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇತ್ತೀಚಿಗೆ ರಾಜಕ್ಕೆ ಬಂದು ಹೋಗಿದ್ದಾರೆ.
ಬಿಜೆಪಿಯಿಂದ ಪ್ರಧಾನಿ ಮೋದಿ, ಅಮಿತ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪದೇಪದೇ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ ಸುರ್ಜೆವಾಲಾ ಅವರು ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ವಿವಿಧ ಯಾತ್ರೆಗಳನ್ನು ಮಾಡುತ್ತಿದ್ದಾರೆ.
ಬಿಜೆಪಿ ಚುನಾವಣಾ ತಯಾರಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ಪ್ರಚಾರ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆದರೆ ಆಡಳಿತಾರೂಢ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಬಿಜೆಪಿಯು ತನ್ನ ಕೇಂದ್ರದ ನಾಯಕತ್ವದ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಸ್ಪಷ್ಟ. ಈ ಕಾರಣಕ್ಕಾಗಿಯೇ ಕೇಂದ್ರ ನಾಯಕರು ಪದೇಪದೇ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಟಿಕೆಟ್ ಹಂಚಿಕೆ- ಬಿಜೆಪಿಗೆ ಸವಾಲು…
ಬಿಜೆಪಿಗೆ ನಿಜವಾದ ಅಗ್ನಿಪರೀಕ್ಷೆ ಇರುವುದು ಟಿಕೆಟ್ ಹಂಚಿಕೆ ಸಮಯದಲ್ಲಿ. ಪಕ್ಷದ ನಿಷ್ಠಾವಂತರು ತಮ್ಮ ನ್ಯಾಯಯುತ ಪಾಲನ್ನು ಕೇಳುತ್ತಿದ್ದಾರೆ. ರಾಜಕೀಯ ಪಕ್ಷಗಳನ್ನು ಬದಲಾಯಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ಬರಲು ಸಹಾಯ ಮಾಡಿದವರಿಗೆ ಬಿಜೆಪಿ ಟಿಕೆಟ್‌ ನೀಡಿದರೆ ಪಕ್ಷದ ನಿಷ್ಠಾವಂತರನ್ನು ಹೇಗೆ ಸಮಾಧಾನ ಮಾಡುವುದು ಎಂಬ ಪ್ರಶ್ನೆಯೂ ಇದೆ. ಜೊತೆಗೆ ಬಿಜೆಪಿಯ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚಗೆ ಕೆಲವು ಶಾಸಕರಿಗೆ ಟಿಕೆಟ್‌ ತಪ್ಪಬಹುದು ಎಂದು ನೀಡಿದ ಹೇಳಿಕೆ ಪಕ್ಷದ ಆಂತರಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಜೊತೆಗೆ ಇತ್ತೀಚಿನ ಲೋಕಾಯುಕ್ತ ಪ್ರಕರಣದಲ್ಲಿ ಬಿಜೆಪಿಯು ಮುಜುಗರ ಎದುರಿಸಿದ ನಂತರ ಅಭ್ಯರ್ಥಿಗಳಿಗೆ ಕ್ಲೀನ್ ಇಮೇಜ್ ಇರುವುದನ್ನು ಪಕ್ಷ ಖಚಿತಪಡಿಸಿಕೊಳ್ಳಬೇಕು ಎಂಬುದು ಅದಕ್ಕೆ ಹೆಚ್ಚು ಪ್ರಸ್ತುತವಾಗಬಹುದು. ಆದಾಗ್ಯೂ, ಪಕ್ಷವು ಬಹುಮತ ಪಡೆಯಬೇಕಿದ್ದರೆ ಗೆಲ್ಲುವ ಕುದುರೆಯೂ ಪಕ್ಷಕ್ಕೆ ಪ್ರಮುಖ ಅಂಶ ಎಂಬುದನ್ನು ಪಕ್ಷವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದು ಬಿಜೆಪಿಗೆ ತಂತಿಯ ಮೇಲಿನ ನಡಿಗೆಯಾಗಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಕಾಂಗ್ರೆಸ್‌ ಶತಾಯ ಗತಾಯ ಪ್ರಯತ್ನ…
ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಪ್ರತಿ ಅವಕಾಶವನ್ನೂ ಬಳಸಿಕೊಳ್ಳಲು ಯತ್ನಿಸುತ್ತಿದೆ. ಅವಕಾಶದ ಕಿಂಡಿ ಎಲ್ಲಿದೆ ಎಂದು ಹುಡುಕುತ್ತಿದೆ. ಮೇಲ್ನೋಟಕ್ಕೆ ಪಕ್ಷ ಒಗ್ಗಟ್ಟನ್ನು ತೋರಿದರೂ ಆಂತರಿಕವಾಗಿ ಪಕ್ಷದ ಒಗ್ಗಟ್ಟು ಪ್ರಶ್ನೆಯಾಗಿಯೇ ಉಳಿದಿದೆ.
ಕಾಂಗ್ರೆಸ್‌ನ ಇಬ್ಬರು ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಗ್ಗಟ್ಟಿನ ಪ್ರಬಲ ಪ್ರದರ್ಶನ ಮಾಡಿದ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಒಗ್ಗಟ್ಟು ತೋರಿಸುವ ಅನಿವಾರ್ಯತೆ ಕಾಂಗ್ರೆಸ್‌ಗೆ ಇದೆ. ಈ ಮೊದಲು ಇಬ್ಬರೂ ನಾಯಕರು ತಮ್ಮ ಮುಖ್ಯಮಂತ್ರಿ ಹುದ್ದೆಯ ಕನಸನ್ನು ತಾವೇ ಅಥವಾ ತಮ್ಮ ಬೆಂಬಲಿಗರ ಮೂಲಕ ವ್ಯಕ್ತಪಡಿಸಿದ್ದರೂ ಇತ್ತೀಚಿನ ದಿನಗಳಲ್ಲಿ ಈ ವಿಚಾರದಲ್ಲಿ ಮಿತಿ ದಾಟದಂತೆ ನಡೆದುಕೊಂಡಿದ್ದಾರೆ. ನಾಯಕತ್ವದ ವಿಚಾರದಲ್ಲಿ ಪಕ್ಷಕ್ಕೆ ಮುಜುಗರವಾಗಬಹುದಾದ ಹೇಳಿಕೆಗಳನ್ನು ಇತ್ತೀಚಿಗೆ ಅವರೂ ನೀಡಿಲ್ಲ ಹಾಗೂ ಅವರ ಬೆಂಬಲಿಗರೂ ನೀಡಿಲ್ಲ. ಆದರೆ ಆಂತರಿಕವಾಗಿ ಎಲ್ಲವೂ ಸರಿಯಿದೆಯೇ ಎಂಬುದು ಕೂಡ ಚುನಾವಣೆ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಯಾಕೆಂದರೆ ಪಕ್ಷದಲ್ಲಿ ಹೊಂದಾಣಿಕೆ ಹಾಗೂ ಸಮನ್ವಯತೆಯೂ ಚುನಾವಣೆ ವೇಳೆ ಮುಖ್ಯವಾಗಲಿದೆ. ಚುನಾವಣೆ ವೇಳೆಯೇ ನಾಯಕತ್ವದ ಬಗ್ಗೆ ಗೊಂದಲ ಎದುರಾದರೆ ಅಥವಾ ನಾಯಕತ್ವದ ಪ್ರಶ್ನೆ ಉದ್ಭವಿಸಿದರೆ ಅದು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಬಹುದು.
ಆದರೆ ಮೇಲ್ನೋಟಕ್ಕೆ ಒಗ್ಗಟ್ಟು ಕಂಡುಬಂದರೂ ಟಿಕೆಟ್‌ ಹಂಚಿಕೆಯ ಸಮಯದಲ್ಲಿ ಅದು ಸ್ಪಷ್ಟವಾಗಲಿದೆ. ಯಾಕೆಂದರೆ ಕಾಂಗ್ರೆಸ್‌ ಈ ಮೊದಲು ಹೇಳಿದ್ದನ್ನೇ ನಂಬುವುದಾದರೆ ಇಷ್ಟೊತ್ತಿಗಾಗಲೇ ಕಾಂಗ್ರೆಸ್‌ನ ಮೊದಲನೇ ಪಟ್ಟಿ ಬಿಡುಗಡೆಯಾಗಬೇಕಿತ್ತು. ಅದು ಡಿಸೆಂಬರ್-ಜನವರಿಯಲ್ಲಿಯೇ ಘೋಷಣೆಯಾಗಬೇಕಿತ್ತು. ಆದರೆ ಫೆಬ್ರವರು ಕಳೆದು ಮಾರ್ಚ್‌ ಅರ್ಧ ತಿಂಗಳು ಮುಗಿಯುತ್ತ ಬಂದರೂ ಅವರು ಮೊದಲನೇ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗಿಲ್ಲ. ಅದು ಯಾವಾಗ ಘೋಷಣೆಯಾಗುತ್ತದಯೆಂದು ಬಹುತೇಕರಿಗೆ ಗೊತ್ತಿಲ್ಲ. ಎಲ್ಲವೂ ಗೊಂದಲದಲ್ಲಿಯೇ ಇದೆ. ಕೆಲವೇ ದಿನಗಳಲ್ಲಿ ಆಗುತ್ತದೆ ಎಂದು ಜನವರಿಯಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಯಾವಾಗ..? ಯಾರಿಗೂ ಗೊತ್ತಿಲ್ಲ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಅಭ್ಯರ್ಥಿಗಳ ಘೋಷಣೆಯಲ್ಲಿ ಜೆಡಿಎಸ್‌ ಮುಂದೆ..ಆದರೆ…..
ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಘೋಷಿಸಿರುವ ಜೆಡಿಎಸ್ ಹೀಗೆ ಮಾಡಿದ ಮೊದಲ ಪಕ್ಷವಾದರೂ ನಿರ್ಣಾಯಕ ಸ್ಥಾನಗಳಿಗೆ, ಪಕ್ಷವು ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಕೆಲವು ಪ್ರಮುಖ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್‌ ವಂಚಿತ ನಾಯಕರು ತಮ್ಮ ಪಕ್ಷದ ಬಾಗಿಲು ಬಡಿಯುವುದನ್ನು ಸಹ ಪಕ್ಷವು ಕಾಯುತ್ತಿರಬಹುದು. ಹಿಂದಿನ ಚುನಾವಣೆಯಂತೆಯೇ ಅತಂತ್ರ ವಿಧಾನಸಭೆಯ ಸಾಧ್ಯತೆ ನಿರೀಕ್ಷೆಯಲ್ಲಿರುವ ಜೆಡಿಎಸ್ ಕಿಂಗ್ ಮೇಕರ್ ಆಗುವುದನ್ನು ನಿರೀಕ್ಷಿಸುತ್ತಿದೆ. ಪಂಚರತ್ನ ಯಾತ್ರೆ ಮೂಲಕ ರಾಜ್ಯಾದ್ಯಂತ ಜನಸಂಪರ್ಕ ಮಾಡುತ್ತಿರುವ ಜೆಡಿಎಸ್‌ ತನ್ನ ಬಲವಾದ ಪೊಕೆಟ್‌ ಹೊರತು ಪಡಿಸಿ ಎಲ್ಲೆಲ್ಲಿ ಗೆಲುವಿನ ಸಾಧ್ಯತೆ ಕಂಡುಬರುತ್ತಿದೆ ಎಂದು ಲೆಕ್ಕಾಚಾರ ಹಾಕುತ್ತಿದೆ.
ಬಿಜೆಪಿಗೆ ಇದು ದಕ್ಷಿಣ ಭಾರತದಲ್ಲಿ ಪಕ್ಷದ ಅಸ್ತಿತ್ವಕ್ಕೆ ಮಹತ್ವವಾದರೆ ದಕ್ಷಿಣ ಭಾರತದಲ್ಲಿ ತನ್ನ ಉಪಸ್ಥಿತಿ ಕಂಡುಕೊಳ್ಳಲು ಕಾಂಗ್ರೆಸ್‌ಗೆ ಪ್ರಮುಖ ಚುನಾವಣೆಯಾಗಲಿದೆ. ಬಿಜೆಪಿ ಕರ್ನಾಟಕದ ಚುನಾವಣಾ ಫಲಿತಾಂಶವು ತೆಲಂಗಾಣದ ವಿಧಾನಸಭಾ ಚುನಾವಣೆ ದೃಷ್ಟಿಯಿಂದಲೂ ಮಹತ್ವದ್ದಾಗಿದ್ದರೆ ಕಾಂಗ್ರೆಸ್‌ಗೆ ದಕ್ಷಿಣ ಭಾರತದಲ್ಲಿ ಕಳೆದು ಹೋದ ಪ್ರಾಬಲ್ಯವನ್ನು ಪರುಸ್ಥಾಪಿಸಲು ಗೆಲುವು ಅಗತ್ಯವಾಗಿದೆ. ಅಲ್ಲದೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವರೇ ಆಗಿರುವುದರಿಂದಲೂ ಕಾಂಗ್ರೆಸ್‌ಗೆ ಈ ಚುನಾವಣೆ ಮಹತ್ವದ್ದಾಗಿದೆ. ಒಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಚುನಾವಣೆಗೆ ಜೋರಾಗಿ ತಯಾರಿ ನಡೆಸಿದ್ದರೂ ಆಮ್‌ ಆದ್ಮಿ ಪಕ್ಷ, ಎಐಎಂಐಎಂ ಹಾಗೂ ಎಸ್‌ಡಿಪಿಐ ತಯಾರಿ ನಡೆಸುತ್ತಿವೆ.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement