ಎರಡು ಮದುವೆಯಾದ ಗಂಡ : ಈಗ ಇಬ್ಬರು ಹೆಂಡತಿಯರ ನಡುವೆ ವಾರದಲ್ಲಿ 3-3 ದಿನ ಗಂಡನ ಹಂಚಿಕೆಯ ಒಪ್ಪಂದ…!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಬ್ಬರು ಪತ್ನಿಯರ ನಡುವೆ ಪತಿಯ ಹಂಚಿಕೊಳ್ಳುವಿಕೆ ಚರ್ಚೆಗೆ ಕಾರಣವಾಗಿದೆ. ಪತಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿದ್ದು, ಇಬ್ಬರು ಮಹಿಳೆಯರನ್ನು ಮದೆಯಾಗಿದ್ದಾನೆ. ಇದು ಜಗಳಕ್ಕೆ ಕಾರಣವಾಗಿ ನಂತರ ನ್ಯಾಯಾಲಯದ ಹೊರಗೆ ನಡೆದ ಕೌನ್ಸೆಲಿಂಗ್ ನಲ್ಲಿ ಪತಿ-ಪತ್ನಿಯರ ನಡುವೆ ವಿಶಿಷ್ಟ ಒಪ್ಪಂದ ಏರ್ಪಟ್ಟಿದೆ.
ಒಪ್ಪಂದದ ಪ್ರಕಾರ, ಆತ ವಾರದಲ್ಲಿ ಮೂರು ದಿನ ಮೊದಲ ಪತ್ನಿಯೊಂದಿಗೆ ಹಾಗೂ ಮೂರು ದಿನ ಎರಡನೇ ಪತ್ನಿಯೊಂದಿಗೆ ಇರುತ್ತಾನೆ. ಭಾನುವಾರ ಆತ ತನ್ನ ಇಚ್ಛೆಯಂತೆ ಇರಲು ಮುಕ್ತ. ಅಂದರೆ, ಭಾನುವಾರ, ಆತ ಇವರಿಬ್ಬರಲ್ಲಿ ಯಾರೊಂದಿಗೂ ಇರಬಹುದು. ಅಥವಾ ಇರಬೇಕೆಂದೇನೂ ಇಲ್ಲ. ಹೀಗೆ ಒಪ್ಪಂದಕ್ಕೆ ಬರಲಾಗಿದೆ.
ಈ ಪ್ರಕರಣವು ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯಕ್ಕೆ ಬಂದಾಗ ನ್ಯಾಯಾಲಯವು ಸಮಸ್ಯೆಯನ್ನು ಪರಸ್ಪರ ಬಗೆಹರಿಸಿಕೊಳ್ಳಲು ಅವಕಾಶ ನೀಡಿ ಈ ಬಗ್ಗೆ ಸಲಹೆಗಾರರನ್ನಾಗಿ ಓರ್ವ ವಕೀಲರನ್ನು ನೇಮಿಸಿತು. ನಂತರ ಇಬ್ಬರು ಪತ್ನಿಯರು ಹಾಗೂ ಪತಿ ಮಧ್ಯೆ ಆದ ಒಪ್ಪಂದದ ಪ್ರಕಾರ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ತಿಂಗಳ ಸಂಬಳವನ್ನು ತನ್ನ ಇಬ್ಬರು ಹೆಂಡತಿಯರ ನಡುವೆ ಸಮನಾಗಿ ಹಂಚುತ್ತಾನೆ. ಆತ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾನೆ ಮತ್ತು ಇಬ್ಬರು ಪತ್ನಿಯರು ತಲಾ ಒಂದನ್ನು ಪಡೆಯುತ್ತಾರೆ. ಅಲ್ಲದೆ, ಗಂಡ ಸೋಮವಾರದಿಂದ ಬುಧವಾರದವರೆಗೆ ಒಬ್ಬ ಹೆಂಡತಿಯ ಜೊತೆ ಮತ್ತು ಗುರುವಾರದಿಂದ ಶನಿವಾರದ ವರೆಗೆ ಇನ್ನೊಬ್ಬ ಹೆಂಡತಿಯ ಜೊತೆ ಇರುತ್ತಾನೆ. ಭಾನುವಾರ, ಆತ ಸ್ವತಂತ್ರನಾಗಿದ್ದು, ಇವರಿಬ್ಬರ ಜೊತೆ ಇರಬೇಕು ಎಂದಿಲ್ಲ ಅಥವಾ ಇಬ್ಬರಲ್ಲಿ ಯಾರ ಜೊತೆಯೂ ಇರಬಹುದು ಎಂದು ಆತನಿಗೆ ಒಂದು ದಿನ ಮುಕ್ತ ಅಧಿಕಾರ ನೀಡಲಾಗಿದೆ. ಒಂದು ವೇಳೆ ಆತ ಈ ಒಪ್ಪಂದ ಉಲ್ಲಂಘಿಸಿದರೆ, ಮೊದಲ ಹೆಂಡತಿಯು ಆತನ ವಿರುದ್ಧ ನ್ಯಾಯಾಲಯಕ್ಕೆ ಹೋಗಬಹುದು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ..?
ವಿವಾದವನ್ನು ಸೌಹಾರ್ದಯುತವಾಗಿ ಬರೆಹರಿಸಲು ಈ ವರ್ಷದ ಜನವರಿಯಲ್ಲಿ ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು ನೇಮಿಸಿದ ಸಲಹೆಗಾರರಾದ ವಕೀಲ ಹರೀಶ ದಿವಾನ್ ಪ್ರಕಾರ, ಸಾಫ್ಟ್‌ವೇರ್‌ ಇಂಜಿನಿಯರ್‌ ಮೇ 2018 ರಲ್ಲಿ 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದಾನೆ. ಅವರಿಬ್ಬರೂ ಗುರುಗ್ರಾಮದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದರು. 2020 ರಲ್ಲಿ, ಮಹಿಳೆ ಗರ್ಭಿಣಿಯಾದಳು ಮತ್ತು ಆಗ ಕೊರೊನಾ ಆರ್ಭಟ ಜೋರಾಗಿದ್ದುದರಿಂದ ಆತ ಪತ್ನಿಯನ್ನು ಅವಳ ಗ್ವಾಲಿಯರ್‌ನಲ್ಲಿರುವ ಅವಳ ಹೆತ್ತವರ ಮನೆಗೆ ಕರೆದೊಯ್ದಿದ್ದಾನೆ. “ಕೋವಿಡ್ 19 ಕಾರಣದಿಂದಾಗಿ, ಆಗ ಓಡಾಟವನ್ನೂ ನಿರ್ಬಂಧಿಸಲಾಗಿತ್ತು. ಈ ಕಾರಣಕ್ಕಾಗಿ ಪತ್ನಿಗೆ ತನ್ನ ಕುಟುಂಬದೊಂದಿಗೆ ಇರಲು ಹೇಳಿದ್ದ. ಪತ್ನಿಯನ್ನು ಗ್ವಾಲಿಯರ್‌ನಲ್ಲಿ ಬಿಟ್ಟು ಕೆಲವು ದಿನಗಳ ನಂತರ ಆತ ಪುನಃ ಗುರುಗ್ರಾಮಕ್ಕೆ ಹಿಂತಿರುಗಿದ್ದಾನೆ. ಬಂದವನು ಮತ್ತೆ ಗ್ವಾಲಿಯರ್‌ಗೆ ಹೋಗಲಿಲ್ಲ. ಅಲ್ಲದೆ, 2021 ರಲ್ಲಿ, ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ, ನಂತರ ಅವಳು ಸಹ ಗರ್ಭಿಣಿಯಾಗಿ ಜುಲೈ 2021 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೇ ವೇಳೆ ಆತನ ಮೊದಲ ಹೆಂಡತಿ ತಾನು ಗುರುಗ್ರಾಮಕ್ಕೆ ಬರುವುದಾಗಿ ಹೇಳಲು ಪ್ರಾರಂಭಿಸಿದಳು. ಆದರೆ ಅವಳು ಪ್ರತಿಸಲ ಕೇಳಿದಾಗಲೂ ಆತ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ.
ಜನವರಿ 2023 ರಲ್ಲಿ, ಆತನ ಮೊದಲ ಹೆಂಡತಿಯ ಕುಟುಂಬವು ಗುರುಗ್ರಾಮಕ್ಕೆ ಪ್ರಯಾಣ ಬೆಳೆಸಿತು. ಆಗ ಅವರಿಗೆ ಈತ ಇನ್ನೊಬ್ಬಳನ್ನು ಮದುವೆಯಾಗಿರುವುದು, ಅವಳೊಟ್ಟಿಗೆ ವಾಸಿಸುತ್ತಿರುವುದು ಹಾಗೂ ಒಂದು ಅವರಿಬ್ಬರಿಗೆ ಮಗುವಾಗಿರುವುದು ಗೊತ್ತಾಗಿದೆ. ವಾಗ್ವಾದದ ನಂತರ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ.
ಅದೇ ತಿಂಗಳು, ತನಗೆ ಜೀವನಾಂಶ ಬೇಕೆಂದು ಮೊದಲ ಪತ್ನಿ ಗ್ವಾಲಿಯರ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದಳು. ಪ್ರಕರಣದ ವಿಚಾರಣೆಯ ಮೊದಲು ಕೌಟುಂಬಿಕ ರಾಜಿಗೆ ಪ್ರಯತ್ನಿಸುವಂತೆ ವಕೀಲ ಮತ್ತು ಸಲಹೆಗಾರ ಹರೀಶ್ ದಿವಾನ್ ಅವರನ್ನು ನ್ಯಾಯಾಲಯ ಕೇಳಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ತಾವು ಸಮಾಲೋಚಕರಾಗಿರುವುದರಿಂದ, ಸಮಸ್ಯೆಯನ್ನು ಪರಿಹರಿಸಲು ಮೊದಲ ಪ್ರಯತ್ನವಾಗಿದೆ. ಮೊದಲ ಹೆಂಡತಿ ತನ್ನ ಮಗುವಿಗೆ ಭದ್ರತೆಯನ್ನು ಬಯಸಿದ್ದಳು ಮತ್ತು ತನ್ನ ಗಂಡನನ್ನು ಜೈಲಿಗೆ ಕಳುಹಿಸಲು ಅವಳು ಬಯಸಲಿಲ್ಲ. ಎರಡನೆಯ ಹೆಂಡತಿ ಮೊದಲನೆಯವಳೊಂದಿಗೆ ಬದುಕಲು ಸಿದ್ಧಳಾದಳು, ಆದರೆ ಗಂಡನೇ ಮೊದಲನೆಯವಳೊಂದಿಗೆ ಬದುಕಲು ಬಯಸಲಿಲ್ಲ ಎಂದು ವಕೀಲ ದಿವಾನ್‌ ಹೇಳಿದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 ರ ಅಡಿಯಲ್ಲಿ ದ್ವಿಪತ್ನಿತ್ವವು ಕಾನೂನುಬಾಹಿರವಾಗಿದೆ, ಇದು ಮುಂದೆ ಸಮಸ್ಯೆಗೆ ಕಾರಣವಾಗಬಹುದು ಎಂದು ದಿವಾನ್ ಅವರು ಕಾನೂನಿನ ಎಲ್ಲ ಅಂಶಗಳನ್ನೂ ಆ ವ್ಯಕ್ತಿಗೆ ವಿವರಿಸಿದ ನಂತರ ಆತ ಇಬ್ಬರು ಹೆಂಡತಿಯರ ನಡುವೆ ಒಪ್ಪಂದ ಮಾಡಿಕೊಳ್ಳಲು ಒಪ್ಪಿಕೊಂಡ ಎಂದು ಹೇಳಿದ್ದಾರೆ.

ಈ ಒಪ್ಪಂದದ ಪ್ರಕಾರ, ಪತಿಯು ವಾರದಲ್ಲಿ 3 ದಿನ ಮೊದಲ ಹೆಂಡತಿಯೊಂದಿಗೆ ಮತ್ತು 3 ದಿನಗಳ ಕಾಲ ಎರಡನೇ ಹೆಂಡತಿಯೊಂದಿಗೆ ಇರುತ್ತಾನೆ. ಭಾನುವಾರ, ಆತ ಸ್ವತಂತ್ರ. ಆತ ಇಬ್ಬರ ಜೊತೆಯೂ ಇರಬೇಕೆಂದಿಲ್ಲ. ಒಪ್ಪಂದದ ಪ್ರಕಾರ, ಇಂಜಿನಿಯರ್ ಗುರುಗ್ರಾಮದಲ್ಲಿ ತನ್ನ ಇಬ್ಬರು ಹೆಂಡತಿಯರಿಗೂ ಪ್ರತ್ಯೇಕ ಫ್ಲ್ಯಾಟ್‌ಗಳನ್ನು ನೀಡಿದ್ದಾನೆ.
ಹಿಂದೂ ವಿವಾಹ ಕಾಯ್ದೆ ಮತ್ತು ಐಪಿಸಿ ಪ್ರಕಾರ ಇದು ಕಾನೂನುಬದ್ಧವಾಗಿಲ್ಲದಿದ್ದರೂ, ಮೂವರು ಪರಸ್ಪರ ತಿಳುವಳಿಕೆಯೊಂದಿಗೆ ಒಪ್ಪಂದದ ನಿಯಮಗಳ ಪ್ರಕಾರ ಬದುಕಬಹುದು. ಒಪ್ಪಂದವನ್ನು ಉಲ್ಲಂಘಿಸಿದರೆ, ಮೊದಲ ಪತ್ನಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ದಿವಾನ್ ಹೇಳಿದ್ದಾರೆ.
ಕಾನೂನು ತಜ್ಞರು ಭಾರತದಲ್ಲಿ ಇಂತಹ ಪ್ರಕರಣಗಳು ಅಸಹಜವಲ್ಲ, ಇಂತಹ ಪ್ರಕರಣಗಳಲ್ಲಿ ಇಬ್ಬರು ಪತ್ನಿಯರಲ್ಲಿ ಯಾರೊಬ್ಬರು ಅದನ್ನು ಪ್ರಶ್ನಿಸುವ ವರೆಗೂ ಆತನ ವಿರುದ್ಧ ಕ್ರಮಕ್ಕೆ ಯಾವುದೇ ಪ್ರಕರಣ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement