ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಳ-ಕೆಪಿಟಿಸಿಎಲ್ ನೌಕರರ ವೇತನ ಶೇ.20ರಷ್ಟು ಹೆಚ್ಚಳಕ್ಕೆ ನಿರ್ಧಾರ, ಇಂದೇ ಆದೇಶ: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ನೌಕರರು ಹಾಗೂ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರ ವೇತನ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಇಂದೇ ಈ ಬಗ್ಗೆ ಆದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ವೇತನವನ್ನು ಶೇ.15 ರಷ್ಟು ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗೂ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರ ವೇತನವನ್ನು ಶೇ.20 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಈ ಕುರಿತು ಇಂದೇ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ಬೊಮ್ಮಾತಿ ತಿಳಿಸಿದರು.
ಮಾಧ್ಯಮದವರ ಜೊತೆ ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಸಾರಿಗೆ ಇಲಾಖೆಯವರು ವೇತನ ಹೆಚ್ಚಳ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ 15% ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ಅದೇ ರೀತಿಯಲ್ಲಿ ಕೆಪಿಟಿಸಿಎಲ್ ಮತ್ತು ಎಸ್ಕಾಂ ನೌಕರರ ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದೇವೆ. ಶೇ. 20ರಷ್ಟು ವೇತನ ಹೆಚ್ಚಳ ಮಾಡಲು ತೀರ್ಮಾನ ಮಾಡಿದ್ದು, ಇಂದು ಆದೇಶ ಹೊರಡಿಸುತ್ತೇವೆ ಎಂದು ಅವರು ತಿಳಿಸಿದರು.
ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ನೌಕರರ ಸಂಘದ ಜೊತೆಗೆ ಸರ್ಕಾರ ಸರಣಿ ಮಾತುಕತೆ ನಡೆಸಿತ್ತು. ನೌಕರರ ಬೇಡಿಕೆ ಹಿನ್ನೆಲೆಯಲ್ಲಿ ಶೇ. 10 ರಷ್ಟು ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಭರವಸೆ ಕೊಟ್ಟಿದ್ದರು. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೇ.15 ರಷ್ಟು ಏರಿಕೆ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಮಾರ್ಚ್‌ 21ರಂದು ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ ಎಂದು ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ್ ಸುಬ್ಬಾರಾವ್ ಮಂಗಳವಾರ ತಿಳಿಸಿದ್ದರು. ಮುಂದಿನ ಮಂಗಳವಾರ ನಮ್ಮ ಮುಷ್ಕರ ನಡೆಯಲಿದೆ. 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಯಾವುದೇ ಕಾರಣಕ್ಕೂ ಡಿಪೋದಿಂದ ಬಸ್‌ಗಳನ್ನು ತೆಗೆಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ.
1. ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತನವನ್ನು ಶೇ.25ರಷ್ಟು ಹೆಚ್ಚಿಸಬೇಕು.
ವೇತನ ಹೆಚ್ಚಳವು ಪರಿಷ್ಕೃತ ಮೂಲ ವೇತನದ ಶೇ.3ರಷ್ಟಿರಬೇಕು.
ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನೂ ಮೇಲಿನಂತೆಯೇ ಸಿದ್ಧಪಡಿಸಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು.

ಎಲ್ಲ ನೌಕರರಿಗೂ ಬಾಟಾ, ಮಾಸಿಕ, ದೈನಂದಿನ ಭತ್ಯೆಗಳನ್ನು ಐದು ಪಟ್ಟು ಜಾಸ್ತಿ ಮಾಡಬೇಕು.
ಹೊಲಿಗೆ ಭತ್ಯೆ, ಶೂ, ಜೆರ್ಸಿ, ರೈನ್‌ ಕೋಟ್‌ಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು.
ಎಲ್ಲ ನಿರ್ವಾಹಕರಿಗೂ ಕ್ಯಾಷಿಯರ್‌ಗಳಿಗೆ ಸಮಾನವಾದ ನಗದು ಪ್ರೋತ್ಸಾಹಧನ ನೀಡಬೇಕು.
2021ರ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತಿಲ್ಲದೆ ಮರು ನೇಮಕ ಮಾಡಬೇಕು. ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮೂಲ ಘಟಕಕ್ಕೆ ಮರು ನಿಯೋಜಿಸಬೇಕು.
ಮುಷ್ಕರದ ವೇಳೆ ಎಫ್‌ಐಆರ್‌ ದಾಖಲಿಸಿರುವ ನೌಕರರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು.
ಕೈಗಾರಿಕಾ ವಿವಾದ ಕಾಯಿದೆ 1947ರ ಅನ್ವಯ ಜಂಟಿ ಕ್ರಿಯಾ ಸಮಿತಿಯ ಜತೆ ಕೈಗಾರಿಕಾ ಒಪ್ಪಂದ ಮಾಡಬೇಕು. ಇದು 2020ರ ಜನವರಿ 1 ರಿಂದ 2023ರ ಡಿ. 31ರವರೆಗೆ ಜಾರಿಯಲ್ಲಿರಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರು ಮಾರ್ಚ್‌ 21ರಿಂದ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement