ಕಾಂಗ್ರೆಸ್ 4ನೇ ಗ್ಯಾರಂಟಿ ‘ಯುವ ನಿಧಿ’ ಯೋಜನೆ ; ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನಿರುದ್ಯೋಗ ಭತ್ಯೆ ಘೋಷಿಸಿದ ರಾಹುಲ್‌ ಗಾಂಧಿ

ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ ಮಾಸಿಕ 3,000 ರೂ. ಮತ್ತು ಡಿಪ್ಲೋಮಾ ಕೋರ್ಸ್‌ ಮುಗಿಸಿದವರಿಗೆ ತಿಂಗಳಿಗೆ 1,500 ರೂ. ನೀಡಲಾಗುವುದು ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ನಡೆದ ಯುವಕ್ರಾಂತಿ ಸಮಾವೇಶದಲ್ಲಿ ಅವರು ನಿರುದ್ಯೋಗಿ ಯುವಕರಿಗಾಗಿ ʼಯುವ ನಿಧಿʼ ಎಂಬ ಪಕ್ಷದ ನಾಲ್ಕನೇ ಚುನಾವಣಾ ಭರವಸೆಯನ್ನು ಅನಾವರಣಗೊಳಿಸಿದರು. ಇದು ಭಾರತ ಜೋಡೋ ಯಾತ್ರೆಯ ನಂತರ ರಾಜ್ಯಕ್ಕೆ ರಾಹುಲ್ ಗಾಂಧಿಯವರ ಮೊದಲ ಭೇಟಿಯಾಗಿದೆ.
ರಾಜ್ಯದಲ್ಲಿ ಹಗರಣಗಳು ಮತ್ತು ಗುತ್ತಿಗೆದಾರರಿಂದ ಬಿಜೆಪಿ ಸರ್ಕಾರವು 40 ಪರ್ಸೆಂಟ್ ಕಮಿಷನ್ ಎಂದು ಆರೋಪಿಸಿದರು.
ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಯುವಕರು ನನ್ನ ಬಳಿ ಬಂದು ಈ ರಾಜ್ಯದಲ್ಲಿ ಉದ್ಯೋಗವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದ ವರೆಗೆ ಪ್ರತಿ ತಿಂಗಳು 3,000 ರೂ. ಮತ್ತು ಡಿಪ್ಲೋಮಾ ಮುಗಿಸಿದವರಿಗೆ ಎರಡು ವರ್ಷಗಳವರೆಗೆ 1,500 ರೂ. ಕೊಡಲಾಗುತ್ತದೆ. ನಾವು ಅಲ್ಲಿಗೇ ನಿಲ್ಲುವುದಿಲ್ಲ. ಐದು ವರ್ಷದೊಳಗೆ 10 ಲಕ್ಷ ಯುವಕ ಯುವತಿಯರಿಗೆ ಉದ್ಯೋಗ ನೀಡುತ್ತೇವೆ ಮತ್ತು ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಮಹಿಳೆಯರು ಕೂಡ ಭಾರತ ಜೋಡಿ ಯಾತ್ರೆ ವೇಳೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಮಹಿಳೆಯರಿಗೆ ಮಾಸಿಕ 2,000 ರೂ., ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಮತ್ತು 2,000 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಭಾರತ ಜೋಡೋ ಯಾತ್ರೆಯಲ್ಲಿ ಎಲ್ಲರೂ ಒಗ್ಗೂಡಿ ನಡೆದಿದ್ದೇವೆ ಮತ್ತು ಯಾವುದೇ ದ್ವೇಷ, ಹಿಂಸೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಎಲ್ಲರಲ್ಲಿಯೂ ಸಹೋದರತೆ ಮತ್ತು ಗೌರವವಿತ್ತು. ದ್ವೇಷದ ಮಾರುಕಟ್ಟೆಯಲ್ಲಿ ಲಕ್ಷಾಂತರ ಜನರು ಪ್ರೀತಿಯ ಅಂಗಡಿಗಳನ್ನು ತೆರೆದರು. ಮತ್ತು ಇದು ನಮ್ಮ ಭಾರತ ಎಂದು ರಾಹುಲ್ ಗಾಂಧಿ ಹೇಳಿದರು.
ದೇಶವು ಎಲ್ಲರಿಗೂ ಸೇರಿದ್ದು, ಆಯ್ದ ಕೆಲವರಿಗೆ ಮಾತ್ರವಲ್ಲ. ಅದು ಅದಾನಿಗೆ ಸೇರಿದ್ದಲ್ಲ. ಇದು ರೈತರು, ಕಾರ್ಮಿಕರು, ಯುವಕರು ಮತ್ತು ಬಡವರಿಗೆ ಸೇರಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಮೈಸೂರು ಸ್ಯಾಂಡಲ್ ಸೋಪ್ ಕಾರ್ಪೊರೇಷನ್ ಹಗರಣ, ಬಿಜೆಪಿ ಶಾಸಕರೊಬ್ಬರ ಪುತ್ರ ಕೋಟಿಗಟ್ಟಲೆ ಸಿಕ್ಕಿಬಿದ್ದಿರುವ ಪ್ರಕರಣ, ಉದ್ಯೋಗ ಹಗರಣಗಳಲ್ಲಿ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
‘ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರುಗಳಿಗೆ ಒಲವು ತೋರುತ್ತಿರುವ ಕಾರಣ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಉದ್ಯೋಗವಿಲ್ಲ, ಗುತ್ತಿಗೆದಾರರಿಂದ ಸರ್ಕಾರ ಶೇ 40ರಷ್ಟು ಕಮಿಷನ್ ಪಡೆಯುತ್ತಿದೆ ಮತ್ತು ಈ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ಬಯಸುತ್ತಿರುವ ಕಾರಣ ನಾವು ಚುನಾವಣೆಯಲ್ಲಿ ಹೋರಾಡುತ್ತೇವೆ ಮತ್ತು ರಾಜ್ಯವನ್ನು ಸ್ವೀಪ್ ಮಾಡುತ್ತೇವೆ. ನಾವು ಒಟ್ಟಾಗಿ ಭಾರಿ ಜನಾದೇಶದೊಂದಿಗೆ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

ಫೆಬ್ರವರಿಯಲ್ಲಿ, ಕಾಂಗ್ರೆಸ್ ಪಕ್ಷದ ರಾಜ್ಯ ಘಟಕವು ಅಧಿಕಾರಕ್ಕೆ ಚುನಾವಣೆಯಲ್ಲಿ ಪಕ್ಷವು ಬಹುಮತ ಪಡೆದರೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ‘ಅನ್ನ ಭಾಗ್ಯ’ ಯೋಜನೆಯನ್ನು ಘೋಷಿಸಿತು.
ಜನವರಿಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ಮಹಿಳೆಯರಿಗಾಗಿ ‘ಗೃಹ ಲಕ್ಷ್ಮಿ’ ಯೋಜನೆಯನ್ನು ಘೋಷಿಸಿತು. ಈ ಯೋಜನೆಯಡಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಗೃಹಿಣಿಗೆ ತಿಂಗಳಿಗೆ 2,000 ರೂ. ನೀಡುವುದಾಗಿ ಘೋಷಿಸಿತು. ಇದರಿಂದ ರಾಜ್ಯದ 1.5 ಕೋಟಿ ಗೃಹಿಣಿಯರಿಗೆ ಅನುಕೂಲವಾಗಲಿದೆ ಎಂದು ಪಕ್ಷ ಹೇಳಿರುವ ಈ ಯೋಜನೆಯನ್ನು ಬೆಂಗಳೂರಿನಲ್ಲಿ ಪಕ್ಷದ ‘ನಾ ನಾಯಕಿ’ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಬಂದಿದ್ದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಸರ್ಕಾರ ರಚನೆಯಾದ ನಂತರ ಪ್ರತಿ ತಿಂಗಳು ರಾಜ್ಯದ ಪ್ರತಿ ಮನೆಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಪಕ್ಷ ಭರವಸೆ ನೀಡಿದೆ. ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement