ನವದೆಹಲಿ: ಕೇಂದ್ರ ಸರ್ಕಾರವು ಸರ್ಕಾರಿ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (ಡಿಎ) 4%ರಷ್ಟು ಹೆಚ್ಚಳ ಮಾಡಿದೆ.
ಇದು ಶೇಕಡಾ 38 ರಿಂದ ಶೇಕಡಾ 42 ಕ್ಕೆ ಏರಿಕೆಯಾಗಿದೆ. ಇದರಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಿಷ್ಕೃತ ದರವನ್ನು ಜನವರಿ 2023 ರಿಂದ ಜಾರಿಗೆ ಬರುವಂತೆ ಪರಿಗಣಿಸಲಾಗುತ್ತದೆ. ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಎರಡರಿಂದಲೂ ಬೊಕ್ಕಸದ ಮೇಲೆ ಸಂಯೋಜಿತ ಪರಿಣಾಮವು ವಾರ್ಷಿಕ 12,815.60 ಕೋಟಿ ರೂ.ಗಳಾಗುತ್ತವೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿ, ಕೈಗಾರಿಕಾ ಕಾರ್ಮಿಕರಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಶೇಕಡಾವಾರು ಹೆಚ್ಚಳ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ಈ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.
ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಅಂಗೀಕರಿಸಲ್ಪಟ್ಟ ಸೂತ್ರಕ್ಕೆ ಅನುಗುಣವಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಡಿಎಯನ್ನು 34 ರಿಂದ 38 ಕ್ಕೆ ಹೆಚ್ಚಿಸಿತ್ತು. ಹಣದುಬ್ಬರದಂತಹ ಪರಿಸ್ಥಿತಿಗೆ ಹೊಂದಿಕೊಳ್ಳಲು ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ನೀಡುತ್ತದೆ. ಕೇಂದ್ರ ಸರ್ಕಾರದ ನೌಕರರು ಪಡೆಯುವ ತುಟ್ಟಿಭತ್ಯೆ ಮೊತ್ತದಷ್ಟೇ ಪಿಂಚಣಿದಾರರಿಗೂ ಸಹ ತುಟ್ಟಿ ಪರಿಹಾರ ಸಿಗುತ್ತದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ