ನವದೆಹಲಿ: ಸಂಸತ್ ಸದಸ್ಯರಾಗಿ ಲೋಕಸಭೆಯಿಂದ ಅನರ್ಹಗೊಂಡ ಕೆಲವು ದಿನಗಳ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಮ್ಮ ಟ್ವಿಟರ್ ಬಯೋ ಬದಲಾಯಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯ ಬಯೋವನ್ನು ‘ಅನರ್ಹ ಸಂಸದ’ (Dis’Qualified MP) ಎಂದು ನವೀಕರಿಸಿದ್ದಾರೆ.
‘ಮೋದಿ ಉಪನಾಮ’ ಕುರಿತ ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.
ಈಗ, ಅವರ ಟ್ವಿಟ್ಟರ್ ಖಾತೆಯ ವಿವರಣೆಯಲ್ಲಿ ಅವರ ಸಂಸತ್ತಿನ ಅನರ್ಹ ಸದಸ್ಯತ್ವದ ಜೊತೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯತ್ವವನ್ನು ಉಲ್ಲೇಖಿಸಲಾಗಿದೆ. 2019 ರಲ್ಲಿ ಮೋದಿ ಉಪನಾಮದ ಬಗ್ಗೆ ಅವರ ಹೇಳಿಕೆಯ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಒಂದು ದಿನದ ನಂತರ ಶುಕ್ರವಾರ ಲೋಕಸಭಾ ಸಂಸದರಾಗಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ.
“ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮ ಹೊಂದಿರುತ್ತಾರೆ ಯಾಕೆ ?” ಎಂಬ ಅವರ ಹೇಳಿಕೆಗೆ ಸಂಬಂಧಿಸಿದಂತೆ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಕಾಂಗ್ರೆಸ್ ನಾಯಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) 499 ಮತ್ತು 500 ಸೆಕ್ಷನ್‌ಗಳ ಅಡಿಯಲ್ಲಿ 52 ವರ್ಷದ ಗಾಂಧಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಚ್.ಎಚ್ .ವರ್ಮಾ ಅವರ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು ಮತ್ತು ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳವರೆಗೆ ಶಿಕ್ಷೆಯನ್ನು ಅಮಾನತುಗೊಳಿಸಿತು. .
ಕಾಂಗ್ರೆಸ್‌ನಿಂದ ಸಂಕಲ್ಪ ಸತ್ಯಾಗ್ರಹ…
ಏತನ್ಮಧ್ಯೆ, ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ನಂತರ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಭಾನುವಾರ ದೆಹಲಿಯ ರಾಜ್‌ಘಾಟ್‌ನಲ್ಲಿ ಒಂದು ದಿನದ “ಸಂಕಲ್ಪ ಸತ್ಯಾಗ್ರಹ” ಆರಂಭಿಸಿದೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ, ಪಿ ಚಿದಂಬರಂ ಮತ್ತು ಸಲ್ಮಾನ್ ಖುರ್ಷಿದ್ ಸೇರಿದಂತೆ ಪಕ್ಷದ ಪ್ರಮುಖರು ರಾಜ್‌ಘಾಟ್‌ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಜೈರಾಮ ರಮೇಶ, ಮುಕುಲ್ ವಾಸ್ನಿಕ್, ಪವನಕುಮಾರ ಬನ್ಸಾಲ್, ಶಕ್ತಿಸಿನ್ಹ್ ಗೋಹಿಲ್, ಜೋತಿಮಣಿ, ಪ್ರತಿಭಾ ಸಿಂಗ್ ಮತ್ತು ಮನೀಶ್ ಚತ್ರತ್ ಸಹ ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತರಿದ್ದರು.
ಪಕ್ಷದ ದೆಹಲಿಯ ಹಲವಾರು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ಸತ್ಯಾಗ್ರಹಕ್ಕೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದರೂ ಹೆಚ್ಚಿನ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಸ್ಥಳದ ಹೊರಗೆ ಜಮಾಯಿಸಿದರು.
ಸೆಕ್ಷನ್ 144 ಜಾರಿ
ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರ ಕಾರಣಗಳಿಂದಾಗಿ ಸತ್ಯಾಗ್ರಹ ನಡೆಸುವ ಮನವಿಯನ್ನು ತಿರಸ್ಕರಿಸಲಾಗಿದೆ ಮತ್ತು ರಾಜ್‌ಘಾಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ದೆಹಲಿ ಪೊಲೀಸರು ಪತ್ರದಲ್ಲಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ