ಹಿರೇಬಾಗೇವಾಡಿ ಟೋಲ್ ಗೇಟಿನಲ್ಲಿ ದಾಖಲೆರಹಿತ 2 ಕೋಟಿ ರೂ. ನಗದು ವಶ

ಬೆಳಗಾವಿ : ಸೂಕ್ತ ದಾಖಲೆಗಳಿಲ್ಲದೆ ಖಾಸಗಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ಎರಡು ಕೋಟಿ ರೂಪಾಯಿ ನಗದು ಹಣವನ್ನು ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಅನ್ನು ನಸುಕಿನಜಾವ 3:30 ರ ವೇಳೆಗೆ ಚುನಾವಣಾ ಕಾರ್ಯನಿರತ ಎಫ್‌ಎಸ್‌ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ತಪಾಸಣೆ ನಡೆಸಿದಾಗ ಅಕ್ರಮ ಹಣ ಪತ್ತೆಯಾಗಿರುತ್ತದೆ.
ಕೆ.ಪಿ.ಆ್ಯಕ್ಟ್ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡ ನಂತರ ಈ ಬಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ‌ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಭೇಟಿ ನೀಡಿ ಪ್ರಕರಣವನ್ನು ಪರಿಶೀಲಿಸಿದರು. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿರುತ್ತದೆ.
ಡಿಸಿಪಿ ಸ್ನೇಹಾ, ಗ್ರಾಮೀಣ ಎಸಿಪಿ ಗೋಪಾಲಕೃಷ್ಣ ಗೌಡರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಚುನಾವಣಾಧಿಕಾರಿ ರಾಜಶೇಖರ್ ಡಂಬಳ, ಸಿಪಿಐ ಅಮರೇಶ್, ಎಫ್.ಎಸ್.ಟಿ. ತಂಡದ ಶಂಭುಲಿಂಗಪ್ಪ, ರಾಜೇಂದ್ರ ಮೊರಬದ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಂದಗಡದಲ್ಲಿ 40 ಲಕ್ಷ ರೂ. ಚಿನ್ನಾಭರಣ ವಶ…
ಮತ್ತೊಂದು ಪ್ರಕರಣದಲ್ಲಿ ಖಾನಾಪುರ ತಾಲೂಕು ನಂದಗಡ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಳಿಯಾಳದಿಂದ ಕಕ್ಕೇರಿಗೆ ಕಾರಿನಲ್ಲಿ ಚಿನ್ನಾಭರಣ ಮತ್ತು ಬೆಳ್ಳಿ ಆಭರಣ ಸಾಗಿಸಲಾಗುತ್ತಿತ್ತು. 21.25 ಲಕ್ಷರೂ. ಮೌಲ್ಯದ 395ಗ್ರಾಂ ಚಿನ್ನಾಭರಣ, 19 ಲಕ್ಷ ರೂಪಾಯಿ ಮೌಲ್ಯದ 28 ಕೆಜಿ ಬೆಳ್ಳಿ ಆಭರಣ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement