ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಮಂಗಳವಾರ ರಾತ್ರಿ 189 ಅಭ್ಯರ್ಥಿಗಳನ್ನು ತನ್ನ ಮೊದಲ ಪಟ್ಟಿಯಲ್ಲಿ ಪ್ರಕಟಿಸಿದೆ. ಮೇ 10 ರಂದು 224 ಸ್ಥಾನಗಳ ವಿಧಾನಸಭೆಗೆ ಚುನಾವಣೆಗೆ ಎರಡನೇ ಪಟ್ಟಿಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ತಮ್ಮ ತಂದೆಯ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಎದುರು ವರುಣಾದಿಂದ ಸಚಿವ ಸೋಮಣ್ಣ ಕಣಕ್ಕಿಳಿಯಲಿದ್ದಾರೆ. ಕೆಲವು ದಿನಗಳಿಂದ ಈ ಕ್ಷೇತ್ರದಿಂದ ಸೋಮಣ್ಣ ಅವರ ಹೆಸರು ಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಸೋಮಣ್ಣ ಅವರು ಚಾಮರಾಜ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಮತ್ತೊಂದು ಅಚ್ಚರಿಯ ಸ್ಪರ್ಧೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ವಿರುದ್ಧ ಕನಕಪುರದಲ್ಲಿ ಆರ್ ಅಶೋಕ್ ಸ್ಪರ್ಧಿಸಲಿದ್ದಾರೆ; ಅಶೋಕ್ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬೆಂಗಲೂರಿನ ಪದ್ಮನಾಭ ನಗರದ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಲಿದ್ದಾರೆ. ರಾಜ್ಯ ಸಚಿವ ಬಿ ಶ್ರೀರಾಮುಲು ಅವರು ಮೊಣಕಾಲ್ಮೂರು ತೊರೆದು ಈ ಬಾರಿ ತಮ್ಮ ಮೊದಲಿನ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕುಂದಾಪುರದಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಕುಂದಾಪುರ ವಾಜಪೇಯಿ ಎಂದೇ ಖ್ಯಾತಿ ಪಡೆದ ಹಾಲಾಡಿ ಜಯರಾಮ ಶೆಟ್ಟಿ ಅವರು ಸೂಚಿಸಿದ ಕಿರಣಕುಮಾರ್ ಕೊಡ್ಗಿ ಅವರಿಗೆ ಟಿಕೆಟ್ ನೀಡಲಾಗಿದೆ.
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಲಿದ್ದಾರೆ.
ಬೆಂಗಳೂರು ಮಾಜಿ ಆಯುಕ್ತ ಭಾಸ್ಕರ್ ರಾವ್ ಚಾಮರಾಜಪೇಟೆಯಿಂದ ಸ್ಪರ್ಧಿಸಲಿದ್ದು, ಅವರು ಕಾಂಗ್ರೆಸ್‌ನ ಜಮೀರ್ ಅಹಮ್ಮದ್ ಅವರಿಗೆ ಎದುರಾಳಿಯಾಗಲಿದ್ದಾರೆ.
ಬಿಜೆಪಿಯ ಪ್ರಮುಖ ನಾಯಕರಾದ ರಮೇಶ್ ಜಾರಕಿಹೊಳಿ ಮತ್ತು ಗೋವಿಂದ ಎಂ ಕಾರಜೋಳ ಕ್ರಮವಾಗಿ ಗೋಕಾಕ ಮತ್ತು ಮುಧೋಳದಿಂದ ಸ್ಪರ್ಧಿಸಲಿದ್ದಾರೆ.
ಇಂದು ಘೋಷಣೆಯಾದ 189 ಹೆಸರುಗಳಲ್ಲಿ 52 ಹೊಸ ಅಭ್ಯರ್ಥಿಗಳಿದ್ದಾರೆ. 32 ಅಭ್ಯರ್ಥಿಗಳು ಇತರೆ ಹಿಂದುಳಿದ ವರ್ಗಗಳು (OBC); 30 ಮಂದಿ ಪರಿಶಿಷ್ಟ ಜಾತಿಗಳು (ಎಸ್‌ಸಿ). ಒಂಬತ್ತು ಅಭ್ಯರ್ಥಿಗಳು ವೈದ್ಯರು, ಐವರು ವಕೀಲರು ಮತ್ತು ಇಬ್ಬರು ನಿವೃತ್ತ ಅಧಿಕಾರಿಗಳು. ಮೊದಲ ಪಟ್ಟಿಯಲ್ಲಿ ಎಂಟು ಮಹಿಳೆಯರಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ