ಟಿಕೆಟ್​ ಗೊಂದಲ: ಹೈಕಮಾಂಡ್​ ಬುಲಾವ್ ನಂತರ ದೆಹಲಿಗೆ ಹೊರಟ ಜಗದೀಶ ಶೆಟ್ಟರ

ಹುಬ್ಬಳ್ಳಿ: ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ, ತಮ್ಮ ಹೆಸರು ಇಲ್ಲದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ಅವರನ್ನು ಹೈಕಮಾಂಡ್​ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.
ದೆಹಲಿಗೆ ಹೋಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ದೆಹಲಿಗೆ ಬರುವಂತೆ ಕರೆದಿದ್ದರ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿದ್ದೇನೆ. ರಾಷ್ಟ್ರೀಯ ನಾಯಕರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ಗೌರವಯುತವಾಗಿ ನಿವೃತ್ತಿಯಾಗಬೇಕು. ಈ ರೀತಿ ನಿವೃತ್ತಿಯಾಗಬಾರದು. ಬಿಜೆಪಿ ಟಿಕೆಟ್ ಸಿಕ್ಕವರಲ್ಲಿ 75-76 ವರ್ಷದವರು ಇದ್ದಾರೆ. ಅವರನ್ನೂ ಸೀನಿಯರ್ಸ್ ಎನ್ನುವುದಿಲ್ಲವೇ ಎಂದು ಪ್ರಶ್ನಿಸಿದ ಶೆಟ್ಟರ್, ನಿನ್ನೆ ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ. ಟಿಕೆಟ್ ವಿಚಾರವಾಗಿ ನನಗೆ ವರಿಷ್ಠರು ಇಂದು ಸ್ಪಷ್ಟತೆಯನ್ನು ತಿಳಿಸಲಿದ್ದಾರೆ. ರಾಷ್ಟ್ರೀಯ ನಾಯಕರ ಭಾವನೆ‌ ಮೇಲೆ ನನ್ನ ಮುಂದಿನ ನಿರ್ಧಾರ ಎಂದು ಹೇಳಿದ್ದಾರೆ.

ಮಂತ್ರಿ ಸ್ಥಾನ ಸಿಗದಿದ್ದರೂ 2 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕೆಲಸ ಮಾಡುವುದಕ್ಕೆ ಮಂತ್ರಿ ಸ್ಥಾನವೇ ಬೇಕೆಂದಿಲ್ಲ. ನನಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಕೆಲಸ ಮಾಡಿದ್ದೇನೆ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಬಂದ ಮೇಲೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ. ವರಿಷ್ಠರಿಂದ ನನಗೆ ಸಕಾರಾತ್ಮಕ‌ ಸ್ಪಂದನೆ ಸಿಗುವ ಭರವಸೆ ಇದೆ ಎಂದು ಹೇಳಿದರು.
ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹುಬ್ಬಳ್ಳಿ ಸೆಂಟ್ರಲ್​ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಮೊದಲು ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇತರರಿಗೆ ದಾರಿ ಮಾಡಿಕೊಡಬೇಕು ಎಂದು ಹೈಕಮಾಂಡ್‌ ಹೇಳಿದ್ದಕ್ಕೆ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement