ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ ಶೆಟ್ಟರ

ಬೆಂಗಳೂರು: ಬಿಜೆಪಿಯ ಮಾಜಿ ನಾಯಕ ಜಗದೀಶ ಶೆಟ್ಟರ ಅವರು ಸೋಮವಾರ (ಏಪ್ರಿಲ್‌ 17) ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಆಗಮಿಸಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶೆಟ್ಟರ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.
ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಪಕ್ಷದ‌‌ ಸಿದ್ದಾಂತ ಶೆಟ್ಟರಗೆ ಗೊತ್ತಿದೆ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿದ, ತಮ್ಮ ಸ್ವಾಭಿಮಾನ ಕಾಪಾಡಲು ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಅವರು ಗೆಲ್ಲುವ ಜೊತೆಗೆ, ಶೆಟ್ಟರ್ ಪಕ್ಷಕ್ಕೆ ಬರುವುದರಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಶಕ್ತಿ ಸಿಗಲಿದೆ ಎಂದು ಹೇಳಿದರು.

ರಾಹುಲ್ ಗಾಂಧಿಯವರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವಂತೆ ಸೂಚಿಸಿದ್ದಾರೆ. ಈಗ ಶೆಟ್ಟರ್ ಸೇರ್ಪಡೆಯಿಂದ ರಾಹುಲ್ ಗಾಂಧಿಯವರ ಆಕಾಂಕ್ಷೆ ಈಡೇರಲಿದೆ ಎಂಬುದು ನಮಗೆ ಖಾತ್ರಿಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಜಗದೀಶ್ ಶೆಟ್ಟರ್ ಅವರೊಂದಿಗೆ ಹಲವಾರು ದಶಕಗಳ ಕಾಲ ನಾವು ರಾಜ್ಯ ರಾಜಕೀಯದಲ್ಲಿದ್ದೆವು. ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ವೈಯಕ್ತಿಕವಾಗಿ ನಾವು ಯಾವತ್ತೂ ಜಗಳವಾಡಿಲ್ಲ. ಅವರ ಪಕ್ಷ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲಬಂದಿದೆ’ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್‌ ನೀಡದ್ದಕ್ಕೆ ಮುನಿಸಿಕೊಂಡಿದ್ದ ಶೆಟ್ಟರ್‌ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಬಿಜೆಪಿ ಹಿರಿಯ ನಾಯಕರು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಹಠ ಬಿಡಲಿಲ್ಲ. ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಬೆಂಗಳೂರಿಗೆ ಆಗಮಿಸಿದ್ದ ಶೆಟ್ಟರ್‌ ಅವರು ಕಾಂಗ್ರೆಸ್‌ ನಾಯಕರನ್ನು ತಡರಾತ್ರಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದರು. ಇಂದು ಸೋಮವಾರ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ

ನನಗೆ ಅಪಮಾನ ಆಗಿದ್ದರಿಂದ ಬಿಜೆಪಿ ಬಿಡಬೇಕಾಯ್ತು: ಶೆಟ್ಟರ್
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ಬಹಳ ಜನರಿಗೆ ಆಶ್ಚರ್ಯ ಆಗಿದೆ ನನಗೆ ಹಲವಾರು ಒತ್ತಡಗಳು ಬಂದವು. ಆದರೆ ನನಗೆ ಆದ ವೇದನೆ ಬಗ್ಗೆ ಯಾರೂ ಅರ್ಥ ಮಾಡಿಕೊಂಡಿಲ್ಲ ಹಾಗೂ ಮಾತನಾಡುತ್ತಿಲ್ಲ.. ಪಕ್ಷ ಕಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಹಿಸಿದ್ದೇನೆ. ಆದರೆ, ಇದನ್ನು ಯಾರೂ ಪರಿಗಣಿಸಲಿಲ್ಲ ಎಂದು ಹೇಳಿದರು. ಬಿಜೆಪಿ ಸ್ಥಾನಮಾನ ಗೌರವ ಕೊಟ್ಟಿದೆ. ಆರು ಬಾರಿ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಗೆದ್ದಿದ್ದೇನೆ. ಇದು ಏಳನೇ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಮಾಡಿದ್ದೇನೆ. ಆದರೆ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಆದರೆ ಟಿಕೆಟ್ ಇಲ್ಲ ಅಂದಾಗ ಆಘಾತವಾಯಿತು. ಈ ಮೊದಲೇ ನನ್ನನ್ನು ಕರೆಯಿಸಿ ಮಾತನಾಡಿ, ನಿಮ್ಮ ಸೇವೆಯನ್ನು ಬೇರೆ ಕಡೆ ಉಪಯೋಗ ಮಾಡ್ತೇವೆ ಎಂದು ಹೇಳಬೇಕಾಗಿತ್ತು. ನಾನು ಅಧಿಕಾರದ ಲಾಲಸೆಯಿಂದ ರಾಜಕಾರಣ ಕ್ಕೆ ಬಂದಿಲ್ಲ. ನಮ್ಮ ಕುಟುಂಬ ಜನಸಂಘ ಹಿನ್ನೆಲೆಯಲ್ಲಿ ಬಂದ ಕುಟುಂಬ. ನಾನು ಸಂಘ ಪರಿವಾರದಿಂದ ಬಂದ ವ್ಯಕ್ತಿ. ಹೀಗಿದ್ದರೂ ನನ್ನನ್ನು ಕಡೆಗಣಿಸಲಾಯಿತು, ಕಳೆದ ಆರು ತಿಂಗಳಿಂದ ನನ್ನನ್ನು ನಿರ್ಲಕ್ಷಿಸಲಾಗಿತ್ತು ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement