ಆಘಾತಕಾರಿ ಘಟನೆ ..: ಮದುವೆ ಮಂಟಪದಲ್ಲಿ ವಧು-ವರರ ಮೇಲೆ ಎಸಿಡ್‌ ಎರಚಿದ ದುಷ್ಕರ್ಮಿಗಳು, 12 ಜನರಿಗೆ ಗಂಭೀರ ಗಾಯ

ಜಗದಲ್‌ಪುರ: ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಬುಧವಾರ ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ವಧು-ವರರ ಮೇಲೆ ಯಾರೋ ಎಸಿಡ್ ಎರಚಿದ್ದಾರೆ. ಘಟನೆಯಲ್ಲಿ ವಧು-ವರರು, ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳು ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಎಲ್ಲ ಗಾಯಾಳುಗಳನ್ನು ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸಿಡ್ ಎರಚಿದವರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಭಾನಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಾಹಿತಿ ಪ್ರಕಾರ, ಬಸ್ತಾರ್ ಬ್ಲಾಕ್‌ನ ಛೋಟೆ ಅಮಾಬಲ್ ಗ್ರಾಮದಲ್ಲಿ ಸುಧಾಪಾಲ್ ನಿವಾಸಿ ದಮ್ರು ಬಾಘೇಲ್ (23) ಮತ್ತು ಸುನೀತಾ ಕಶ್ಯಪ್ (19) ಅವರ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಆಗ ಹಠಾತ್ತನೆ ದೀಪಗಳು ಆರಿದವು. ಆ ಸಮಯದಲ್ಲಿ ವಧು-ವರರ ಮೇಲೆ ಯಾರೋ ಎಸಿಡ್ ಎರಚಿದ್ದಾರೆ. ಅವರ ಬಳಿ ನಿಂತಿದ್ದ ಇತರರಿಗೆ ಎಸಿಡ್‌ ತಗುಲಿ ಗಾಯಗಳಾಗಿವೆ. ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು. ಮತ್ತೆ ವಿದ್ಯುತ್‌ ಬೆಳಕು ಬಂದಾಗ ಘಟನೆ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ.

ಪ್ರಮುಖ ಸುದ್ದಿ :-   1200 ಟ್ರ್ಯಾಕ್ಟರ್‌ಗಳೊಂದಿಗೆ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆ ಪುನರಾರಂಭಿಸಲು 14000 ರೈತರು ಸಜ್ಜು : ದೆಹಲಿಯಲ್ಲಿ ಹೈ ಅಲರ್ಟ್

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಂದ ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಉದ್ದೇಶಪೂರ್ವಕವಾಗಿ ವಿದ್ಯುತ್‌ ಬೆಳಕು ತೆಗೆದು ಎಸಿಡ್‌ ಎರಚಲಾಗಿದೆಯೇ ಎಂಬುದು ತನಿಖೆಯಲ್ಲಿ ಗೊತ್ತಾಗಬೇಕಿದೆ.
ಎಸಿಡ್ ದಾಳಿ ಘಟನೆಯಲ್ಲಿ ವರ ದಮ್ರು ಬಾಘೇಲ್ (23), ವಧು, ಸುನೀತಾ ಕಶ್ಯಪ್ (19), ಸಂಪತ್ ಬಾಘೇಲ್ (32), ಆರು ವರ್ಷದ ತೇಮೇಶ್ವರ್ ಮೌರ್ಯ, ತುಲಾ ಕಶ್ಯಪ್ (19), ಜಮಾನಿ ಕಶ್ಯಪ್ (೪), ಗುಂಜಿ ಠಾಕೂರ್ (25) ಕರಿ ಬಾಯಿ ಕಶ್ಯಪ್ (29), ಗುನ್ಮಣಿ ಕಶ್ಯಪ್ (29), ಮಾಲತಿ ಕಶ್ಯಪ್ (38), ಮಿಟ್ಕಿ ಕಶ್ಯಪ್ (38), ಗೋಯಂಡ ಕಶ್ಯಪ್ (38) ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಪಾಲ್ ತಿಳಿಸಿದ್ದಾರೆ. ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎಸಿಡ್ ದಾಳಿಕೋರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ದೀಪ ಆರಿ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement