ಭಾರತದ ಶೇ.90 ರಷ್ಟು ಪ್ರದೇಶ ಬಿಸಿಗಾಳಿ ‘ಅಪಾಯಕಾರಿ ವಲಯ’ದಲ್ಲಿದೆ : ಅಧ್ಯಯನ

ನವದೆಹಲಿ : ಭಾರತದ ಒಟ್ಟು ಪ್ರದೇಶದ ಶೇಕಡಾ 90 ಕ್ಕಿಂತ ಹೆಚ್ಚು ಪ್ರದೇಶವು “ಅತ್ಯಂತ ಎಚ್ಚರಿಕೆಯ” ಅಥವಾ “ಅಪಾಯ ವಲಯ” ದಲ್ಲಿದೆ, ಇದು ಹವಾಮಾನ ಬದಲಾವಣೆಯಿಂದಾಗಿ ಪದೇಪದೇ ಆಗುತ್ತಿರುವ ಶಾಖದ ಅಲೆಗಳಿಂದಾಗಿ ತೊಂದರೆಗೊಳಗಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ರಮಿತ್ ದೇಬನಾಥ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಹೋದ್ಯೋಗಿಗಳು ನಡೆಸಿದ ಅಧ್ಯಯನದ ಪ್ರಕಾರ, ದೆಹಲಿಯು ವಿಶೇಷವಾಗಿ ತೀವ್ರವಾದ ಶಾಖದ ಪ್ರಭಾವಗಳಿಗೆ ಗುರಿಯಾಗುತ್ತಿದೆ.
ವರದಿಯ ಪ್ರಕಾರ, ತೀವ್ರವಾದ ಶಾಖವು ಅಂತಿಮವಾಗಿ ವ್ಯಕ್ತಿಯ “ಹೊರಾಂಗಣ ಕಾರ್ಯ ಸಾಮರ್ಥ್ಯ”ದಲ್ಲಿ 15 ಪ್ರತಿಶತದಷ್ಟು ಕುಸಿತಕ್ಕೆ ಕಾರಣವಾಗಬಹುದು, ಇದು 48 ಕೋಟಿ ಜನರ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು 2050 ರ ವೇಳೆಗೆ ಜಿಡಿಪಿ (GDP) ಯ 2.8 ಪ್ರತಿಶತದಷ್ಟಕ್ಕೆ ಬಾಧಿಸುತ್ತದೆ.
ಇದಲ್ಲದೆ, ಶಾಖದ ಅಲೆಗಳು 1992 ರಿಂದ 24,000 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿವೆ ಮತ್ತು ವಾಯು ಮಾಲಿನ್ಯವನ್ನು ಹೆಚ್ಚಿಸಿವೆ. ಉತ್ತರ ಭಾರತದಲ್ಲಿ ಹಿಮದ ಕರಗುವಿಕೆಯನ್ನು ವೇಗಗೊಳಿಸಿದೆ. ಇತ್ತೀಚೆಗೆ, ಮಹಾರಾಷ್ಟ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹದಿನಾಲ್ಕು ಜನರು ಸೂರ್ಯನ ಬಿಸಲಿನ ಪ್ರಖರಕ್ಕೆ ಮೃತಪಟ್ಟಿದರು, ಇದು ದೇಶದ ಇತಿಹಾಸದಲ್ಲಿ ಶಾಖದ ಅಲೆ-ಸಂಬಂಧಿತ ಘಟನೆಯಿಂದ ಅತಿ ಹೆಚ್ಚು ಸಾವಿನ ಸಂಖ್ಯೆಯಲ್ಲಿ ಒಂದಾಗಿದೆ.
ಭಾರತವು ಈಗ ಬಹು, ಸಂಚಿತ ಹವಾಮಾನ ಅಪಾಯಗಳನ್ನು ಎದುರಿಸುತ್ತಿದೆ ಮತ್ತು ಕಳೆದ ವರ್ಷ ಜನವರಿಯಿಂದ ಅಕ್ಟೋಬರ್ ವರೆಗೆ ಪ್ರತಿ ದಿನವೂ ವಿಪರೀತ ಹವಾಮಾನ ಬದಲಾವಣೆಯನ್ನು ಗಮನಿಸಲಾಗಿದೆ ಎಂದು ವರದಿ ಹೇಳಿದೆ.
ಸಂಶೋಧಕರು ಅದರ ಹವಾಮಾನ ದುರ್ಬಲತೆ ಸೂಚ್ಯಂಕದೊಂದಿಗೆ ದೇಶದ ಶಾಖ ಸೂಚ್ಯಂಕದ ವಿಶ್ಲೇಷಣಾತ್ಮಕ ಮೌಲ್ಯಮಾಪನ ನಡೆಸಿದ್ದು,
ಶಾಖ ಸೂಚ್ಯಂಕ(HI)ವು ತಾಪಮಾನ ಮತ್ತು ತೇವಾಂಶ ಎರಡನ್ನೂ ಗಣನೆಗೆ ತೆಗೆದುಕೊಂಡು ಮಾನವ ದೇಹಕ್ಕೆ ಇದು ಎಷ್ಟು ಬಿಸಿಯಾಗಿರುತ್ತದೆ ಎಂಬುದರ ಅಳತೆಯಾಗಿದೆ. ಹವಾಮಾನ ದುರ್ಬಲತೆ ಸೂಚ್ಯಂಕ (CVI) ಎಂಬುದು ಒಂದು ಸಂಯೋಜಿತ ಸೂಚ್ಯಂಕವಾಗಿದ್ದು, ಇದು ಶಾಖದ ಅಲೆಗಳ ಪ್ರಭಾವವನ್ನು ಅಧ್ಯಯನ ಮಾಡಲು ಸಾಮಾಜಿಕ-ಆರ್ಥಿಕ, ಜೀವನೋಪಾಯ ಮತ್ತು ಜೈವಿಕ ಭೌತಿಕ ಅಂಶಗಳನ್ನು ಲೆಕ್ಕಹಾಕಲು ವಿವಿಧ ಸೂಚಕ (ಇಂಡಿಕೇಟರ್ಸ್‌)ಗಳನ್ನು ಬಳಸುತ್ತದೆ.
ಅಧ್ಯಯನದ ಪ್ರಕಾರ, ದೆಹಲಿಯಲ್ಲಿ ಶಾಖ-ಸಂಬಂಧಿತ ದುರ್ಬಲತೆಗಳನ್ನು ಉಲ್ಬಣಗೊಳಿಸುವ ಅಂಶಗಳೆಂದರೆ ಕೊಳೆಗೇರಿ ಜನಸಂಖ್ಯೆಯ ಹೆಚ್ಚಿನ ಸಾಂದ್ರತೆ ಮತ್ತು ಹೆಚ್ಚಿನ ಶಾಖ ಸೂಚ್ಯಂಕ (HI) ಪ್ರದೇಶಗಳಲ್ಲಿ ಜನದಟ್ಟಣೆ, ವಿದ್ಯುತ್, ನೀರು ಮತ್ತು ನೈರ್ಮಲ್ಯದಂತಹ ಮೂಲಭೂತ ಸೌಕರ್ಯಗಳ ಕೊರತೆ, ವಿಮೆ, ವಸತಿ ಮತ್ತು ಕೊಳಕು ಅಡುಗೆ ಇಂಧನದ ಕಳಪೆ ಸ್ಥಿತಿ (ಜೀವರಾಶಿ, ಸೀಮೆಎಣ್ಣೆ ಮತ್ತು ಕಲ್ಲಿದ್ದಲು) ಹಾಗೂ ತಕ್ಷಣದ ಆರೋಗ್ಯ ಸೌಲಭ್ಯ ಲಭ್ಯತೆಯ ಕೊರತೆ.
ಭಾರತವು ಶಾಖದ ಅಲೆಗಳ ಪರಿಣಾಮವನ್ನು ತಕ್ಷಣವೇ ಪರಿಹರಿಸಲು ವಿಫಲವಾದರೆ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವತ್ತ ದೇಶದ ಪ್ರಗತಿಯನ್ನು ಇದು ನಿಧಾನಗೊಳಿಸಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಗರಿಷ್ಠ ತಾಪಮಾನವು ಬಯಲು ಪ್ರದೇಶದಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್, ಕರಾವಳಿ ಪ್ರದೇಶಗಳಲ್ಲಿ ಕನಿಷ್ಠ 37 ಡಿಗ್ರಿ ಸೆಲ್ಸಿಯಸ್ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ದಾಟಿದಾಗ ಅದು ಶಾಖದ ಅಲೆಗೆ ಕಾರಣವಾಗುತ್ತದೆ.
1901ರಲ್ಲಿ ದಾಖಲೆ ಇಟ್ಟುಕೊಳ್ಳಲು ಪ್ರಾರಂಭವಾದಾಗಿನಿಂದ 2023 ರ ಫೆಬ್ರವರಿಯಲ್ಲಿ ಭಾರತವು ಆ ತಿಂಗಳಿನಲ್ಲಿ ಈ ಶತಮಾನದ ಅತ್ಯಂತ ಬಿಸಿ ತಾಪಮಾವನ್ನು ದಾಖಲಿಸಿತು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement