ಕುಮಟಾ: ದಿಢೀರ್‌ ರಾಜಕೀಯ ನಿವೃತ್ತಿ ಘೋಷಿಸಿದ ಕಾಂಗ್ರೆಸ್‌ ಮಾಜಿ ಶಾಸಕಿ ಶಾರದಾ ಶೆಟ್ಟಿ..!

ಕುಮಟಾ : ಅತ್ಯಂತ ಮೃದು ಸ್ವಭಾವದ ಕಾಂಗ್ರೆಸ್‌ ನಾಯಕಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಟಿಕೆಟ್ ಕೈ ತಪ್ಪಿದ್ದಕ್ಕೆ ನೊಂದು ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಸ್ಥಳೀಯರಿಗೆ ನೀಡದೆ, ಕೇಂದ್ರದ ಮಾಜಿ ಸಚಿವೆ ಹಾಗೂ ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾರ್ಗರೆಟ್ ಆಳ್ವ ಅವರ ಪುತ್ರ ನಿವೇದಿತಾ ಆಳ್ವ ಅವರಿಗೆ ನೀಡಲಾಗಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ ಅವರು ಸ್ಥಳೀಯರಿಗೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡಿದ್ದರು. ಹಾಗೂ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಸೋಮವಾರ ನಾಮಪತ್ರ ಹಿಂಪಡೆದ ಶಾರದಾ ಶೆಟ್ಟಿ ಅವರು ನಂತರ ದಿಢೀರ್‌ ಆಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ನನಗೆ ಹಾಗೂ ಕ್ಷೇತ್ರದ ಪಕ್ಷದ ಕಾರ್ಯಕರ್ತರಿಗೆ ಮೋಸ ಮಾಡಿದೆ, ಹೀಗಾಗಿ ಪಕ್ಷದ ಮೇಲೆ ಗೌರವ ಹೋಗಿದೆ ಹಾಗೂ ನಿಷ್ಠೆ ಇಲ್ಲವಾಗಿದೆ. ಪಕ್ಷದ ನಿರ್ಧಾರದಿಂದ ನೋವಾಗಿದ್ದು, ಹೀಗಾಗಿ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಶಾರದಾ ಶೆಟ್ಟಿ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಾನು ಟಿಕೆಟ್‌ ಆಕಾಂಕ್ಷಿಯಾಗಿದ್ದೆ ಹಾಗೂ ಕೊನೆ ಕ್ಷಣದವರೆಗೂ ಪಕ್ಷವು ಟಿಕೆಟ್ ನೀಡುವ ಭರವಸೆ ಇತ್ತು. ಆದರೆ ಪಕ್ಷ ಟಿಕೆಟ್‌ ನೀಡದೆ ನಿರಾಸೆಗಳಿಸಿದೆ. ಅಲ್ಲದೆ ಕ್ಷೇತ್ರದವರಿಗೆ ಟಿಕೆಟ್‌ ನೀಡದೆ ಹೊರಗಿನವರಿಗೆ ಟಿಕೆಟ್‌ ನೀಡಿದ್ದು ಬೇಸರ ತರಿಸಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಸೋನಿಯಾ ಗಾಂಧಿಗೆ ಸಿದ್ದರಾಮಯ್ಯರನ್ನು ಪರಿಚಯಿಸಿದ್ದೇ ನಾನು, ಲಾಟರಿ ಹೊಡೆದ್ರು ಸಿಎಂ ಆದ್ರು ; ಬಿ.ಆರ್. ಪಾಟೀಲ ಫೋನ್ ಕರೆ ಲೀಕ್‌

ನನಗೆ ಟಿಕೆಟ್ ತಪ್ಪಿಸಿದವರು ಹಾಗೂ ಈಗ ಟಿಕೆಟ್ ಪಡೆದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ, ಶಾರದಾ ಶೆಟ್ಟಿ ಅವರು, ನನಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಕರೆ ಮಾಡಿ ವಿಧಾನ ಪರಿಷತ್‌ ಸ್ಥಾನ ಅಥವಾ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿ ನನಗೆ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ ನನಗೆ ಯಾವುದೇ ಅನುಕಂಪವೂ ಬೇಡ ಹಾಗೂ ಅವರು ನೀಡುವ ಹುದ್ದೆಯೂ ಬೇಡ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಶಾರದಾ ಶೆಟ್ಟಿಯವರಿಗೆ ಸೂಟ್‌ಕೇಸ್ ಬಂದಿದೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಮೋಹನ ಶೆಟ್ಟಿಯವರ ಮನೆಯವರದ್ದು ನೀಡುವ ಕೈ..ನಮ್ಮ ಯಜಮಾನರು ನಮಗೆ ಸಾಕಷ್ಟು ಮಾಡಿ ಹೋಗಿದ್ದಾರೆ. ಹಾಗೂ ನಮಗೆ ನಿರ್ದಿಷ್ಟ ಉದ್ಯೋಗವಿದೆ. ಹೀಗಾಗಿ ರಾಜಕೀಯಕ್ಕೆ ಬಂದು ಹಣ ಮಾಡಬೇಕಾದ ಅವಶ್ಯಕತೆ ನಮಗಿಲ್ಲ, ನಾವು ಅಂಥ ರಾಜಕಾರಣ ಮಾಡುವವರೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಕಾರ್ಯಕರ್ತರಿಂದ ಒತ್ತಡ ಬಂದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ನಮ್ಮ ಜೊತೆಗಿದ್ದ ಬಹಳಷ್ಟು ಕಾರ್ಯಕರ್ತರು ಆಮಿಷಕ್ಕೋ ಅಥವಾ ಪಕ್ಷವೆಂಬ ಕಾರಣಕ್ಕೋ ಏನೋ ಗೊತಿಲ್ಲ, ಆ ಕಡೆಗೆ ಹೋಗಿದ್ದಾರೆ. ಅದಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿದ್ದರಿಂದ ಚಿಹ್ನೆ ಬದಲಾಗುತ್ತದೆ. ಅದು ಬಂದು ಪ್ರಚಾರ ಪ್ರಾರಂಭ ಮಾಡಿ ಎಲ್ಲೆಡೆ ತಲುಪಲು ಕೇವಲ 14 ದಿನಗಳು ಮಾತ್ರ ಉಳಿದಿದೆ. ಹೀಗಅಗಿ ನಾಮಪತ್ರ ವಾಪಸ್ ಪಡೆದಿರುವುದಾಗಿ ಹೇಳಿದರು.

ಪ್ರಮುಖ ಸುದ್ದಿ :-   ಐಪಿಎಸ್ ಅಧಿಕಾರಿ ಅಮಾನತು ರದ್ದು: ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರದಿಂದ ಹೈಕೋರ್ಟ್‌ನಲ್ಲಿ ಮೇಲ್ಮನವಿ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement