ಉತ್ತರ ಪ್ರದೇಶದ 12 ನೇ ತರಗತಿ ಸಂಸ್ಕೃತ ಬೋರ್ಡ್ ಪರೀಕ್ಷೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮುಸ್ಲಿಂ ಹುಡುಗ…!

ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ ಮಂಡಳಿಯ ಉತ್ತರ ಮಾಧ್ಯಮ-II (12ನೇ ತರಗತಿ) ಪರೀಕ್ಷೆಯಲ್ಲಿ 17 ವರ್ಷದ ಮುಸ್ಲಿಂ ಹುಡುಗ ಇರ್ಫಾನ್ ಪ್ರಥಮ ಸ್ಥಾನ ಪಡೆದಿದ್ದಾನೆ. ಇರ್ಫಾನ್‌ ಶೇ.82.71 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ. ಅಂಕ ವಿದ್ಯಾರ್ಥಿನಿ ಗಂಗೋತ್ರಿ ದೇವಿ ಶೇ.80.57 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಸಂಸ್ಕೃತ ಶಿಕ್ಷಕನಾಗಲು ಬಯಸುವ ಇರ್ಫಾನ್ 10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಟಾಪ್ 20 ವಿದ್ಯಾರ್ಥಿಗಳ ಪೈಕಿ ಏಕೈಕ ಮುಸ್ಲಿಂ ವಿದ್ಯಾರ್ಥಿ. ಈತ ಉತ್ತರ ಪ್ರದೇಶದಲ್ಲಿ 12 ನೇ ತರಗತಿ ಸಂಸ್ಕೃತ ಪರೀಕ್ಷೆಗೆ ಕುಳಿತಿದ್ದ 13,738 ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. 10 ನೇ ತರಗತಿ ಪರೀಕ್ಷೆಗಳಲ್ಲಿ (ಪೂರ್ವ ಮಾಧ್ಯಮ-II), ಬಲ್ಲಿಯಾ ಜಿಲ್ಲೆಯ ಆದಿತ್ಯ ಶೇಕಡಾ 92.50 ರೊಂದಿಗೆ ಮೊದಲ ಸ್ಥಾನ ಪಡೆದಿದ್ದಾನೆ.
ಇರ್ಫಾನ್ ಸಂಸ್ಕೃತವನ್ನು ಅಧ್ಯಯನ ಮಾಡಲು ಆಯ್ಕೆ ಮಾಡಿದ ನಂತರ ಯಾವುದೇ ಸಮಸ್ಯೆಗಳಿವೆಯೇ ಎಂದು ಕೇಳಿದಾಗ, ಆತನ ತಂದೆ ಸಲಾವುದ್ದೀನ್ (51) “ಇಲ್ಲ, ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ, ಆತ ಬೇರೆ ಬೇರೆ ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಂಡಿದ್ದರಿಂದ ನನಗೆ ಸಂತೋಷವಾಯಿತು ಮತ್ತು ನಾನು ಅವನನ್ನು ಪ್ರೋತ್ಸಾಹಿಸಿದೆ. ನಾವು ಮುಸ್ಲಿಮರಾಗಿರುವುದರಿಂದ ಸಂಸ್ಕೃತ ನಮಗೆ ವಿಭಿನ್ನ ಆಯ್ಕೆಯಾಗಿತ್ತು, ಆದರೆ ಆತ ಅದರಲ್ಲಿ ಉತ್ಸುಕನಾಗಿದ್ದ. ಆದ್ದರಿಂದ ನಾನು ಅವನನ್ನು ತಡೆಯಲಿಲ್ಲ. ಇಂತಹ ಸಂಗತಿಗಳು ನಮಗೆ ಮುಖ್ಯವಲ್ಲ. ಆತನಿಗೆ ಯಾವುದರಲ್ಲಾದರೂ ಆಸಕ್ತಿ ಇರುವುದು ಮುಖ್ಯ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಹಿಂದೂಗಳು ಮಾತ್ರ ಸಂಸ್ಕೃತವನ್ನು ಕಲಿಯಬೇಕು ಮತ್ತು ಮುಸ್ಲಿಮರು ಮಾತ್ರ ಉರ್ದುವನ್ನು ಕಲಿಯಬೇಕು ಎಂಬ ಈ ಚಿಂತನೆಗೆ ನಾವು ಕಟ್ಟುಬಿದ್ದವರಲ್ಲ ಹಾಗೂ ಅಂತಹ ಚಿಂತನೆಗೆ ಒಳಗಾಗುವುದಿಲ್ಲ. ಆತ ಪ್ರಾಥಮಿಕ ಮತ್ತು ಕಿರಿಯ ತರಗತಿಗಳಲ್ಲಿ ಈ ವಿಷಯವನ್ನು ಅಧ್ಯಯನ ಮಾಡುತ್ತಿದ್ದರೆ, ಆತ ಅದನ್ನು ಮತ್ತಷ್ಟು ಅಧ್ಯಯನ ಮಾಡಬಹುದು. ಅದರಲ್ಲಿ ತಪ್ಪೇನು? ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ” ಎಂದು ತಂದೆ ಸಲಾವುದ್ದೀನ್ ತನ್ನ ಮಗ ಸಂಸ್ಕೃತದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿರುವುದುಕ್ಕೆ ಹರ್ಷ ವ್ಯಕ್ತಪಡಿಸಿದರು. “ಆತ ಸಂಸ್ಕೃತ ಸಾಹಿತ್ಯವನ್ನು ಅಧ್ಯಯನ ಮಾಡಲು ಬಯಸುತ್ತಾನೆ ಮತ್ತು ಆತ ಉತ್ಸುಕನಾಗಿರುವ ಯಾವುದನ್ನಾದರೂ ಮಾಡುವುದನ್ನು ನಾನು ಎಂದಿಗೂ ತಡೆಯುವುದಿಲ್ಲ. ನಾನು ನನ್ನ ಮಗನ ಸಾಧನೆ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಎಂದು ಅವರು ಹೇಳಿದ್ದಾರೆ.
ಮಂಡಳಿಯ 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶಗಳನ್ನು ಲಕ್ನೋದಲ್ಲಿ ಬುಧವಾರ ಪ್ರಕಟಿಸಲಾಯಿತು.

ಒಬ್ಬನೇ ಮಗನಾದ ಇರ್ಫಾನ್ ಚಂದೌಲಿ ಜಿಲ್ಲೆಯ ಜಿಂದಾಸ್‌ಪುರ ಗ್ರಾಮದವನು. ಬಿಎ ಮುಗಿಸಿರುವ ತಂದೆ ಸಲಾವುದ್ದೀನ್ ಕೃಷಿ ಕಾರ್ಮಿಕ. ಇರ್ಫಾನ್ ಸಂಸ್ಕೃತದಲ್ಲಿ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡ ಎಂಬುದನ್ನು ವಿವರಿಸಿದ ಸಲಾವುದ್ದೀನ್, “ಸಂಸ್ಕೃತ ಕಡ್ಡಾಯ ವಿಷಯವಾಗಿದ್ದಾಗ ಜೂನಿಯರ್ ತರಗತಿಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ. ನಂತರ ಸಂಸ್ಕೃತ ಆತನಿಗೆ ಇಷ್ಟವಾಯಿತು ಮತ್ತು ಅದನ್ನು ಮುಂದುವರಿಸಲು ಬಯಸುವುದಾಗಿ ಹೇಳಿದ. ಅದು ಆತನ ಆಯ್ಕೆ, ಹಾಗಾಗಿ ಸಂಸ್ಕೃತ ಅಧ್ಯಯನಕ್ಕೆ ನಾನು ಪ್ರೋತ್ಸಾಹ ನೀಡಿದ್ದೆ. ಈಗ ಆತ ಸಂಸ್ಕೃತದಲ್ಲೇ ಶಾಸ್ತ್ರೀ (ಬಿ ಇಡಿಗೆ ಸಮಾನ) ಪದವಿ ಮತ್ತು ಆಚಾರ್ಯ (ಎಂಎಗೆ ಸಮಾನ) ಸ್ನಾತಕೋತ್ತರ ಪದವಿ ಮಾಡಲು ಬಯಸುತ್ತಾನೆ ಮತ್ತು ನಂತರ ಸಂಸ್ಕೃತ ಶಿಕ್ಷಕರಾಗಲು ಬಯಸಿದ್ದಾನೆ. ಅದಕ್ಕೆ ನಾನು ಅಡ್ಡಪಡಿಸುವುದಿಲ್ಲ. ಯಾಕೆಂದರೆ ಅದು ಅವನ ಆಯ್ಕೆ ಎಂದು ತಂದೆ ಸಲಾವುದ್ದೀನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ಇರ್ಫಾನ್ ಯಾವಾಗಲೂ ಓದಿನಲ್ಲಿ ಸ್ವಯಂ ಉತ್ಸಾಹಿತನಾಗಿರುತ್ತಾನೆ. ನಾವು ಅವನನ್ನು ಅಧ್ಯಯನ ಮಾಡಲು ಎಂದಿಗೂ ಒತ್ತಾಯಿಸಬೇಕಿಲ್ಲ. ನಮ್ಮ ಮನೆಯಲ್ಲಿ ಯಾರಿಗೂ ಸಂಸ್ಕೃತ ಗೊತ್ತಿಲ್ಲದ ಕಾರಣ ಆತನಿಗೆ ಸಂಸ್ಕೃತದ ಬಗ್ಗೆ ತಿಳಿದುಕೊಳ್ಳಲು ಮನೆಯಲ್ಲಿ ಯಾರ ಸಹಾಯವೂ ಇರಲಿಲ್ಲ. ಅವನು ಶಾಲೆಯಲ್ಲಿ ತನ್ನ ಶಿಕ್ಷಕರ ಸಹಾಯವನ್ನು ಪಡೆಯುತ್ತಿದ್ದ ಮತ್ತು ಪ್ರತಿದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಮನೆಯಲ್ಲಿಯೇ ಓದುತ್ತಿದ್ದ ಎಂದು ತಂದೆ ಹೇಳಿದರು.
ಇರ್ಫಾನ್ ಪ್ರಭುಪುರದ ಶ್ರೀ ಸಂಪೂರ್ಣಾನಂದ ಸಂಸ್ಕೃತ ಉಚ್ಚಾರ ಮಾಧ್ಯಮಿಕ ಶಾಲೆಯಲ್ಲಿ ಓದಿದ್ದಾನೆ. ಆತ ಯಾವಾಗಲೂ ಉತ್ತಮ ವಿದ್ಯಾರ್ಥಿಯಾಗಿದ್ದ. ಹಿಂದಿನ ಪರೀಕ್ಷೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾನೆ. ಅವನ ಸಾಧನೆಯಿಂದ ನಮಗೆ ಸಂತೋಷವಾಗಿದೆ ಎಂದು ಪ್ರಿನ್ಸಿಪಾಲ್ ಜೈ ಶ್ಯಾಮ್ ತ್ರಿಪಾಠಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement