ಕೇರಳದ ಪ್ರವಾಸಿ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿಕೆ : ನಿಯಮಗಳ ಉಲ್ಲಂಘನೆ

ಮಲಪ್ಪುರಂ : ಕೇರಳದ ಮಲಪ್ಪುರಂ ಜಿಲ್ಲೆಯ ಕಡಲತೀರದ ಬಳಿ ಭಾನುವಾರ ಸಂಜೆ ಡಬಲ್ ಡೆಕ್ಕರ್ ದೋಣಿ ಮುಳುಗಿದ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿದೆ. ಏಳು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಜಿಲ್ಲೆಯ ತಾನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೋಟ್ ಮಾಲೀಕನ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಣಿಯಲ್ಲಿದ್ದ ಪ್ರಯಾಣಿಕರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲವಾದರೂ, 40 ಮಂದಿ ಟಿಕೆಟ್‌ಗಳನ್ನು ಪಡೆದಿದ್ದರು ಮತ್ತು ಅನೇಕರು ಟಿಕೆಟ್‌ ಇಲ್ಲದೆ ಇದ್ದರು. ದೋಣಿಗೆ ಸುರಕ್ಷತಾ ಪ್ರಮಾಣ ಪತ್ರವೂ ಇರಲಿಲ್ಲ ಎಂದು ವರದಿಯಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ನಾಪತ್ತೆಯಾದವರನ್ನು ಪತ್ತೆ ಹಚ್ಚಲು ನೀರೊಳಗಿನ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಈ ಘಟನೆಗೆ ರಾಜಕೀಯ ವಲಯದಾದ್ಯಂತ ನಾಯಕರು ತಮ್ಮ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ. ಮೃತರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ಸಂಭವಿಸಿದ ದೋಣಿ ದುರಂತದಿಂದ ಪ್ರಾಣಹಾನಿಯಿಂದ ನೋವಾಗಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪ. ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹ 2 ಲಕ್ಷ ಪರಿಹಾರವನ್ನು ನಿಧನರಾದ ಪ್ರತಿಯೊಬ್ಬರ ಸಮೀಪದ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಕಾಂಗ್ರೆಸ್ ನಾಯಕ ಮತ್ತು ವಯನಾಡ ಮಾಜಿ ಸಂಸದ ರಾಹುಲ್ ಗಾಂಧಿ ಕೂಡ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇಂದು, ಸೋಮವಾರ ಸ್ಥಳಕ್ಕೆ ಭೇಟಿ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮಲಪ್ಪುರಂ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಪೊಲೀಸ್, ಅಗ್ನಿಶಾಮಕ ಮತ್ತು ಆರೋಗ್ಯಾಧಿಕಾರಿಗಳು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಸಂತ್ರಸ್ತರಿಗೆ ಗೌರವ ಸೂಚಕವಾಗಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡುವುದರೊಂದಿಗೆ ಸೋಮವಾರವನ್ನು ಶೋಕಾಚರಣೆಯ ದಿನವನ್ನಾಗಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಪೊಲೀಸರ ಪ್ರಕಾರ, ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement