ಕೊಲ್ಲಂ (ಕೇರಳ): ಆಘಾತಕಾರಿ ಘಟನೆಯೊಂದರಲ್ಲಿ, ಬುಧವಾರ ಕೇರಳದ ಕೊಟ್ಟಾರಕ್ಕರದ ಆಸ್ಪತ್ರೆಯೊಂದರಲ್ಲಿ ಕುಡಿದ ಮತ್ತಿನಲ್ಲಿದ್ದ ಆರೋಪಿಯೊಬ್ಬ ಯುವ ವೈದ್ಯೆಯ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ ಪರಿಣಾಮ ವೈದ್ಯೆ ಸಾವಿಗೀಡಾಗಿದ್ದಾಳೆ.
ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ದಾಳಿಕೋರ ಶಾಲಾ ಶಿಕ್ಷಕ ಎಂದು ಹೇಳಲಾಗಿದೆ. ಮೃತ ವೈದ್ಯೆಯನ್ನು ಹೌಸ್ ಸರ್ಜನ್ ಡಾ.ವಂದನಾ ದಾಸ ಎಂದು ಗುರುತಿಸಲಾಗಿದೆ. ಮದ್ಯದ ಅಮಲಿನಲ್ಲಿದ್ದ ಹಾಗೂ ನರೆಹೊರೆಯವರೊಂದಿಗೆ ಜಗಳ ಮಾಡಿಕೊಂಡು ಗಾಯಗೊಂಡಿದ್ದ ಈ ವ್ಯಕ್ತಿಯನ್ನು ದೂರಿನ ನಂತರ ಪೊಲೀಸರು ಬಂಧಿಸಿದ್ದರು. ನಂತರ ವೈದ್ಯಕೀಯ ಪರೀಕ್ಷೆಗಾಗಿ ಈ ಆರೋಪಿಯನ್ನು ಆಸ್ಪತ್ರೆಗೆ ಕರೆತಂದಾಗ ಈ ಘಟನೆ ನಡೆದಿದೆ. ವೈದ್ಯೆ ಆತನ ಗಾಯಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ಆತ ವೈದ್ಯೆಯನ್ನು ಕತ್ತರಿಯಿಂದ ಇರಿದಿದ್ದಾನೆ ಎಂದು ಹೇಳಲಾಗಿದೆ.
22ರ ಹರೆಯದ ವೈದ್ಯೆಯ ಮೇಲೆ ಸರ್ಜಿಕಲ್ ಕತ್ತರಿಯಿಂದ ಹಲ್ಲೆ ನಡೆಸಿ ಬೆನ್ನಿಗೆ ಆರು ಬಾರಿ ಇರಿದಿದ್ದಾನೆ. ಆರೋಪಿಯು ಪೊಲೀಸರು ಮತ್ತು ಇಬ್ಬರು ಆಸ್ಪತ್ರೆ ಭದ್ರತಾ ಸಿಬ್ಬಂದಿ ಸೇರಿದಂತೆ ಇನ್ನೂ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾನೆ.
ಆರೋಪಿ ಆಲ್ಕೋಹಾಲ್ ಸೇವಿಸಿದ್ದ ಮತ್ತು ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಹಿಂಸಾತ್ಮಕವಾಗಿದ್ದ. ಆತನ ಗಾಯವನ್ನು ಡ್ರೆಸ್ ಮಾಡುವಾಗ ನಮ್ಮನ್ನು ಕೋಣೆಗೆ ಅನುಮತಿಸದ ಕಾರಣ ವೈದ್ಯರೊಂದಿಗೆ ಆತ ಮಾತ್ರ ಇದ್ದ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದ್ದಕ್ಕಿದ್ದಂತೆ, ಗಲಾಟೆಯಾಯಿತು ಮತ್ತು ವೈದ್ಯರು ಸಹಾಯಕ್ಕಾಗಿ ಕಿರುಚುತ್ತಾ ಓಡಿಹೋದರು, ಕತ್ತರಿ ಮತ್ತು ಚಿಕ್ಕಚಾಕು ಹಿಡಿದಿದ್ದ ಆರೋಪಿ ‘ನಾನು ನಿನ್ನನ್ನು ಕೊಲ್ಲುತ್ತೇನೆ’ ಎಂದು ಕೂಗುತ್ತಿದ್ದ ಎಂದು ಅಧಿಕಾರಿ ಹೇಳಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ತಡೆಯಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ವೈದ್ಯರಲ್ಲದೆ, ಇತರ ನಾಲ್ವರು ಗಾಯಗೊಂಡಿದ್ದಾರೆ, ಆತ ಆಸ್ಪತ್ರೆಯಲ್ಲಿ ಕೆಲವಷ್ಟನ್ನು ಧ್ವಂಸಗೊಳಿಸಿದ್ದಾನೆ ಎಂದು ಅಧಿಕಾರಿ ಹೇಳಿದರು.
ನಂತರ ಆತನನ್ನು ಬಹಳ ಕಷ್ಟದಿಂದ ಹಿಡಿದು ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿ ಹೇಳಿದರು. ತೀವ್ರವಾಗಿ ಗಾಯಗೊಂಡ ವೈದ್ಯರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯೆ ಡಾ.ದಾಸ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವೈದ್ಯರಿಂದ ಪ್ರತಿಭಟನೆಗೆ ಕರೆ
ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಯುವ ವೈದ್ಯೆಯ ಸಾವು ಕೇರಳದ ವೈದ್ಯಕೀಯ ವಲಯದಾದ್ಯಂತ ಆಘಾತ ಅಲೆಗಳನ್ನು ಕಳುಹಿಸಿದೆ. ದುರಂತ ಸಾವಿನ ಬಗ್ಗೆ ಆಘಾತ ಮತ್ತು ಕೋಪವನ್ನು ವ್ಯಕ್ತಪಡಿಸಿ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕೇರಳ ವಿಭಾಗವು ಗುರುವಾರ ರಾಜ್ಯಾದ್ಯಂತ ವೈದ್ಯರ ಪ್ರತಿಭಟನೆಗೆ ಕರೆ ನೀಡಿದೆ.ರೋಗಿಗಳು ಮತ್ತು ಅವರ ಸಂಬಂಧಿಕರಿಂದ ವೈದ್ಯಕೀಯ ವೃತ್ತಿಪರರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.
ಇಂತಹ ಘಟನೆಗಳು ಹೆಚ್ಚುತ್ತಿದ್ದರೂ ಅಧಿಕಾರಿಗಳು ವೈದ್ಯರಿಗೆ ಅವರ ಕೆಲಸದ ಸ್ಥಳದಲ್ಲಿ ಸೂಕ್ತ ಸುರಕ್ಷತೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ