ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮಪಟ್ಟಿದ್ದೇನೆ, ಎಲ್ಲರೂ ನನಗೆ ಸಹಕಾರ ಕೊಟ್ಟು, ಆಶೀರ್ವಾದ ಮಾಡ್ತಾರೆ : ಡಿಕೆ ಶಿವಕುಮಾರ ಹೇಳಿಕೆಯ ಮರ್ಮವೇನು..?

ಬೆಂಗಳೂರು: ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ದಿನದಿಂದಲೇ ನಿದ್ದೆ ಮಾಡದೆ ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮ ಪಟ್ಟು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಹಿರಿಯರು-ಕಿರಿಯರು ಸೇರಿದಂತೆ ಎಲ್ಲರೂ ನನಗೆ ಆಶೀರ್ವಾದ ಮಾಡುತ್ತಾರೆ, ಕಾಂಗ್ರೆಸ್ ಉತ್ತಮ ಸರ್ಕಾರ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾರ್ಮಿಕವಾಗಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದೆ ಅಧ್ಯಕ್ಷರಾಗಿದ್ದ ದಿನೇಶ ಗುಂಡೂರಾವ್ ಅವರು ತಮ್ಮಿಂದ ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದ್ದರು. ಉಪ ಚುನಾವಣೆ ಫಲಿತಾಂಶ ಬಳಿಕ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಮುಂದೆ ಬಂದರು. ಅಂತಹ ಸಂದರ್ಭದಲ್ಲಿ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಅವರು ನನಗೆ ಜವಾಬ್ದಾರಿ ನೀಡಿದರು. ಅಂದಿನಿಂದ ನಾನು ನಿದ್ದೆ ಮಾಡಿಲ್ಲ, ಪಕ್ಷದ ಕಾರ್ಯಕರ್ತರಿಗೆ ಸಹ ನಿದ್ದೆ ಮಾಡಲು ಬಿಡದೆ ಕೆಲಸ ಮಾಡಿದ್ದೇನೆ. ಪಕ್ಷಕ್ಕಾಗಿ ಶ್ರಮ ಪಟ್ಟಿದ್ದೇನೆ. ಎಲ್ಲರೂ ಸಹಕಾರ ಕೊಡುತ್ತಾರೆ. ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಆಶೀರ್ವಾದ ಮಾಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

“ಸದ್ಯ ಯಾವುದೇ ರೀತಿಯ ಅಧಿಕಾರ ಹಂಚಿಕೆ ಚರ್ಚೆ ನಡೆದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಏನು ತೀರ್ಮಾನ ಮಾಡುತ್ತಾರೋ ಅದೇ ಅಂತಿಮ” ಎಂದು ಅವರು ತಿಳಿಸಿದರು.
ಫಲಿತಾಂಶದಲ್ಲಿ ಎಷ್ಟೆ ನಂಬರ್ ಬಂದರೂ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕಪ್ ಅನ್ನು ಅವರನ್ನೇ ಇಟ್ಟುಕೊಳ್ಳಲಿ, ಸರ್ಕಾರ ನಾವು ಮಾಡುತ್ತೇವೆ. ಬಿಜೆಪಿಯವರು ಹಿಂದೆಲ್ಲಾ ಏನು ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ಅದಕ್ಕಾಗಿಯೇ ಎಲ್ಲಾ ಪಕ್ಷಗಳು ತಮ್ಮ ಶಾಸಕರನ್ನು ಒಂದೆಡೆ ಇಟ್ಟುಕೊಳ್ಳಲು ಬಯಸುತ್ತವೆ ಎಂದರು.
ರೆಸಾರ್ಟ್ ರಾಜಕಾರಣ 25 ವರ್ಷದ ಹಿಂದೆಯೇ ಮುಗಿದು ಹೋಗಿದೆ. ರಾಜಕೀಯ ಪಕ್ಷಗಳು ತಮ್ಮೆಲ್ಲಾ ಶಾಸಕರನ್ನು ಒಂದೆಡೆ ಸೇರಿಸಿಕೊಳ್ಳುವುದು ಸಾಮಾನ್ಯ. ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ಪಕ್ಷಗಳು ಇದನ್ನೇ ಮಾಡುತ್ತವೆ. ಒಂದೆಡೆ ಸೇರಿ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ಸಿನಲ್ಲಿ ಗೆದ್ದವರು ರೆಸಾರ್ಟಿಗೆ ಹೋಗುವ ಸುಳಿವು ನೀಡಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement