100 ಗಂಟೆಯಲ್ಲಿ 100 ಕಿ.ಮೀ ರಸ್ತೆ ನಿರ್ಮಾಣ… ವಿಶ್ವ ದಾಖಲೆಯ ಈ ರಸ್ತೆ ನಿರ್ಮಾಣ ಭಾರತದಲ್ಲೇ ನಡೆಯಿತು…!

ನವದೆಹಲಿ : ಘಾಜಿಯಾಬಾದ್-ಅಲಿಗಢ ಎಕ್ಸ್‌ಪ್ರೆಸ್‌ವೇಯಲ್ಲಿ 100 ಗಂಟೆಗಳ ಸಮಯದಲ್ಲಿ 100 ಕಿಲೋಮೀಟರ್ ರಸ್ತೆಯನ್ನು ‘ಬಿಟುಮಿನಸ್‌ ಕಾಂಕ್ರಿಟ್‌’ ಮೂಲಕ ನಿರ್ಮಿಸಲಾಗಿದ್ದು ಇದು ವಿಶ್ವದಾಖಲೆಯಾಗುವ ಮೂಲಕ ಗಮನ ಸೆಳೆದಿದೆ.
ಈ ಸಾಧನೆಯು ಭಾರತದ ರಸ್ತೆ ಮೂಲಸೌಕರ್ಯ ಉದ್ಯಮದ ಸಮರ್ಪಣೆ ಮತ್ತು ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದರ ಸಂಭ್ರಮಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 118 ಕಿಲೋಮೀಟರ್ ವ್ಯಾಪಿಸಿರುವ NH34 ರ ಗಾಜಿಯಾಬಾದ್-ಅಲಿಗಢ್ ವಿಭಾಗವು ಜನನಿಬಿಡ ಪ್ರದೇಶಗಳಾದ ಗಾಜಿಯಾಬಾದ್ ಮತ್ತು ಅಲಿಗಢ್ ನಡುವಿನ ಸಾರಿಗೆ ಸಂಪರ್ಕವಾಗಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಈ ಯೋಜನೆಯು ದಾದ್ರಿ, ಗೌತಮ್ ಬುದ್ಧ ನಗರ, ಸಿಕಂದರಾಬಾದ್, ಬುಲಂದ್‌ಶಹರ್ ಮತ್ತು ಖುರ್ಜಾ ಸೇರಿದಂತೆ ಉತ್ತರ ಪ್ರದೇಶದ ವಿವಿಧ ಪಟ್ಟಣಗಳು ಮತ್ತು ನಗರಗಳನ್ನು ಹಾದಹೋಗಲಿದೆ. ಹೆದ್ದಾರಿ ಯೋಜನೆಗಾಗಿ ಸಿಸಿಪಿಆರ್ ತಂತ್ರಜ್ಞಾನವನ್ನು ಬಳಸಲಾಯಿತು. ಈ ಯೋಜನೆಯಲ್ಲಿ ಕೋಲ್ಡ್ ಸೆಂಟ್ರಲ್ ಪ್ಲಾಂಟ್ ರೀಸೈಕ್ಲಿಂಗ್ (CCPR) ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಸುಸ್ಥಿರತೆ ಮತ್ತು ವೆಚ್ಚ-ಪರಿಣಾಮಕಾರಿತ್ವದ ಬದ್ಧತೆಯನ್ನು ಗಡ್ಕರಿ ಒತ್ತಿ ಹೇಳಿದರು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಕೋಲ್ಡ್ ಸೆಂಟ್ರಲ್ ಪ್ಲಾಂಟ್ ಮರುಬಳಕೆಗಾಗಿ, ನಿರ್ಮಾಣ ಸ್ಥಳದ ಬಳಿ ಚಲಿಸುವ ಕೋಲ್ಡ್-ಮಿಕ್ಸ್ ಮರುಬಳಕೆ ಮಿಶ್ರಣ ಘಟಕವನ್ನು ಸ್ಥಾಪಿಸಲಾಗಿದೆ. ಮರುಬಳಕೆ ಮಾಡಬೇಕಾದ ವಸ್ತುಗಳನ್ನು ಟ್ರಕ್ ಮೂಲಕ ಈ ಸ್ಥಾವರಕ್ಕೆ ತರಲಾಗುತ್ತದೆ, ಸಂಸ್ಕರಿಸಲಾಗುತ್ತದೆ ಮತ್ತು ಉತ್ತಮ ಗುಣಮಟ್ಟದ ಸಿದ್ಧಪಡಿಸಿದ ಉತ್ಪನ್ನವಾಗಿ ಸಿದ್ಧವಾದ ನಂತರ ಟ್ರಕ್ ಮೂಲಕ ನಿರ್ಮಾಣ ಸ್ಥಳಕ್ಕೆ ಸಾಗಿಸಲಾಗುತ್ತದೆ ಮತ್ತು ನೇರವಾಗಿ ರಸ್ತೆ ಮೇಲ್ಮೈಯನ್ನು ಸುಗಮಗೊಳಿಸಲು ಬಳಸಲಾಗುತ್ತದೆ.
ಕೋಲ್ಡ್ ಸೆಂಟ್ರಲ್ ಪ್ಲಾಂಟ್ ರೀಸೈಕ್ಲಿಂಗ್ (CCPR) ಮೂಲಕ ಉತ್ತಮ ಗುಣಮಟ್ಟದ ಆರ್ಥಿಕ ರಸ್ತೆಗೆ ಬೇಕಾದ ವಸ್ತುವನ್ನು ಉತ್ಪಾದಿಸಬಹುದು, ಹೀಗಾಗಿ ಕಚ್ಚಾ ವಸ್ತುಗಳ ಬಳಕೆಯನ್ನು ಕೇವಲ ಶೇ.10ಕ್ಕೆ ಇಳಿಸಲಾಗಿದೆ ಎಂದರು.
“ಈ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ಇಂಧನ ಬಳಕೆ ಮತ್ತು ಸಂಬಂಧಿತ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದೇವೆ ಎಂದು ಗಡ್ಕರಿ ಹೇಳಿದರು.
ಈ ಮೊದಲು ಇಂಥ ತಂತ್ರಜ್ಞಾನ ಬಳಸಿಕೊಂಡು 75 ಗಂಟೆಗಳಲ್ಲಿ 75 ಕಿ.ಮೀ ರಸ್ತೆ ನಿರ್ಮಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು ಎಂದು ಮೂಲಗಳು ಹೇಳಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement