ಇನ್ಮುಂದೆ ದೆಹಲಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುವಂತಿಲ್ಲ ; ಮೂರು ಹೊಸ ಸ್ಥಳಗಳು ನಿಗದಿ

ನವದೆಹಲಿ: ದೆಹಲಿಯ ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದ ಜಂತರ್ ಮಂತರ್‌ನಲ್ಲಿ ಇನ್ನು ಮುಂದೆ ಪ್ರತಿಭಟನೆ ನಡೆಸಲು ಅವಕಾಶ ಇರುವುದಿಲ್ಲ. ಇದುವರೆಗೆ ಪ್ರತಿಭಟನೆಗಳಿಗೆ ನಿಗದಿಯಾಗಿದ್ದ ಸ್ಥಳವಾಗಿದ್ದ, ದೆಹಲಿಯ ಅತ್ಯಂತ ಭದ್ರತೆಯ ಕೇಂದ್ರ ಪ್ರದೇಶದಲ್ಲಿರುವ ಜಂತರ್ ಮಂತರ್ ಬದಲು ಈಗ ಪ್ರತಿಭಟನೆ ಮತ್ತು ಧರಣಿಗಳನ್ನು ನಡೆಸಲು ದೆಹಲಿಯಲ್ಲಿ ಮೂರು ಹೊಸ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ರಚಿಸಲಾಗಿದ್ದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸದಾಗಿ ಪ್ರತಿಭಟನೆಗಳಿಗೆ ನಿಗದಿಪಡಿಸಿರುವ ಮೂರು ಸ್ಥಳಗಳೆಂದರೆ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ (CBD) ಮೈದಾನ.
ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಪ್ರತಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟ ಹಾಗೂ ವಿಡಂಬನಾತ್ಮಕ ರಾಜಕೀಯ ಸಂಘಟನೆಯಾದ ಕಾಕ್ರೋಚ್‌ ಜನತಾ ಪಾರ್ಟಿ (CJP) ಕೇಂದ್ರ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದರಿಂದಾಗಿ ಜಂತರ್ ಮಂತರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಜಂತರ್ ಮಂತರ್ ಹಲವು ಪ್ರಮುಖ ಸರ್ಕಾರಿ ಕಚೇರಿಗಳ ಸಮೀಪದಲ್ಲಿರುವುದರಿಂದ, ಅಲ್ಲಿ ಪ್ರತಿಭಟನೆಗಳನ್ನು ನಿಷೇಧಿಸುವ ನಿರ್ಧಾರವು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬಹುದು.
ಜಂತರ್ ಮಂತರ್ ಅನ್ನು ಪ್ರತಿಭಟನೆಗಳಿಗೆ ಮೀಸಲಾದ ಸ್ಥಳಗಳ ಪಟ್ಟಿಯಿಂದ ಕೈಬಿಡುವ ಆದೇಶವನ್ನು ದೆಹಲಿ ಪೊಲೀಸ್ ಆಯುಕ್ತ ಅನುರಾಗಕುಮಾರ ಹೊರಡಿಸಿದ್ದಾರೆ. “ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರತಿಭಟನೆಗಳು ಮತ್ತು ಧರಣಿಗಳನ್ನು ಆಯೋಜಿಸಲು ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಹೊಸ ಸ್ಥಳಗಳಾಗಿ ಗುರುತಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸದಾಗಿ ನಿಗದಿಪಡಿಸಿರುವ ಮೂರು ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (ಎಸ್‌ಒಪಿ) ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಹುಲ್‌ ಗಾಂಧಿಗೆ ಭೇಟಿಯಾಗಲು ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement