ಇಂಫಾಲ: ಮಣಿಪುರ ಸೋಮವಾರ (ಮೇ 22) ಮತ್ತೆ ಉದ್ವಿಗ್ನಗೊಂಡಿದೆ. ಇಂಫಾಲ ಜಿಲ್ಲೆಯಲ್ಲಿ ಉದ್ರಿಕ್ತ ಗುಂಪುಗಳು ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ.
ಮಣಿಪುರ ಹಿಂಸಾಚಾರ ವರದಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಮತ್ತೆ ನಿಷೇಧಾಜ್ಞೆ ಜಾರಿಗೊಳಿಸಿದೆ.
ಇದಕ್ಕೂ ಮೊದಲು ನಿಷೇಧಾಜ್ಞೆಯನ್ನು ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಸಡಿಲಿಸಲಾಗಿತ್ತು. ಇಂಫಾಲದ ನ್ಯೂ ಚೆಕಾನ್ ಬಜಾರ್ ಪ್ರದೇಶದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳು ಮುಖಾಮುಖಿಯಾದ ನಂತರ ಮಣಿಪುರ ಸಂಘರ್ಷ ಉಂಟಾಗಿದ್ದು, ಪ್ರದೇಶದಲ್ಲಿ ಮತ್ತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮತ್ತೆ ಹಿಂಸಾಚಾರದ ಹಿನ್ನೆಲೆಯಲ್ಲಿ ಅಂತರ್ಜಾಲ ಸೇವೆ ಸ್ಥಗಿತವನ್ನು ಇನ್ನೂ ಐದು ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಾರಗಳಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇ 3ರಂದು ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡುವ ಮೈತಿ ಸಮುದಾಯದ ಬೇಡಿಕೆ ಖಂಡಿಸಿ ಕುಕಿ ಬುಡಕಟ್ಟು ಏಕತಾ ಮೆರವಣಿಗೆ ನಡೆಸಿದ ನಂತರ ಘರ್ಷಣೆಗಳು ಆರಂಭವಾಗಿವೆ. ಮೀಸಲು ಅರಣ್ಯ ಪ್ರದೇಶದಿಂದ ಕುಕಿ ಬುಡಕಟ್ಟು ಸಮುದಾಯವನ್ನು ಹೊರಹಾಕಲಾಗುತ್ತಿದೆ ಎಂದು ಆರೋಪಿಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ