ವಿದ್ಯುತ್ ಉಚಿತ, ಮನೆ ಯಜಮಾನಿಗೆ 2000 ರೂ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್​, ಯುವನಿಧಿ ; ಐದು ಗ್ಯಾರಂಟಿಗಳಿಗೆ ಸಚಿವ ಸಂಪುಟ ಒಪ್ಪಿಗೆ- ಯಾವಾಗ ಆರಂಭ?

ಬೆಂಗಳೂರು: ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್​ ನೀಡಿದ ಗ್ಯಾರಂಟಿಗಳನ್ನು (Congress Guarantee) ತಪ್ಪದೇ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಜುಲೈ ತಿಂಗಳಿನಿಂದ 200 ಯೂನಿಟ್ ವರೆಗೆ ವಿದ್ಯುತ್ ಉಚಿತ, ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನದಂದು ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮನೆಯ ಒಡತಿಗೆ ಪ್ರತಿ ತಿಂಗಳು 2,000 ರೂ. ಹಣ ಖಾತೆಗೆ ಜಮಾ. ಜುಲೈ 1ರಿಂದ ಬಿಪಿಎಲ್, ಎಪಿಎಲ್ ಕಾರ್ಡ್ ನ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಜೂನ್ 11ರಿಂದ ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಹಾಗೂ ಯುವನಿಧಿ ಯೋಜನೆಯ ಅಡಿಯಲ್ಲಿ ಪದವೀಧರರಿಗೆ 3000 ರೂ ಹಾಗೂ ಡಿಪ್ಲೋಮಾ ಆದವರಿಗೆ 1,500 ರೂ.ಗಳನ್ನು ಮುಂದಿನ 24 ತಿಂಗಳವರೆಗೆ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಿದ್ದಾರೆ.
ಗೃಹಜ್ಯೋತಿ
ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಯಾರು 200 ಯುನಿಟ್​ ಒಳಗಡೆ ವಿದ್ಯುತ್​ ಬಳಸುತ್ತಾರೆಯೋ ಅವರು ಬಿಲ್​ ಕಟ್ಟಬೇಕಿಲ್ಲ. ಜುಲೈ 1 ರಿಂದ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಯಾರು ಎಷ್ಟು ವಿದ್ಯುತ್ ಬಳಸ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ ಶೇ.10 ರಷ್ಟರವರೆಗಿನ ವಿದ್ಯುತ್ ಉಚಿತ. ಜುಲೈ 1 ರಿಂದ ಆಗಸ್ಟ್ ವರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್ ನಲ್ಲಿ ಬರಲಿದೆ. ಜುಲೈವರೆಗಿನ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ ಅವರೇ ಕಟ್ಟಬೇಕು. ಅದನ್ನು ಸರ್ಕಾರ ಕಟ್ಟುವುದಿಲ್ಲ ಎಂದು ತಿಳಿಸಿದರು.
ಗೃಹಲಕ್ಷ್ಮಿ
ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಪ್ರಕಾರ, ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ನೀಡುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ , ಮನೆ ಯಜಮಾನಿಯ ಖಾತೆಗೆ ತಿಂಗಳಿಗೆ 2000 ಸಾವಿರ ರೂ. ಹಾಕುತ್ತೇವೆ. ಇದಕ್ಕಾಗಿ ಅವರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಜೂನ್​ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮನೆ ಯಜಮಾನಿ ಕಡ್ಡಾಯವಾಗಿ ಆಧಾರ್​ ಕಾರ್ಡ್​​, ಬ್ಯಾಂಕ್​ ಅಕೌಂಟ್​ ಪಾಸ್​ಬುಕ್​ ಝೆರಾಕ್ಸ್​ ನೀಡಬೇಕಾಗುತ್ತದೆ. ಎಪಿಎಲ್​ ಮತ್ತು ಬಿಪಿಎಲ್​​ ಕಾರ್ಡ್​ದಾರರಿಗೂ ಕೂಡ ಈ ಯೋಜನೆ ಅನ್ವಯವಾಗುತ್ತದೆ. ಜುಲೈ ವರೆಗೆ ದಾಖಲೆ ಸಂಗ್ರಹಿಸಿ ಮನೆ ಯಜಮಾನಿಗೆ 2000 ರೂ. ಸಹಾಯಧನ ವಿತರಣೆಯನ್ನು ಸ್ವಾತಂತ್ರ್ಯೋತ್ಸವದ ದಿನ (ಆಗಸ್ಟ್ 15) ಆರಂಭಿಸುತ್ತೇವೆ ಎಂದು ತಿಳಿಸಿದರು.
ಸಾಮಾಜಿಕ ಭದ್ರತಾ ಸೇವೆಗಳಡಿ ಪಿಂಚಣಿ ಪಡೆಯುವವರಿಗೂ ಅದರ ಜೊತೆಗೆ ಇದೂ ಸಿಗಲಿದೆ. ಆದರೆ, ಸರ್ಕಾರದ ನಿವೃತ್ತ ನೌಕರರ ಪಿಂಚಣಿ ಪಡೆಯುತ್ತಿರುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ ಎಂದ ಅವರು, ತಾಂತ್ರಿಕ ಕಾರಣದಿಂದ ಎರಡು ತಿಂಗಳು ಗೃಹ ಲಕ್ಷ್ಮಿ ಯೋಜನೆ ವಿಳಂಬವಾಗಲಿದೆ. ಇದಕ್ಕಾಗಿ ಪ್ರತ್ಯೇಕ ಸಾಫ್ಟ್ ವೇರ್ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅನ್ನಭಾಗ್ಯ….
ಜುಲೈ 1ರಿಂದ ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ. ಜುಲೈ.1 ರಿಂದ ಬಿಪಿಎಲ್ ಹಾಗೂ ಅಂತ್ಯೋದಯ ಅನ್ನ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಯುವನಿಧಿ…
2022-23 ರಲ್ಲಿ ತೇರ್ಗಡೆ ಹೊಂದಿದ ವೃತ್ತಿಶಿಕ್ಷಣವೂ ಸೇರಿ ಎಲ್ಲ ಪದವೀಧರರು ನೋಂದಣಿ ಮಾಡಿಕೊಂಡ ದಿನದಿಂದ 24 ತಿಂಗಳು (2 ವರ್ಷ) ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನೀಡಲಾಗುವುದು. ಅಷ್ಟರೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. ಉದ್ಯೋಗ ಸಿಕ್ಕರೆ ಇದು ಸ್ಥಗಿತವಾಗಲಿದೆ. ಯುವಕ, ಯುವತಿ ಹಾಗೂ ತೃತೀಯಲಿಂಗಿಗಳಿಗೂ ಅನ್ವಯ. ಜಾತಿ, ಧರ್ಮ , ಲಿಂಗ ಬೇಧವಿಲ್ಲದೇ ಸಹಾಯನಿಧಿ ನೀಡಲಾಗುತ್ತದೆ. ಇದಕ್ಕೆ ಅರ್ಜಿ ಹಾಕಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಉಚಿತ ಬಸ್​ ಪ್ರಯಾಣ…
ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್‌ 11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್ ಪ್ರೆಸ್, (ಎಸಿ, ನಾನ್ ಎಸಿ ಸ್ಲೀಪರ್, ಲಕ್ಸ್ಯುರಿ, ರಾಜಹಂಸ ಬಸ್ ಹೊರತುಪಡಿಸಿ) ಉಚಿತ ಪ್ರಯಾಣ. ರಾಜ್ಯದ ಒಳಗಡೆಗೆ ಮಾತ್ರ ಈ ಸೌಲಭ್ಯ ಇರಲಿದೆ. ಕೆಎಸ್ಆರ್ಟಿಸಿಯಲ್ಲಿ ಶೇ.50 ರಷ್ಟು ಆಸನ ಪುರುಷರಿಗೆ ಮೀಸಲಿರಲಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಶಿರಸಿ: ಕಚೇರಿಗೆ ತೆರಳಿ ಬಿಜೆಪಿ ಸಂಸದ ಕಾಗೇರಿ ಅಭಿನಂದಿಸಿದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement